ನಿನ್ನನ್ನು ಸ್ನೇಹಿತನೆಂದೇ ತಿಳಿದಿದ್ದೆ. ಅದೆಷ್ಟೋ ಮುಗಿಯದಷ್ಟು ಮಾತುಗಳನ್ನು ಆಡಿದ್ದೆ. ಗಂಟೆಗಟ್ಟಲೆ ಜಗಳ ಮಾಡಿದ್ದೆ. ನಕ್ಕು ಹುಣ್ಣಾಗುವಷ್ಟು ತುಂಟಾಟ ಮಾಡಿದ್ದೆ. ಅಷ್ಟೇ ಯಾಕೆ? ಚಿಕ್ಕಂದಿನಿಂದಲೂ ನೀನೇ ನನ್ನ ಜೀವದ ಗೆಳೆಯ ಎಂದೇ ತಿಳಿದಿದ್ದೆ. ಆದರೆ, ಇಂದು ನೀನು ಎದುರಿಗೆ ಬಂದರೆ ಸಾಕು, ಮನಸ್ಸು ನವಿಲಾಗುತ್ತದೆ. ಹೃದಯ ಮಿಡಿಯುತ್ತದೆ. ಮನಸೆಂಬೋ ಮನಸು ಕುಣಿದು ಕುಪ್ಪಳಿಸುತ್ತದೆ. ನಮ್ಮಿಬ್ಬರ ಸ್ನೇಹ ಅದಾವ ಕ್ಷಣದಲ್ಲಿ ಪ್ರೀತಿಯಾಗಿ ಬದಲಾಯಿತೋ, ನನಗೆ ತಿಳಿಯದು.
ಏಕಾಂತದಲ್ಲಿ ಕುಳಿತಾಗ ನಿನ್ನದೇ ನೆನಪು. ನಿನ್ನೊಡನೆ ಕಳೆದ ಸುಮಧುರ ಕ್ಷಣಗಳೇ ಕಣ್ಣ ಮುಂದೆ ಕುಣಿಯುತ್ತವೆ. ನಿನ್ನ ಆ ಮುದ್ದಾದ ಮುಖ, ಮಿಂಚಿನಂಥ ಕಣ್ಣುಗಳು, ಸಿಹಿ ತುಂಬಿದ ಮಾತುಗಳು, ಅಬ್ಟಾ… ನೆನೆದರೆ ತುಟಿಯಂಚಲಿ ನಗು. ನಿನ್ನ ಕಂಡಾಗ ಈ ಕಣ್ಣಿಗೆ ಅದೇನೋ ಸಂತೋಷ.
ಹೃದಯದಲ್ಲಿ ಎಷ್ಟೋ ಕನಸುಗಳು ಅರಳುತ್ತವೆ. ನಿನ್ನಿಂದ ನನ್ನಲ್ಲಿ ಅದೆಷ್ಟು ಬದಲಾವಣೆಗಳಾಗಿದೆಯೆಂದು ನೆನೆಸಿಕೊಂಡರೆ ಅಚ್ಚರಿಯಾಗುತ್ತದೆ.
