ನನಗಾಗ ಇಂಗ್ಲಿಷಿನ ಪದಗಳಿಗೆ ಅರ್ಥವಷ್ಟೇ ಗೊತ್ತಾಗುತ್ತಿತ್ತು. ಆಗಲೇ ಗುರುಗಳು- ವಾಟ್ ಈಸ್ ಯುವರ್ ಫಾದರ್ ಎಂದು ಕೇಳಿಬಿಡಬೇಕೆ? ಅದರ ಕನ್ನಡಾರ್ಥ- “ನಿಮ್ಮಪ್ಪ ಏನು?’ ಎಂದಿರಬೇಕು ಎಂದೇ ಯೋಚಿಸಿ, ಉತ್ತರಿಸಲು ಬಾಯೆ¤ರೆದೆ…
ಕನ್ನಡ ಮಾಧ್ಯಮದಲ್ಲಿ ಕಲಿಯುತ್ತಿದ್ದ ನಮಗೆ, ಐದನೆಯ ತರಗತಿಯಿಂದ ಇಂಗ್ಲೀಷ್ ಒಂದು ಭಾಷೆಯಾಗಿ ಪರಿಚಯವಾಯಿತು. ಅಲ್ಲಿಯ ತನಕ ಮನೆಯಲ್ಲಿ ಸೋದರತ್ತೆಯರು, ಚಿಕ್ಕಪ್ಪಂದಿರು ಕಾಲೇಜಿನ ನೋಟ್ಸೆನಲ್ಲಿ ಇಂಗ್ಲೀಷ್ ಅನ್ನು ಕೂಡಿಸಿ ಬರೆಯುವುದನ್ನೇ ಬೆರಗಿನಿಂದ ನೋಡುತ್ತಿದ್ದ ನನಗೆ ಅದೊಂದು ತಮಾಷೆಯಾಗಿ ಕಾಣುತ್ತಿತ್ತು. ನಾನೂ ಒಂದು ಪುಸ್ತಕ ತೆಗೆದುಕೊಂಡು ಆಸ್ಪತ್ರೆಯಲ್ಲಿ ಮಾನಿಟರ್‌ನಲ್ಲಿ ರೋಗಿಯ ಉಸಿರಾಟ ದಾಖಲಾಗುವ ಹಾಗೆ ಗೆರೆಗಳನ್ನು ಮೇಲೆ ಕೆಳಗೆ ಎಳೆಯುತ್ತಾ ಬರೆದು ಅಪ್ಪನಿಗೆ ಇಂಗ್ಲೀಷ್ ಬರೆದಿದ್ದನ್ನು ತೋರಿಸಿದಾಗ ಅವರು ನಗುತ್ತಾ “ಚೆನ್ನಾಗಿದೆ’ ಅಂದಿದ್ದರು. ಆ ಮಾತು ಕೇಳಿ ನನಗೆ ಏನೋ ಸಂತೋಷ.
ಹೈಸ್ಕೂಲಿಗೆ ಬಂದಾಗ, ಅಪ್ಪ ನಮ್ಮನ್ನು ಇಂಗ್ಲೀಷ್ ಮೀಡಿಯಮ್‌ಗೆ ಸೇರಿಸಿಬಿಟ್ಟರು. ಆಗ ಶುರುವಾಯ್ತು ನೋಡಿ ನಿಜವಾದ ಫಜೀತಿ. ಬರೀ “ವಾಟ್ ಈಸ್ ಯುವರ್ ನೇಮ್’, “ವಾಟ್ ಈಸ್ ದಿಸ್’ ಗೆ ಉತ್ತರಿಸಲು ಮಾತ್ರ ಗೊತ್ತಿದ್ದ ನನಗೆ ಗುರುಗಳು “ವಾಟ್ ಈಸ್ ಯುವರ್ ಫಾದರ್?’ ಅಂತಾ ಪ್ರಶ್ನೆ ಕೇಳಿದ ತಕ್ಷಣ, ನನಗೆ ತಲೆ ಕೆರೆದುಕೊಳ್ಳುವಂತಾಯಿತು. ನಮ್ಮಪ್ಪ ಏನು? ಅಂದರೆ ನಾನು ತಾನೇ ಏನೆಂದು ಉತ್ತರ ಕೊಡಬೇಕು ಹೇಳಿ! ಮತ್ತೂಮ್ಮೆ ಅದೇ ಪ್ರಶ್ನೆ ಕೇಳಿದಾಗ “ಮೈ ಫಾದರ್ ಈಸ್ ಮೈ ಫಾದರ್ ಸರ್’ ಅಂದೆ. ನಮ್ಮಪ್ಪ ನನಗೆ ಅಪ್ಪನೇ ಎಂಬ ನನ್ನ ಉತ್ತರ ಕೇಳಿ ಗುರುಗಳಿಗೂ ನಗು ತಡೆಯಲಾಗಲಿಲ್ಲ.
ಮತ್ತೂಂದು ದಿನ ಶಾಲೆಗೆ ಪೆನ್ನು ಮರೆತು ಹೋಗಿದ್ದೆ. ಪಕ್ಕದಲ್ಲಿದ್ದ ಇಂಗ್ಲೀಷ್ ಮೀಡಿಯಂ ಓದುತ್ತಿದ್ದ ಗೆಳತಿಗೆ “ಪೆನ್ನು ಇದ್ದರೆ ಕೊಡು.’ ಎಂದು ಕನ್ನಡದಲ್ಲಿ ಕೇಳಿದೆ. ಅದಕ್ಕೆ ಅವಳು “ಐ ವೋಂಟ್ ಗೀವ್’ ಅಂತಾ ಮುಖ ತಿರುಗಿಸಿದಾಗ ಪೆನ್ಸಿಲ್ಲಿನಲ್ಲಿ ಬರೆಯಲು ಶುರುಮಾಡಿದೆ. ಮೇಷ್ಟ್ರು ಅದನ್ನು ನೋಡಿ “ಆಸ್ಕ್ ಯುವರ್ ಫ್ರೆಂಡ್ ಫಾರ್ ದ ಪೆನ್’ ಎಂದಾಗ “ಸರ್ ಅಕೀ ಗಿವಂಗಿಲ್ಲಂತ್ರೀ’ ಎನ್ನುತ್ತಿದ್ದಂತೆ ತರಗತಿಯಲ್ಲಿ ನಗೆಯ ಅಲೆ ಎದ್ದಿತು.
ನಳಿನಿ ಟಿ. ಭೀಮಪ್ಪ, ಧಾರವಾಡ