ಕಾಸರಗೋಡು, ಮಾ.17: ತ್ರಿಶ್ಯೂರು ವಿಧಾನಸಭಾ ಕ್ಷೇತ್ರದಲ್ಲಿ ಜಿದ್ದಾಜಿದ್ದಿನ ಹೋರಾಟ ನಡೆಯಲಿದ್ದು, ಗೆಲುವಿನ ಬಗ್ಗೆ ಭವಿಷ್ಯ ನುಡಿಯಲು ಸಾಧ್ಯವಿಲ್ಲ ಎಂದು ಚಿತ್ರ ನಟ, ಬಿಜೆಪಿ ಅಭ್ಯರ್ಥಿ ಸುರೇಶ್ ಗೋಪಿ ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ:ಕೇರಳ ಚುನಾವಣಾ ಅಖಾಡ: ವಟ್ಟಿಯೂರ್‌ಕಾವ್ -ಮಾಜಿ ಟಿ.ವಿ. ನಿರೂಪಕಿ ವೀಣಾ ಐಕ್ಯರಂಗದ ಅಭ್ಯರ್ಥಿ
ಚುನಾವಣೆಯಲ್ಲಿ ಜಯದ ಕುರಿತು ಲೆಕ್ಕಾಚಾರ ಮಾಡಲು ಸಾಧ್ಯವಾಗದು. ಆದರೆ ಚುನಾವಣೆ ಎಂದ ಮೇಲೆ ಸ್ಪರ್ಧೆ ಖಚಿತ ಎಂದಿದ್ದಾರೆ. ಜ್ವರ ಹಾಗೂ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಸುರೇಶ್ ಗೋಪಿ ಚಿಕಿತ್ಸೆಯ ಬಳಿಕ ಆಸ್ಪತ್ರೆಯಿಂದ ಡಿಸ್ ಚಾರ್ಜ್ ಆಗಿದ್ದಾರೆ.
ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿರುವ ನನಗೆ ಚುನಾವಣೆಯಲ್ಲಿ ಸ್ಪರ್ಧಿಸುವ ಬಗ್ಗೆ ಆಸಕ್ತಿ ಇರಲಿಲ್ಲವಾಗಿತ್ತು. ಆದರೆ ತ್ರಿಶ್ಶೂರಿನಲ್ಲಿ ಸ್ಪರ್ಧಿಸಬೇಕೆಂದು ಪ್ರಧಾನಿ ಅವರ ಇಚ್ಛೆಯಾಗಿತ್ತು. 10 ದಿನಗಳ ವರೆಗೆ ವಿಶ್ರಾಂತಿ ಬೇಕೆಂದು ವೈದ್ಯರು ತಿಳಿಸಿದ್ದಾರೆ. ಕೋವಿಡ್ ವ್ಯಾಕ್ಸಿನ್ ಬಳಿಕ ಚುನಾವಣಾ ಪ್ರಚಾರಕ್ಕಿಳಿಯುವುದಾಗಿ ಸುರೇಶ್ ಗೋಪಿ ಹೇಳಿದ್ದಾರೆ.
ಚುನಾವಣೆಯಲ್ಲಿ ಗೆಲುವಿನ ಬಗ್ಗೆ ಮೊದಲೇ ಭವಿಷ್ಯ ಹೇಳಲು ಸಾಧ್ಯವಿಲ್ಲ. ನಾನು ಈ ಮೊದಲು ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದೇನೆ. ಈಗ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದೇನೆ ಎಂದರು.