Advertisement
ಮುಂದಿರುವ ರಸ್ತೆಯ ಮಟ್ಟ ಹಾಗೂ ಅದು ಮುಂದೆ ಎಷ್ಟು ಎತ್ತರ ಆಗಬಹುದು ಎಂಬುದರ ಅಂದಾಜಿನ ಮೇಲೆ ಮನೆಯ ಮಟ್ಟವನ್ನು ನಿರ್ಧರಿಸಲಾಗುತ್ತದೆ. ಮುಖ್ಯ ರಸ್ತೆಗಳಾದರೆ ಅವುಗಳ ಮೇಲೆ ಗಾಲಿಗಳು ತಿರುಗುವುದು ಹೆಚ್ಚಿದ್ದು, ಬೇಗನೆ ಘಾಸಿಗೊಂಡು ಪದೇಪದೆ ಹೊಸ ಪದರಗಳನ್ನು ಹಾಕಲಾಗುತ್ತದೆ. ಇದು ಕೆಲವಾರು ವರ್ಷಗಳಲ್ಲಿ ಐದು- ಆರು ಇಂಚು ಆಗುವುದೂ ಉಂಟು. ಹಾಗೆಯೇ ಹತ್ತಾರು ವರ್ಷಗಳಲ್ಲಿ ಒಂದು ಅಡಿಯವರೆಗೂ ಏರುವುದುಂಟು. ನಾವೇನಾದರೂ ಮನೆಯನ್ನು ರಸ್ತೆಯಿಂದ ಒಂದೇ ಅಡಿ ಅಂತರದಲ್ಲಿ ಕಟ್ಟಿದರೆ, ಜೋರು ಮಳೆಯಲ್ಲಿ ರಸ್ತೆಯ ನೀರು ಮನೆಯನ್ನು ಹೊಕ್ಕುವ ಸಾಧ್ಯತೆ ಇರುತ್ತದೆ.
Related Articles
Advertisement
ಇಳಿಜಾರು ಕಡ್ಡಾಯ: ತ್ಯಾಜ್ಯದ ನೀರು ಸರಾಗವಾಗಿ ಹರಿದು ಹೋಗಲು ಸಹ ಮನೆಯ ಎತ್ತರ ಸಹಕಾರಿ. ನೀವು ಮನೆಗೆ ಇಂಡಿಯನ್ ಮಾದರಿಯ- ಕುಕ್ಕರುಗಾಲು ಕೂರುವ ಮಾದರಿಯ ಶೌಚಾಲಯವನ್ನು ಹಾಕಲು ನಿರ್ಧರಿಸಿದ್ದರೆ, ಇದು ಸುಮಾರು ಒಂದೂವರೆ ಅಡಿ ಆಳ ಇರುತ್ತದೆ. ಹಾಗಾಗಿ ಈ ಡಬಲ್ ಯು ಸಿ.ಯ ಹೊರ ಹರಿವು ಭೂಮಿ ಮಟ್ಟದಲ್ಲೇ ಇರುತ್ತದೆ. ಇನ್ನು ಇದನ್ನು ಹೊರ ಸಾಗಿಸುವ ಕೊಳವೆಗಳು ಸುಮಾರು ಎರಡು ಅಡಿ ಆಳದಲ್ಲಿ ರಸ್ತೆ ಬದಿಯ ಮುಖ್ಯ ತ್ಯಾಜ್ಯ ಕೊಳವೆ- ಮ್ಯಾನ್‌ಹೋಲ್‌ಗಳನ್ನು ಸಂಪರ್ಕಿಸುವ ಸ್ಯಾನಿಟರಿ ಪೈಪ್‌ಗ್ಳನ್ನು ಸೇರಬೇಕಾಗುತ್ತದೆ.
ಹಾಗಾಗಿ ನಾವು ಪಾಶ್ಚಾತ್ಯ ಮಾದರಿಯ ಡಬಲ್‌ಯುಸಿಗೆ ಹೋಲಿಸಿದರೆ, ಕಡೆ ಪಕ್ಷ ಆರು ಇಂಚು ಹೆಚ್ಚುವರಿಯಾಗಿ ಇಂಡಿಯನ್ ಡಬಲ್‌ಯುಸಿಗೆ ನೀಡುವುದು ಉತ್ತಮ. ಇಲ್ಲದಿದ್ದರೆ, ಮನೆಯ ಮಟ್ಟದಿಂದ ತ್ಯಾಜ್ಯ ನೀರು ಸರಾಗವಾಗಿ ಹೊರಗೆ ಹೋಗಲು ತೊಂದರೆ ಆಗಬಹುದು. ಸ್ಯಾನಿಟರಿ ಕೊಳವೆಗಳು ಕಟ್ಟಿಕೊಳ್ಳಲು ಮುಖ್ಯಕಾರಣ ಅವುಗಳ ಇಳಿಜಾರು ಕಡಿಮೆ ಇರುವುದೇ ಆಗಿರುತ್ತದೆ. ಹಾಗಾಗಿ, ನಾವು ಕಡೇ ಪಕ್ಷ ಐದು ಅಡಿಗೆ ಒಂದು ಇಂಚಿನಂತೆ, ಅಂದರೆ, ಮೂವತ್ತು ಅಡಿ ಕೊಳವೆಯ ಉದ್ದಕ್ಕೆ ಆರು ಇಂಚಿನಷ್ಟು ಇಳಿಜಾರನ್ನಾದರೂ ಕಡ್ಡಾಯವಾಗಿ ನೀಡಬೇಕು- 1: 60 ಇಳಿಜಾರು.
