Advertisement
ಬೆಳಗ್ಗೆ ನಾಲ್ಕು ಗಂಟೆಗೆ ಎದ್ದು ಪುಸ್ತಕ ತೆಗೆದು ಜೋರಾಗಿ ಇಂಗ್ಲಿಷಿನಲ್ಲಿ ಓದಿಕೊಳ್ಳುವ ಮಗಳು, ಐದು ಗಂಟೆಗೆ ಸ್ನಾನ ಮಾಡಿ, ನಾ ಮಾಡಿಕೊಟ್ಟ ತಿಂಡಿಯ ಗಬಗಬನೆ ತಿಂದುಕೊಂಡು, ಅಲ್ಲೇ ಟೇಬಲ್ಲಿನ ಮೇಲಿಟ್ಟಿರುವ ಒಂದೆರಡು ಪುಸ್ತಕಗಳನ್ನು ಬ್ಯಾಗಿಗೆ ತುರುಕಿಕೊಂಡು ಗಂಟೆ ಆರಕ್ಕೆ ಮುಟ್ಟುವ ಮೊದಲೇ ಕಾಲೇಜಿಗೆ ಹೊರಟು ಬಿಡುತ್ತಾಳೆ.Related Articles
Advertisement
ಕಾಲೇಜಿಗೆ ಹೋದವಳು ಕ್ಲಾಸ್‌ಮೇಟ್, ಸ್ನೇಹಿತ ಎಂದೆಲ್ಲಾ ನಂಬಿಕೊಂಡು ಒಬ್ಬೊಬ್ಬಳೇ ಯಾವುದಾದರೂ ಹುಡುಗನ ಜೊತೆ ಅಲಿಲ್ಲಿ ಸುತ್ತುತ್ತಾಳ್ಳೋ ಏನೋ? ಯಾವುದಾದರೂ ಹುಡುಗನ ಬೈಕಿನ ಹಿಂದೆ ಕುಳಿತು ಹೋದರೆ? ಮುಂದೆ ಪ್ರೀತಿ, ಪ್ರಣಯ ಎಂದೆಲ್ಲಾ ಹುಸಿಯಾಟಗಳು ನಡೆದು, ಅಲ್ಲಿ ಮೋಸವಾಗುವುದೋ? ನನ್ನ ಮಗಳಿಗೆ ಏನು ತೊಂದರೆಯಾಗುತ್ತದೋ? ಅವಳ ಕಾಲೇಜಿನ ಪ್ರಿನ್ಸಿಪಾಲರು, ಲೆಕ್ಚರರೂ, ಅಟೆಂಡರ್‌ಗಳು ಹೇಗೋ ಏನೋ? ಅವಳಿಗೆ ಪಾಠ ಮಾಡುವ ಲೆಕ್ಚರರ್‌ಗಳಲ್ಲಿ ಯಾರಾದರೊಬ್ಬರು ಅವಳನ್ನು ಕೆಟ್ಟ ದೃಷ್ಟಿಯಲ್ಲಿ ನೋಡಲಾರರು ಎನ್ನುವುದಕ್ಕೆ ನನಗೆ ಗ್ಯಾರಂಟಿ ಏನು? ದೇವರೇ, ನನ್ನ ಮುದ್ದು ಮಗಳ ಮೇಲೆ ಯಾವ ಕೆಟ್ಟ ಕಣ್ಣೂ ಬೀಳದಿರಲಿ…
ಕೈ ಹಿಡಿದು ಕಾಪಾಡಬೇಕಿದ್ದ ಅಪ್ಪ, ತಂಗಿಯೆಂದು ಕಾಳಜಿವಹಿಸಬೇಕಿದ್ದ ಅಣ್ಣ, ಮಗಳೆಂದು ಕಾಣಬೇಕಿದ್ದ ಚಿಕ್ಕಪ್ಪ- ದೊಡ್ಡಪ್ಪಂದಿರು, ವಿದ್ಯಾರ್ಥಿನಿ ಎಂದು ಪಾಠ ಮಾಡಬೇಕಿದ್ದ ಶಿಕ್ಷಕ, ಗೆಳತಿಯೆಂದು ಗೌರವಿಸಬೇಕಿದ್ದ ಗೆಳೆಯರು, ತಂಗಿ/ ಅಕ್ಕ ಎಂದು ಕಾಣಬೇಕಿದ್ದ ನೆರೆ-ಹೊರೆಯವನು, ಅದಿರಲಿ ಕಡೇ ಪಕ್ಷ ಹೆಣ್ಣೂ ಒಂದು ಜೀವ ಎಂದು ಪ್ರೀತಿಸಬೇಕಿದ್ದ ಇನ್ನೊಂದು ಜೀವಿಯೇ ಆಕೆಯಪಾಲಿಗೆ ಇಂದು ರಕ್ಷಕನಾಗದೇ, ರಾಕ್ಷಸನಾಗಿ ಮೈಮೇಲೆರಗುವುದನ್ನು ಪ್ರತಿದಿನ ಟಿವಿ ವಾರ್ತೆಗಳಲ್ಲಿ, ಪೇಪರಿನ ಮುಖಪುಟಗಳಲ್ಲಿ ನೋಡಿದಾಗ, ಮಗಳೇ ನಿನ್ನನ್ನು ಹೊತ್ತು ಮೂಡುವ ಮೊದಲೇ ಕಳುಹಿಸಿರುವ ನಾನು, ಪ್ರತಿ ಕ್ಷಣಕ್ಷಣವೂ ಆತಂಕಗಳಿಂದ ಹೃದಯವನ್ನು ಗಟ್ಟಿಯಾಗಿ ಹಿಡಿದುಕೊಂಡಿರುತ್ತೇನೆ. ನಿನ್ನ ಬರುವಿಕೆಗಾಗಿ ದಾರಿಯ ಕಾಯುತಿರುತ್ತೇನೆ. ನಿನ್ನ ಮುಖ ಕಂಡ ಮೆಲೆಯೇ ನೆಮ್ಮದಿಯ ನಿಟ್ಟುಸಿರು. ಕಾಲೇಜಿಗೆ ಹೋಗಿದ್ದ ನನ್ನ ಮಗಳು ಸುರಕ್ಷಿತವಾಗಿ ಮನೆಗೆ ಬಂದಿದ್ದಾಳೆಂದು.
