ಶಿವಮೊಗ್ಗ: ಎಷ್ಟೇ ದೂರುಗಳು ದಾಖಲಾದರೂ, ಶಿಕ್ಷೆಯಾದರೂ ಮಲೆನಾಡಿನ ಗಾಂಜಾ ಬೆಳೆ ಹಾಗೂ ಮಾರಾಟಕ್ಕೆ ಕಡಿವಾಣ ಹಾಕಲು ಸಾಧ್ಯವಾಗಿಲ್ಲ. ಈಚೆಗೆ ಕಾಲೇಜು ಸುತ್ತಮುತ್ತ ಗಾಂಜಾ ಆರೋಪಿಗಳು ಪತ್ತೆಯಾಗುತ್ತಿರುವುದು ಇದಕ್ಕೆ ಪುಷ್ಠಿ ನೀಡಿದೆ. ಇದಕ್ಕೆಲ್ಲಾ ಕಡಿವಾಣ ಹಾಕಲು ಪೊಲೀಸ್ ಇಲಾಖೆ ಕಾಲೇಜು ಸಿಬ್ಬಂದಿ ಮೊರೆ ಹೋಗುತ್ತಿದೆ.
ಈವರೆಗೆ ಪತ್ತೆಯಾಗಿರುವ ಗಾಂಜಾ ಮಾರಾಟ ಆರೋಪಿಗಳು ಬಹುತೇಕ ಯುವಕರೇ ಆಗಿದ್ದಾರೆ. ಇವರು ಟಾರ್ಗೆಟ್ ಮಾಡುತ್ತಿರುವುದು ಸಹ ಯುವಕರನ್ನೇ. ಅರ್ಧಕ್ಕೆ ಶಿಕ್ಷಣ ನಿಲ್ಲಿಸಿದ ಕಿಡಿಗೇಡಿಗಳು ಯಾವುದೇ ಪರಿಶ್ರಮ ಇಲ್ಲದೇ ಅಪಾರ ಹಣ ಗಳಿಸುವ ಗಾಂಜಾ ಮಾರಾಟ ದಂಧೆಗೆ ಮುಂದಾಗುತ್ತಿದ್ದಾರೆ. ಶಿವಮೊಗ್ಗದಲ್ಲಿ ಗಾಂಜಾ ಮಾರಾಟ ಹೊರತುಪಡಿಸಿದರೆ ಬೇರೆ ಯಾವುದೇ ಮಾದಕ ವಸ್ತುಗಳ ಮಾರಾಟ ಪ್ರಕರಣ ಈವರೆಗೆ ಪತ್ತೆಯಾಗಿಲ್ಲ. ಮಾದಕ ವಸ್ತುಗಳ ಸೇವನೆಗೆ ಮುಂದಾದ ಯುವಕರು ವರ್ಷದ ಹಿಂದೆ ಪೊಲೀಸರ ಮೇಲೆ ಹಲ್ಲೆ ಮಾಡಿದನ್ನು ಇಲ್ಲಿ ಮರೆಯುವಂತಿಲ್ಲ.
ರಾತ್ರೋರಾತ್ರಿ ವಾಹನಗಳಿಗೆ ಬೆಂಕಿ ಹಚ್ಚುವುದು, ಗಲಾಟೆ ಮಾಡುವುದು ಇತರೆ ಪ್ರಕರಣಗಳಲ್ಲಿ ಇಂತಹ ಗಾಂಜಾ ವ್ಯಸನಿಗಳು ಮುಂದಿದ್ದಾರೆ. ಅಬಕಾರಿ ಮತ್ತು ಪೊಲೀಸ್ ಇಲಾಖೆ ಎಷ್ಟೇ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡರೂ ಗಾಂಜಾ ಬೆಳೆಯುವುದು ನಿಲ್ಲಿಸಲು ಆಗಿಲ್ಲ. ಬಗರ್ ಹುಕುಂ ಜಮೀನುಗಳನ್ನೇ ಆಶ್ರಯಿಸಿರುವ ಇಂತಹ ಕಿಡಿಗೇಡಿಗಳು ಹಣದಾಸೆ ತೋರಿಸಿ ಗಾಂಜಾ ಬಿತ್ತುತ್ತಾರೆ. ಮೆಕ್ಕೆಜೋಳ ಹೆಚ್ಚಾಗಿ ಬೆಳೆಯುತ್ತಾರೆ. ಅಬಕಾರಿ ಇಲಾಖೆ ಡ್ರೋಣ್ ಸರ್ವೇ ಮೂಲಕ ಕೆಲ ಕೇಸುಗಳನ್ನು ಪತ್ತೆಹಚ್ಚಲು ಯಶಸ್ವಿಯಾಗಿತ್ತು.