ಕಾರ್ ಪಾರ್ಕಿಂಗ್ ಲೆಕ್ಕಾಚಾರ: ಭಾರತದಲ್ಲಿ “ರೆವೆನ್ಯೂ’ ನಿವೇಶನಗಳ ಹಾವಳಿ ಹೆಚ್ಚಿದೆ. ಇಲ್ಲಿ ನಿವೇಶನ ದೊಡ್ಡದಿದ್ದರೂ ಅದರ ಮುಂದಿನ ರಸ್ತೆ ಕಿರಿದಾಗಿ ಇರುತ್ತದೆ. ಹಾಗಾಗಿ, ನಮ್ಮ ನಿವೇಶನದಲ್ಲಿ ಕಾರನ್ನು ತಿರುಗಿಸಿ ಪಾರ್ಕ್ ಮಾಡಲು ರಸ್ತೆಯ ಅಗಲ ಇಕ್ಕಟ್ಟಾಗಿ ಬಿಡುತ್ತದೆ. ನಮ್ಮ ಮನೆಯ ಮುಂದೆ ನೀಡುವ ಕಾರ್ ಪಾರ್ಕಿಂಗ್ ಒಂದು ಅಡಿ ಎತ್ತರದಲ್ಲಿದ್ದರೆ, ಅದಕ್ಕೆ ಕಡೇ ಪಕ್ಷ ಎಂಟರಿಂದ ಹತ್ತು ಅಡಿ ಉದ್ದದ ಇಳಿಜಾರು- ರ್‍ಯಾಂಪ್ ನೀಡಬೇಕಾಗುತ್ತದೆ. ಇಲ್ಲವೇ ಕಾರನ್ನೇ ಇಳಿಜಾರಲ್ಲಿ ನಿಲ್ಲಿಸಬೇಕಾಗುತ್ತದೆ.
ಹಾಗಾಗಿ ನಾವು ಮನೆಯ ಎತ್ತರವನ್ನು ಎರಡು ಅಡಿ ಎಂದು ನಿರ್ಧರಿಸಿದರೂ, ಕಾರು ನಿಲ್ಲಿಸುವ ಸ್ಥಳವನ್ನು ಕೇವಲ ಆರು ಇಂಚಿಗೆ ಇಡಬೇಕಾಗಬಹುದು. ಬೆಂಗಳೂರಿನಂಥ ನಗರಗಳಲ್ಲಿ ಸಾಮಾನ್ಯವಾಗಿ ರಸ್ತೆಗಳು ಇಳಿಜಾರಾಗಿದ್ದು, ಮಳೆ ನೀರು ಸರಾಗವಾಗಿ ಹರಿದು ಹೋಗುತ್ತದೆ. ಆದರೆ ಈ ನೀರು ಹರಿದುಹೋಗುವ ರಾಜಕಾಲುವೆಗಳನ್ನು ಮುಚ್ಚಿದ್ದರೆ, ಆಗ ಮಳೆನೀರು ರಸ್ತೆಯಲ್ಲೇ ನಿಲ್ಲುತ್ತದೆ, ನೀವು ನಿವೇಶನವನ್ನು ಕೊಳ್ಳುವ ಮೊದಲು ಅದರ ಸಾಧಕ ಬಾಧಕಗಳನ್ನು ಪರಿಶೀಲಿಸುವುದು ಉತ್ತಮ. ನಿಮ್ಮ ನಿವೇಶನವನ್ನು ಸಂಪರ್ಕಿಸುವ ರಸ್ತೆಗಳು ಸಾಕಷ್ಟು ಅಗಲ ಹಾಗೂ ಇಳಿಜಾರಿನಲ್ಲಿದ್ದು, ಕಡೇಪಕ್ಷ ಅರ್ಧ ಕಿಲೋಮೀಟರ್ ದೂರದಲ್ಲಿ ದೊಡ್ಡದಾದ ರಾಜಾ ಕಾಲುವೆ ಇದ್ದರೆ, ನಿಮ್ಮ ಮನೆಗೆ ನೀರು ನುಗ್ಗುವ ಸಾಧ್ಯತೆ ಇರುವುದಿಲ್ಲ!