ಮಗಳೇ, ನಾನು ಇಂದು ಯಾರನ್ನು ನಂಬಲಿ? ಈ ಸಮಾಜದಲ್ಲಿ ನಿನಗೆ ನಂಬಿಕಸ್ಥರು ಯಾರಿದ್ದಾರೆ? ಅಪ್ಪನಂತೆ, ಅಣ್ಣನಂತೆ, ತಮ್ಮನಂತೆ, ಗೆಳೆಯನಂತೆ. ಈ ಭಾವಗಳನ್ನ, ಮಾನವೀಯ ಸಂಬಂಧಗಳನ್ನ ನಾನೆಲ್ಲಿಂದ ಹುಡುಕಲಿ? ಮನುಷ್ಯತ್ವವನ್ನು ನಾನೆಲ್ಲಿ ಕಾಣಲಿ? ಎಲ್ಲೆಲ್ಲೋ ವಿಕೃತಿ, ಎಲ್ಲೆಲ್ಲೋ ಅತ್ಯಾಚಾರ, ಕಾಮುಕರು ಒಂದು ವರ್ಷದ ಪುಟ್ಟ ಮಗುವನ್ನೂ ಬಿಡುವುದಿಲ್ಲ. ಹಣ್ಣು ಹಣ್ಣು ಮುದುಕಿಯನ್ನೂ ಬಿಡುವುದಿಲ್ಲ. ಇಂತಹುದರಲ್ಲಿ ನಾನು ಹೇಗೆ, ಮಗಳು ಕಾಲೇಜಿನಿಂದ ಮನೆಗೆ ಸುರಕ್ಷಿತವಾಗಿ ಬಂದೇ ಬಿಡುತ್ತಾಳೆಂದು ನಂಬಲಿ? ದೇವರೇ, ನಿನ್ನಲ್ಲಿ ಪ್ರತಿಕ್ಷಣ ಪ್ರಾರ್ಥಿಸುತ್ತೇನೆ: “ನನ್ನ ಮುದ್ದು ಮಗಳ ಮೇಲೆ ಯಾವ ಕೆಟ್ಟ ಕಣ್ಣೂ ಬೀಳದೇ, ಅವಳನ್ನು ರಕ್ಷಿಸು’ ಎಂದು. ನನ್ನ ಸುತ್ತಲಿನ ಈ ವ್ಯವಸ್ಥೆಯಿಂದ ಎಲ್ಲಾ ನ್ಯಾಯದ ಭರವಸೆಗಳ್ಳನ್ನು ಕಳೆದುಕೊಂಡಿದ್ದೇನೆ. ದೇವರೇ ನಿನ್ನನ್ನೇ ನಂಬಿಕೊಂಡಿದ್ದೇನೆ.
ಇದು ಅತ್ಯಾಚಾರ, ಲೈಂಗಿಕ ದೌರ್ಜನ್ಯ ಮೊದಲಾದ ಹೇಯಕೃತ್ಯಗಳು ಎಗ್ಗಿಲ್ಲದೇ ದಿನೇದಿನೇ ಹೆಚ್ಚುತ್ತಿರುವ ಈ ಸಂದರ್ಭದಲ್ಲಿ ವಯಸ್ಸಿಗೆ ಬಂದಿರುವ ಮಗಳೊಬ್ಬಳನ್ನು ಪ್ರತಿದಿನ ಬೆಳಿಗ್ಗೆಯೇ ಮನೆಯಿಂದ ಕಾಲೇಜಿಗೆ ಕಳುಹಿಸುವ ತಾಯಿಯೊಬ್ಬಳ ಮನಸ್ಸಿನಲ್ಲಿ ಉಂಟಾಗುವ ಆತಂಕಗಳ- ತಲ್ಲಣಗಳ ಚಿತ್ರಣ. ಪರಿಸರ- ವಾತಾವರಣ ಭಿನ್ನವಾಗಿರಬಹುದು, ವಿಷಯದ ಮಜಲು ಬೇರೆಯಾಗಿರಬಹುದು, ನಿರೂಪಣೆಯ ಧಾಟಿಯಲ್ಲಿ ಒಂದಷ್ಟು ಏರುಪೇರುಗಳಿರಬಹುದು. ಅದಾಗ್ಯೂ ದಿನಂಪ್ರತಿ ಪ್ರತೀ ಹೆಣ್ಣೊಬ್ಬಳ ತಾಯಿಯ ಮನಸ್ಸಿನಲ್ಲಿ ಹೀಗೋಂದು ಕಹಿಯಾದ ಆತಂಕ ಗಿರಕಿ ಹೊಡೆಯುತ್ತಲೇ ಇರುತ್ತದೆ.
ನಾಗರಾಜ ಕೂವೆ, ಶೃಂಗೇರಿಚಿತ್ರಕೃಪೆ: ಶಿವಮೊಗ್ಗ ನಂದನ್