ಶಿವಮೊಗ್ಗ: ಬಿ.ಎಸ್. ಯಡಿಯೂರಪ್ಪ ಹಾಗೂ ವಿಜಯೇಂದ್ರ ಕಪಿ ಮುಷ್ಟಿಯಲ್ಲಿರುವ ತಪ್ಪಿಸಲು ಸ್ಪರ್ಧೆ ಮಾಡುತ್ತಿದ್ದೇನೆ. ನೊಂದ ಕಾರ್ಯಕರ್ತರ ಧ್ವನಿಯಾಗಿ ನಾನು ಚುನಾವಣೆ ಸ್ಪರ್ಧಿಸುತ್ತೇನೆ. ಯಾರೇ ಬಂದು ಹೇಳಿದರೂ ನಾನು ಚುನಾವಣೆ ಎದುರಿಸುತ್ತೇನೆ. ಬಿ.ಎಸ್. ಯಡಿಯೂರಪ್ಪ ಹಾಗೂ ಅವರ ಮಕ್ಕಳಿನಿಂದ ಪಕ್ಷ ಮುಕ್ತವಾಗಬೇಕು. ಹಾಗಾಗಿ ಚುನಾವಣೆ ಸ್ಪರ್ಧೆ ಮಾಡುತ್ತೇನೆ. ಯಡಿಯೂರಪ್ಪ ನೇತೃತ್ವದಲ್ಲಿ ತುಂಬಾ ಸೀಟು ಗೆಲ್ಲುತ್ತೇವೆ ಎಂದುಕೊಂಡಿದ್ದಾರೆ. ಬಿಜೆಪಿಯಲ್ಲಿ ಆಗುತ್ತಿರುವ ಕೆಟ್ಟ ರಾಜಕಾರಣ ಕೇಂದ್ರದ ನಾಯಕರಿಗೆ ಗೊತ್ತಾಗಬೇಕು ಎಂದು ಕೆ.ಎಸ್ ಈಶ್ವರಪ್ಪ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೋದಿ ನನ್ನ ದೇವರು. ಪ್ರಾಣ ಹೋದರೂ ಮೋದಿ ಬಿಡಲಿಲ್ಲ. ಆದರೆ ನಾನು ರಾಘವೇಂದ್ರ ವಿರುದ್ಧ ಸ್ಪರ್ಧೆ ಮಾಡುತ್ತಿರುವುದು. ಹಾಗಾಗಿ ನಾಳೆಯ ಕಾರ್ಯಕ್ರಮದಲ್ಲಿ ಭಾಗವಹಿಸುವುದಿಲ್ಲ. ಗೆದ್ದ ಮೇಲೆ ಮೋದಿ ಅವರನ್ನು ಭೇಟಿ ಮಾಡುತ್ತೇನೆ. ನಾಳೆ ಅವರನ್ನು ಭೇಟಿ ಮಾಡಲ್ಲ. ಚುನಾವಣೆ ಮಾಡುತ್ತಿದ್ದೇನೆ. ಹಾಗಾಗಿ ಮೋದಿ ಕಾರ್ಯಕ್ರಮದಲ್ಲಿ ಭಾಗವಹಿಸುವುದಿಲ್ಲ ಎಂದು ಹೇಳಿದರು.
ಮೊನ್ನೆ ಶಿವಮೊಗ್ಗದಲ್ಲಿ ನಮ್ಮ ಕಾರ್ಯಕರ್ತರ ಸಭೆ ಮಾಡಿ ಅಭಿಪ್ರಾಯ ಪಡೆದೆ. ಸಭೆ ಅಷ್ಟು ಅದ್ದೂರಿಯಾಗಿ ನಡೆಯುತ್ತದೆ ಎಂದುಕೊಂಡಿರಲಿಲ್ಲ. ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತೇನೆಂದು ಘೋಷಣೆ ಮಾಡಿದ್ದೇನೆ. ಚುನಾವಣೆಯಿಂದ ಹಿಂದೆ ಸರಿಯುವ ಮಾತೇ ಇಲ್ಲ ಎಂದರು.
ಆರಗ ಜ್ಞಾನೇಂದ್ರ ಅವರು ಬಂದಿದ್ದರು. ಯಾಕೆ ನಾನು ಸ್ಪರ್ಧೆ ಮಾಡುತ್ತಿದ್ದೇನೆಂದು ಅವರಿಗೆ ತಿಳಿಸಿದ್ದೇನೆ. ಹಿಂದುತ್ವವಾದಿಗಳಿಗೆ ಮೋಸವಾಗಿದೆ. ಟಿಕೆಟ್ ತಪ್ಪಿಸುವ ಕೆಲಸವಾಗಿದೆ. ಯಡಿಯೂರಪ್ಪನವರ ಕುಟುಂಬದ ಕೈಯಲ್ಲಿ ಪಾರ್ಟಿ ಸಿಲುಕಿಕೊಂಡಿದೆ. ಯಡಿಯೂರಪ್ಪ ಹೇಳಿದ ಹಾಗೆ ವರಿಷ್ಠರು ಕೇಳುತ್ತಾರೆ. ಯಡಿಯೂರಪ್ಪ ಕೆಜೆಪಿ ಕಟ್ಟಿದ್ದಾಗ ಗೆದ್ದಿದ್ದು ಆರು ಸೀಟು. ಯಡಿಯೂರಪ್ಪ ದೊಡ್ಡ ನಾಯಕನೆಂದು ಕೇಂದ್ರದ ನಾಯಕರು ಎಂದುಕೊಂಡಿದ್ದಾರೆ. ಯತ್ನಾಳ್ ಗೆ ಯಾಕೆ ರಾಜ್ಯಾಧ್ಯಕ್ಷರನ್ನಾಗಿ ಮಾಡಲಿಲ್ಲ. ಇನ್ನೊಬ್ಬ ಲಿಂಗಾಯತ ನಾಯಕ ಬೆಳೆಯಲು ಇವರಿಗೆ ಇಷ್ಟವಿಲ್ಲ. ಸಿ.ಟಿ.ರವಿ ಸಚಿವ ಸ್ಥಾನ ಬಿಟ್ಟು ಪಕ್ಷ ಸಂಘಟಿಸಿದರು. ಅವರನ್ನು ಬೇಕಾದರೂ ರಾಜ್ಯಾಧ್ಯಕ್ಷರನ್ನಾಗಿ ಮಾಡಬೇಕಿತ್ತು. ಸಿ.ಟಿ.ರವಿ ಯಾವುದರಲ್ಲಿ ಕಡಿಮೆ ಇದ್ದರು? ಲಿಂಗಾಯತರು ಬೇಡ ಒಕ್ಕಲಿಗರು ಬೇಡ ಕೊನೆಯ ಪಕ್ಷ ನನ್ನನ್ನು ಯಾಕೆ ರಾಜ್ಯಾಧ್ಯಕ್ಷ ಮಾಡಲಿಲ್ಲ. ಪಕ್ಷ ಹೇಳಿದ ಹಾಗೆ ನಾನು ಇಲ್ಲಿಯವರೆಗೆ ಕೇಳಿದ್ದೇನೆ ಎಂದು ಈಶ್ವರಪ್ಪ ಹೇಳಿದರು.