ನಿನ್ನ ಆ ಮುಗ್ಧ ಸ್ವಭಾವ, ಪೆದ್ದು ಮಾತುಗಳು, ತುಂಟಾಟ ನನ್ನ ಹೃದಯವನ್ನು ಬಡಿದೆಬ್ಬಿಸಿವೆ. ನೀನು ನನ್ನೆದೆಯಲ್ಲಿ ಒಂದು ಜಾಗ ಮಾಡಿಕೊಂಡು ಕುಳಿತು ಬಿಟ್ಟಿದ್ದೀಯ. ಆ ಜಾಗದಿಂದ ಇನ್ನೆಂದೂ ನಿನ್ನನ್ನು ಹೊರಹಾಕಲು ಸಾಧ್ಯವಿಲ್ಲ. ನೀನಿಲ್ಲದ ಜೀವನವನ್ನು ಊಹಿಸಿಕೊಳ್ಳಲೂ ಸಾಧ್ಯವಿಲ್ಲ. ನಮ್ಮಿಬ್ಬರ ಪ್ರೀತಿ ಚಿಪ್ಪಿನೊಳಗಿನ ಮುತ್ತಿನಂತೆ. ಅದೆಷ್ಟು ಬಾರಿ ನಿನ್ನ ನೋಡಿದರೂ ಮತ್ತೆ ಮತ್ತೆ ನೋಡುವಾಸೆ, ನಿನ್ನ ಮಾತುಗಳನ್ನೇ ಕೇಳುತ್ತಿರುವಾಸೆ. ಪ್ರೀತೀಲಿ ಬಿದ್ದವರಿಗೆಲ್ಲಾ ಹೀಗೇ ಆಗುತ್ತಾ? ಕಾಲೇಜಿನಲ್ಲಿ ಗೆಳತಿಯರೊಡನೆ ಬರೀ ನಿನ್ನ ಬಗ್ಗೆಯೇ ಮಾತಾಡ್ತೀನಿ.
ನೆನಪಿದೆಯಾ ನಿನಗೆ? ಅಂದು ನಾನು ನಿನ್ನೊಡನೆ ಕಡಲ ತೀರದಲ್ಲಿ ಕೈ ಹಿಡಿದು ನಡೆದದ್ದು, ನೀನು ಧರಿಸಿದ್ದ ಆ ಸ್ಟೈಲಿಶ್ ಪ್ಯಾಂಟ್ ಬಗ್ಗೆ ಕಮೆಂಟ್ ಮಾಡಿದ್ದು, ನಿನ್ನ ಮೊಬೈಲ್‌ನಲ್ಲಿ ಇದ್ದ ಎಸ್ಸೆಮ್ಮೆಸ್‌ಗಳನ್ನು ಕದ್ದು ಓದಿದ್ದು, ಒಂದೇ ಐಸ್‌ಕ್ರೀಮ್ ಅನ್ನು ಇಬ್ಬರೂ ತಿಂದದ್ದು, ಸಿನಿಮಾ ನೋಡಿದ್ದು, ಜೊತೆಗೆ ಸೆಲ್ಫಿ ತೆಗೆದುಕೊಂಡದ್ದು, ಮುಗಿಯದಷ್ಟು ಮಾತುಗಳನ್ನಾಡಿದ್ದು…
ಉಫ್, ನಿನ್ನೊಂದಿಗೆ ಎಷ್ಟೊಂದು ಜಾಲಿಜಾಲಿಯಾಗಿ ನಡ್ಕೊಂಡಿದೀನಿ ಎಂಬುದನ್ನು ಹೇಳುತ್ತಾ ಹೋದರೆ ನನಗೇ ನಾಚಿಕೆ, ಖುಷಿ, ಒಂಥರಾ ಥ್ರಿಲ್ ಎಲ್ಲಾ ಒಟ್ಟೊಟ್ಟಿಗೇ ಆಗಿಬಿಡುತ್ತೆ… ಇಷ್ಟಾದ ಮೇಲೂ ಮಿಕ್ಕಿದ್ದನ್ನು ವಿವರಿಸಿ ಹೇಳಬೇಕಿಲ್ಲ ತಾನೆ? ಒಂದೇ ಹೃದಯ, ಎರಡು ದೇಹದಂತಿರುವ ನಮ್ಮಿಬ್ಬರ ಪ್ರೀತಿ ನೂರು ಕಾಲ ಚಿರವಾಗಿರಲಿ ಎಂದು ಆ ದೇವರಲ್ಲಿ ಪ್ರಾರ್ಥಿಸುವೆ…
ಗೀತಾ ಕೆ. ಬೈಲಕೊಪ್ಪ