ಬೆಂಗಳೂರು: ಆಯುಧ ಪೂಜೆಯ ದಿನ ಗನ್, ಪಿಸ್ತೂಲ್, ರಿವಾಲ್ವರ್, ಸೇರಿದಂತೆ ಇನ್ನಿತರೆ ಮಾರಕಾಸ್ತ್ರಗಳನ್ನಿಟ್ಟು ಪೂಜೆ ಸಲ್ಲಿಸಿದ ವಿಚಾರಕ್ಕೆ ಸಂಬಂಧಿಸಿದಂತೆ ಜಯಕರ್ನಾಟಕ ಸಂಘಟನೆ ಸಂಸ್ಥಾಪಕ ಅಧ್ಯಕ್ಷ ಮುತ್ತಪ್ಪ ರೈ ಅವರನ್ನು ಸಿಸಿಬಿ ಪೊಲೀಸರು ಶನಿವಾರ ತೀವ್ರ ವಿಚಾರಣೆ ನಡೆಸಿದ್ದಾರೆ. ಮುತ್ತಪ್ಪ ರೈ ಅವರ ನಾಲ್ವರು ಗನ್ ಮ್ಯಾನ್‌ಗಳನ್ನು ವಶಕ್ಕೆ ಪಡೆದು ತನಿಖೆ ಮುಂದುವರಿಸಿದ್ದಾರೆ.
17ರಂದು ಪೂಜೆಗಿಟ್ಟಿದ್ದ ಶಸ್ತ್ರಾಸ್ತ್ರಗಳ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಈ ಕುರಿತು ದಾಖಲೆಗಳ ಸಮೇತ ವಿಚಾರಣೆಗೆ ಹಾಜರಾಗುವಂತೆ ಸಿಸಿಬಿ ಪೊಲೀಸರು ನೋಟಿಸ್ ನೀಡಿದ್ದರು. ಈ ಹಿನ್ನೆಲೆಯಲ್ಲಿ ಶನಿವಾರ ಮುತ್ತಪ್ಪ ರೈ ಅವರು ತಮ್ಮ ಗನ್‌ಮ್ಯಾನ್‌ಗಳ ಜತೆ ಸಿಸಿಬಿ ಕಚೇರಿಯಲ್ಲಿ ವಿಚಾರಣೆಗೆ ಆಗಮಿಸಿದ್ದರು.
ಸಿಸಿಬಿ ಡಿಸಿಪಿ ಗಿರೀಶ್, ಎಸಿಪಿ ಮರಿಯಪ್ಪ ನೇತೃತ್ವದ ತಂಡವು ಮುತ್ತಪ್ಪ ರೈ ಅವರನ್ನು ಸತತ 7 ಗಂಟೆಗಳಿಗೂ ಅಧಿಕ ಕಾಲ ವಿಚಾರಣೆ ನಡೆಸಿ ಪೂಜೆಗಿಟ್ಟಿದ್ದ ಗನ್, ರಿವಾಲ್ವರ್, ಪಿಸ್ತೂಲ್ ಸೇರಿ ಇನ್ನಿತರೆ ಮಾರಾಕಾಸ್ತ್ರಗಳ ಕುರಿತ ದಾಖಲೆಗಳು, ಪರವಾನಿಗೆ ಪತ್ರಗಳನ್ನು ಪರಿಶೀಲಿಸಿದ್ದಾರೆ. ಇನ್ನಿತರೆ ಮಾಹಿತಿಯನ್ನು ಪಡೆದುಕೊಂಡಿದ್ದಾರೆ.
ಗನ್‌ಮ್ಯಾನ್‌ಗಳು ವಶಕ್ಕೆ: ಈ ವೇಳೆ ಕೆಲವು ಶಸ್ತ್ರಾಸ್ತ್ರಗಳಿಗೆ ಸಂಬಂಧಿಸಿ ನಿಯಮಗಳ ಉಲ್ಲಂಘನೆ, ಪರವಾನಿಗೆ ನವೀಕರಣ ಆಗದಿರುವುದು ಕಂಡು ಬಂದಿದೆ ಎನ್ನಲಾಗಿದೆ. ಅಲ್ಲದೆ, ಈ ಹಿನ್ನೆಲೆಯಲ್ಲಿ ಮುತ್ತಪ್ಪ ರೈಗೆ ಭದ್ರತೆ ಓದಗಿಸುತ್ತಿದ್ದ ಖಾಸಗಿ ಭದ್ರತಾ ಏಜೆನ್ಸಿಯ ನಾಲ್ವರು ಗನ್ ಮ್ಯಾನ್‌ಗಳನ್ನೂ ವಶಕ್ಕೆ ಪಡೆದು, ತನಿಖೆ ಮುಂದುವರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಏಜೆನ್ಸಿಯ ಗನ್‌ಮ್ಯಾನ್‌ಗಳು ಬಳಸುತ್ತಿದ್ದ ಗನ್ ಪರವಾನಿಗೆ ನವೀಕರಿಸದ ಕಾರಣ, ಪರವಾನಿಗೆಯಲ್ಲಿ ನಿಯಮಗಳ ಉಲ್ಲಂಘನೆ ಕಂಡು ಬಂದಿರುವ ಹಿನ್ನೆಲೆಯಲ್ಲಿ ಭಾನುವಾರವೂ ವಿಚಾರಣೆ ನಡೆಯಲಿದೆ ಎನ್ನಲಾಗಿದೆ. ಜತೆಗೆ ಸಿಸಿಬಿ ಅಧಿಕಾರಿಗಳು, ಮುಂದಿನ ಕಾನೂನು ಕ್ರಮಗಳ ಬಗ್ಗೆ ಪರಾಮರ್ಶಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಕಾನೂನು ಉಲ್ಲಂಘಿಸಿಲ್ಲ – ರೈ: ವಿಚಾರಣೆ ಬಳಿಕ ಮಾಧ್ಯಮಗಳ ಜತೆ ಮಾತನಾಡಿದ ಮುತ್ತಪ್ಪ ರೈ, ನಾನು ಯಾವುದೇ ರೀತಿಯ ಕಾನೂನು ಉಲ್ಲಂಘಿಸಿಲ್ಲ. ಶಸ್ತ್ರಾಸ್ತ್ರಗಳ ಬಗ್ಗೆ ಕೇಳಿದ ಮಾಹಿತಿ ಪೊಲೀಸರಿಗೆ ತಿಳಿಸಿದ್ದೇನೆ ಎಂದಿದ್ದಾರೆ.