ಅಕ್ಕಪಕ್ಕದಲ್ಲಿ ವಿಚಾರಿಸಿ: ಮನೆ ಕಟ್ಟುವ ಮೊದಲು ಅಕ್ಕಪಕ್ಕದವರನ್ನು ವಿಚಾರಿಸಿದರೆ, ಅದರಲ್ಲೂ ಹತ್ತಾರು ವರ್ಷ ಅದೇ ಪ್ರದೇಶದಲ್ಲಿ ಇರುವವರನ್ನು ಕೇಳಿದರೆ, ನೀವು ಇರುವ ಪ್ರದೇಶದ ಅಮೂಲಾಗ್ರ ಮಾಹಿತಿಯನ್ನು ನೀಡುತ್ತಾರೆ. ಜೊತೆಗೆ, ಜೋರು ಮಳೆ ಬಂದಾಗ ನೀರು ರಸ್ತೆಯಲ್ಲಿ ನಿಲ್ಲುವುದೇ? ಎಂಬುದನ್ನೂ ತಿಳಿಸುತ್ತಾರೆ. ಈ ಮುಖ್ಯ ಮಾಹಿತಿಯನ್ನು ಅರಿತು, ನಂತರ ಪ್ಲಿಂತ್ ಮಟ್ಟವನ್ನು ನಿರ್ಧರಿಸುವುದು ಉತ್ತಮ. ಕೆಲ ಪ್ರದೇಶಗಳಲ್ಲಿ ಧೂಳು, ಕ್ರಿಮಿಕೀಟಗಳ- ಅದರಲ್ಲೂ ಝರಿ, ಹಾವು ಚೇಳುಗಳ ಹಾವಳಿಯೂ ಇರುವುದುಂಟು. ಇಂಥ ಪ್ರದೇಶಗಳಲ್ಲೂ ಪ್ಲಿಂತ್ ಮಟ್ಟವನ್ನು ಒಂದೆರಡು ಅಡಿ ಹೆಚ್ಚುವರಿಯಾಗಿ ಇಟ್ಟುಕೊಳ್ಳುವುದು ಉತ್ತಮ. ಹರಿದಾಡುವ ಹಾಗೂ ಸಣ್ಣಪುಟ್ಟ ಕೀಟಗಳಿಗೆ ಮೆಟ್ಟಿಲುಗಳು ಹೆಚ್ಚಾದಷ್ಟೂ ನುಸುಳುವುದು ಕಷ್ಟವಾಗುತ್ತದೆ.
ಜೌಗು ಪ್ರದೇಶದಲ್ಲಿ ನಿವೇಶನವಿದ್ದರೆ…: ಕೆಲವೊಂದು ಪ್ರದೇಶಗಳಲ್ಲಿ, ಅದರಲ್ಲೂ ಕೆರೆ ಕಟ್ಟೆಯ- ರಾಜ ಕಾಲುವೆಯ ಆಸುಪಾಸಿನಲ್ಲಿ ಇದ್ದರೆ, ಮಣ್ಣಿನಲ್ಲಿ ಸ್ವಾಭಾವಿಕವಾಗಿಯೇ ಹೆಚ್ಚುವರಿ ನೀರಿನ ಅಂಶ ಇರುತ್ತದೆ. ಇದು ಕಾಲಾಂತರದಲ್ಲಿ ಮನೆಯನ್ನು ವರ್ಷಪೂರ್ತಿ ಥಂಡಿ ಹಿಡಿಯುವಂತೆ ಮಾಡಬಹುದು. ಇಂಥ ಸ್ಥಳದಲ್ಲೂ ಮನೆಯ ಪ್ಲಿಂತ್ ಅನ್ನು ಮೂರು ಅಡಿಯಷ್ಟಾದರೂ ಎತ್ತರದಲ್ಲಿ ಇಟ್ಟುಕೊಳ್ಳುವುದು ಉತ್ತಮ. ಮನೆಯ ಮುಂಬದಿಯ ಮೆಟ್ಟಿಲುಗಳನ್ನು ದಿನ ನಿತ್ಯ ಹತ್ತಾರು ಬಾರಿ ಹತ್ತಿ ಇಳಿಯುವ ಲೆಕ್ಕಾಚಾರ ಒಂದಾದರೆ, ಪ್ಲಿಂತ್ ಮಟ್ಟ ಇತರೆ ಅನೇಕ ಸಂಗತಿಗಳಿಗೂ ನೇರ ಸಂಬಂಧ ಇರುತ್ತದೆ. ಆದುದರಿಂದ ನಾವು ಮನೆಯ ಪ್ಲಿಂತ್ ಎತ್ತರವನ್ನು ಎಲ್ಲ ರೀತಿಯಲ್ಲೂ ಗಮನಿಸಿ ನಿರ್ಧರಿಸುವುದು ಒಳ್ಳೆಯದು.
ಹೆಚ್ಚಿನ ಮಾಹಿತಿಗೆ ಫೋನ್: 9844132826
* ಆರ್ಕಿಟೆಕ್ಟ್ ಕೆ. ಜಯರಾಮ್