ಆದರೂ ಸಂಪೂರ್ಣ ನಿಂತಿಲ್ಲ. ಈಚೆಗೆ ಇಂತಹ ಕೇಸುಗಳಲ್ಲಿ ಶಿಕ್ಷೆಯಾಗುವಂತೆಯೂ ನೋಡಿಕೊಳ್ಳಲಾಗುತ್ತಿದೆ. ಹಣದಾಸೆಗೆ ಕೆಲ ರೈತರು ಮೋಸ ಹೋಗುತ್ತಿದ್ದಾರೆ. ಇಲ್ಲಿ ಬೆಳೆದ ಗಾಂಜಾ ಸುಲಭವಾಗಿ ಪೂರೈಕೆಯಾಗುತ್ತಿದೆ. ಈ ಜಾಲದ ಮೊದಲ ಬಲಿಯೇ ವಿದ್ಯಾರ್ಥಿಗಳು. ವಿದ್ಯಾರ್ಥಿಗಳು ಈ ಜಾಲದಲ್ಲಿ ಸಿಕ್ಕಿಹಾಕಿಕೊಂಡಿರುವುದನ್ನು ತಪ್ಪಿಸಲು ಪೊಲೀಸರು ಕಾಲೇಜು ಸಿಬ್ಬಂದಿಯನ್ನೇ ಮಾಹಿತಿದಾರರನ್ನಾಗಿ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಏನಿದು ಪಿಸಿಒ: ಕಾಲೇಜು ಮಟ್ಟದಲ್ಲಿ ಗಾಂಜಾ ಮಾರಾಟ, ಸೇವನೆ, ಗಲಾಟೆ ಇತರೆ ಅಕ್ರಮ ಚಟುವಟಿಕೆಗಳ ಮಾಹಿತಿ ಪಡೆಯಲು ಕಾಲೇಜು ಪ್ರಾಧ್ಯಾಪಕರು, ಅಧ್ಯಾಪಕರು, ಸಿಬ್ಬಂದಿಯನ್ನೇ ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಇವರನ್ನು ಪೊಲೀಸ್ ಸಮನ್ವಯಾ ಧಿಕಾರಿ (ಪೊಲೀಸ್ ಕೋಆರ್ಡಿನೇಷನ್ ಆμàಸರ್) ಎಂದು ಕರೆಯಲಾಗುತ್ತದೆ. ಕಾಲೇಜು ಆಡಳಿತ ಮಂಡಳಿ ತಿಳಿಸಿದ ಸಿಬ್ಬಂದಿ ಇದರ ಮಾಹಿತಿದಾರರಾಗಿರುತ್ತಾರೆ. ಅವರು ಕಾಲಕಾಲಕ್ಕೆ ಪೊಲೀಸರಿಗೆ ಮಾಹಿತಿ ಒದಗಿಸುತ್ತಾರೆ.
ವಿದ್ಯಾರ್ಥಿಗಳ ನಡವಳಿಕೆಯಲ್ಲಿ ಏನಾದರೂ ಬದಲಾವಣೆ ಕಂಡುಬಂದರೆ, ಅನುಮಾನಾಸ್ಪಾದ ವ್ಯಕ್ತಿಗಳು ಕಾಲೇಜು ಆವರಣದಲ್ಲಿ ಕಾಣಿಸಿಕೊಂಡರೆ ಅವರ ಬಗ್ಗೆ ಮಾಹಿತಿಯನ್ನು ಪೊಲೀಸರಿಗೆ ನೀಡಲಾಗುತ್ತದೆ. ಅವರ ಮೇಲೆ ನಿಗಾ ಇಟ್ಟು ಪೊಲೀಸರು ತಪ್ಪು ಕಂಡುಬಂದರೆ ಬಂಧಿಸುತ್ತಾರೆ.
-ಶರತ್ ಭದ್ರಾವತಿ