ನವದೆಹಲಿ:ಕ್ಷಿಪ್ರವಾಗಿ ಹರಡಬಲ್ಲ ರೂಪಾಂತರ ಹೊಂದಿದ ನೂತನ ಕೋವಿಡ್ 19 ಸೋಂಕು ಬ್ರಿಟನ್ ನಲ್ಲಿ ತೀವ್ರವಾಗಿ ಹರಡುತ್ತಿದೆ. ಆದರೆ ಭಾರತದಲ್ಲಿ ಈವರೆಗೂ ಹೊಸ ಪ್ರಭೇದದ ಕೋವಿಡ್ ಸೋಂಕು ಪತ್ತೆಯಾಗಿಲ್ಲ. ಈ ಬಗ್ಗೆ ಆತಂಕ ಪಡುವ ಅಗತ್ಯವಿಲ್ಲ. ಆದರೆ ಮುಂಜಾಗ್ರತೆ ಅತ್ಯಗತ್ಯ ಎಂದು ಕೇಂದ್ರ ಸರ್ಕಾರ ಮಂಗಳವಾರ(ಡಿಸೆಂಬರ್ 22, 2020) ತಿಳಿಸಿದೆ.
ಭಾರತದಲ್ಲಿ ಕೋವಿಡ್ 19 ಸೋಂಕಿನ ಬೆಳವಣಿಗೆ ಕುರಿತು ಪತ್ರಿಕಾಗೋಷ್ಠಿಯಲ್ಲಿ ನೀತಿ ಆಯೋಗ(ಆರೋಗ್ಯ)ದ ಸದಸ್ಯ ಮತ್ತು ಸರ್ಕಾರದ ಕೋವಿಡ್ 19 ಸ್ಪೆಷಲ್ ಟಾಸ್ಕ್ ಪೋರ್ಸ್ ನ ಡಾ.ವಿಕೆ ಪೌಲ್ ಮಾಹಿತಿ ನೀಡಿ, ಹೊಸ ಪ್ರಭೇದದ ಸೋಂಕಿನ ಬಗ್ಗೆ ಕಳವಳ ಪಡಬೇಕಾಗಿಲ್ಲ. ನಾವು ಈ ಬಗ್ಗೆ ಎಚ್ಚರದಿಂದ ಇರಬೇಕು. ನೂತನ ಸೋಂಕು ಬ್ರಿಟನ್ ನಲ್ಲಿ ವ್ಯಾಪಕವಾಗಿ ಹರಡಿದ್ದು, ಭಾರತದಲ್ಲಿ ಇನ್ನೂ ಹರಡಿಲ್ಲ ಎಂದು ತಿಳಿಸಿದ್ದಾರೆ.
ಏತನ್ಮಧ್ಯೆ ಕಳೆದ ಒಂದು ವಾರದಲ್ಲಿ ಬ್ರಿಟನ್ ನಿಂದ ಭಾರತಕ್ಕೆ ಆಗಮಿಸಿದ್ದ ಹಲವರಲ್ಲಿ ಈಗ ಕೋವಿಡ್ 19 ಸೋಂಕು ದೃಢಪಟ್ಟಿರುವುದು ಆತಂಕಕ್ಕೆ ಎಡೆಮಾಡಿಕೊಟ್ಟಿರುವುದಾಗಿ ವರದಿ ವಿವರಿಸಿದೆ. ಅಷ್ಟೇ ಅಲ್ಲ ಈಗಾಗಲೇ ಲಂಡನ್ ನಿಂದ ಬಂದವರ ಪತ್ತೆಗೆ ಕರ್ನಾಟಕ ಸರ್ಕಾರ ಸೂಚನೆ ನೀಡಿದೆ.
ಇದನ್ನೂ ಓದಿ:ಅಡಿಲೇಡ್ ನಲ್ಲಿ ಹೀನಾಯ ಸೋಲು: ಕೋಚ್ ರವಿ ಶಾಸ್ತ್ರಿ ತಲೆದಂಡಕ್ಕೆ ಒತ್ತಾಯ
ಹೊಸ ಪ್ರಭೇದದ ತೀವ್ರತೆ ಹೆಚ್ಚಾಗಿರುವುದಿಲ್ಲ. ಹರಡುವಿಕೆ ವೇಗ ಹೆಚ್ಚಾಗಿರುವುದರಿಂದ ಎಚ್ಚರಿಕೆ ಅಗತ್ಯ. ಆದರೆ ಆರ್ ಟಿಪಿಸಿಆರ್ ಪರೀಕ್ಷೆಯಲ್ಲಿ ಹೊಸ ಪ್ರಭೇದದ ಸೋಂಕು ಪತ್ತೆಯಾಗುವುದಿಲ್ಲ ಎಂದು ವರದಿ ವಿವರಿಸಿದೆ.