Advertisement

ಮುಸ್ಲಿಮರು ಮೋದಿ ಬೆಂಬಲಿಸಲಿ: ರಮೇಶ ಜಾರಕಿಹೊಳಿ

06:01 PM May 01, 2024 | Team Udayavani |

ಉದಯವಾಣಿ ಸಮಾಚಾರ
ಗೋಕಾಕ: ಕಾಂಗ್ರೆಸ್‌ ಪಕ್ಷ ಎಸ್‌ಸಿ ಮತ್ತು ಎಸ್‌ಟಿ ಸಮುದಾಯವನ್ನು ತಮ್ಮ ವೋಟ್‌ ಬ್ಯಾಂಕ್‌ ಆಗಿ ಬಳಸಿಕೊಂಡಿದ್ದಾರೆ. ಕಾಂಗ್ರೆಸ್‌ ಪಕ್ಷದಿಂದ ಎಸ್‌ಸಿ, ಎಸ್‌ಟಿ, ಅಲ್ಪಸಂಖ್ಯಾತರ ಹಾಗೂ ಹಿಂದುಳಿದ ವರ್ಗಗಳ ಅಭಿವೃದ್ಧಿಯಾಗಿಲ್ಲ. ಎಲ್ಲರನ್ನೂ ಒಗ್ಗೂಡಿಸಿ ಕರೆದುಕೊಂಡು ಹೋಗುತ್ತಿರುವ ಪ್ರಧಾನಿ ನರೇಂದ್ರ ಮೋದಿಯವರನ್ನು ಬೆಂಬಲಿಸುವಂತೆ ಶಾಸಕ ರಮೇಶ ಜಾರಕಿಹೊಳಿ ಹೇಳಿದರು.

Advertisement

ಅವರು ನಗರದ ನ್ಯೂ ಇಂಗ್ಲಿಷ್‌ ಶಾಲೆ ಆವರಣದಲ್ಲಿ ನಡೆದ ಬೆಳಗಾವಿ ಲೋಕಸಭಾ ಬಿಜೆಪಿ ಅಭ್ಯರ್ಥಿ ಜಗದೀಶ ಶೆಟ್ಟರ ಪ್ರಚಾರ ಸಭೆ ಉದ್ಘಾಟಿಸಿ ಮಾತನಾಡಿ, ಮುಸ್ಲಿಮ್‌ ಸಮುದಾಯದವರು ಸಹ ಭಾರತೀಯರೇ. ಕಾಂಗ್ರೆಸ್‌ ಪಕ್ಷದ ಸುಳ್ಳು ಭರವಸೆಗಳಿಗೆ ಕಿವಿಗೊಡದೆ ಪ್ರಧಾನಿ ನರೇಂದ್ರ ಮೋದಿಯವರನ್ನು ಈ ಬಾರಿ ಮುಸ್ಲಿಂ ಸಮುದಾಯ ಬೆಂಬಲಿಸಿ ಅವರ ಕೈ ಬಲಪಡಿಸಬೇಕು.

ಎಲ್ಲರೊಡನೆ ಎಲ್ಲರ ಶ್ರೇಯೋಭಿವೃದ್ಧಿ ಬಯಸುವ ಪ್ರಧಾನಿ ನರೇಂದ್ರ ಮೋದಿ ಮೂರನೇ ಬಾರಿಗೆ ಪ್ರಧಾನಿಯಾಗಿಸಲು ನಾವೆಲ್ಲರೂ ಶ್ರಮಿಸೋಣ ಎಂದರು. ಕಾಂಗ್ರೆಸ್‌ ಪಕ್ಷ ನೀಡುತ್ತಿರುವ ಗ್ಯಾರಂಟಿಗಳು ಚುನಾವಣೆ ಗಿಮಿಕ್‌. ಚುನಾವಣೆ ನಂತರ ಎಲ್ಲವನ್ನೂ ಸ್ಥಗಿತಗೊಳಿಸಲಿದ್ದಾರೆ. ಕಾಂಗ್ರೆಸ್‌ನ ಬಿಟ್ಟಿ ಭಾಗ್ಯಗಳು ಮುಂದುವರೆದಲ್ಲಿ ಪಾಕಿಸ್ತಾನ, ಶ್ರೀಲಂಕಾ ದೇಶಗಳಂತೆ ಅರಾಜಕತೆ ಸೃಷ್ಟಿಯಾಗುತ್ತದೆ. ದೇಶದ ಭದ್ರತೆ, ಅಭಿವೃದ್ಧಿಯ ಚುನಾವಣೆ ಇದಾಗಿದ್ದು ಹಗಲಿರುಳು ದೇಶಕ್ಕಾಗಿ ದುಡಿಯುತ್ತಿರುವ ಉಕ್ಕಿನ ಮನುಷ್ಯ ಮೋದಿಯವರನ್ನು ಬೆಂಬಲಿಸೋಣ. ಅವರು ಪ್ರಧಾನಿ ಆಗುವದು ನಿಶ್ಚಿತ.

ಅದರೊಂದಿಗೆ ಜಗದೀಶ ಶೆಟ್ಟರ ಮಂತ್ರಿಯಾಗುವುದು ಜಿಲ್ಲೆಯ ಅಭಿವೃದ್ಧಿಗೆ ಸಹಕಾರಿಯಾಗುತ್ತದೆ. ಬೆಳಗಾವಿ ಜಿಲ್ಲೆಗೆ ಬಿಜೆಪಿ ಪಕ್ಷ ಅನೇಕ ಕೊಡುಗೆಗಳನ್ನು ನೀಡಿದೆ. ಕಳೆದ ಬಿಜೆಪಿ ಸರಕಾರದಲ್ಲಿ ತಾಲೂಕಿನ ಶಿವಾಪೂರ ಗ್ರಾಮದಲ್ಲಿ ಇಂಡಸ್ಟ್ರಿಯಲ್‌ ಪಾರ್ಕ್‌ ಸ್ಥಾಪಿಸಲು ಸರ್ವೇ ಮಾಡಿಸಲಾಗಿತ್ತು, ಕಾಂಗ್ರೆಸ್‌ ಅಧಿ ಕಾರಕ್ಕೆ ಬಂದಿದ್ದರಿಂದ ಆ ಯೋಜನೆ ಸ್ಥಗಿತಗೊಂಡಿದೆ. ಬಿಜೆಪಿ ಅಭ್ಯರ್ಥಿ ಜಗದೀಶ ಶೆಟ್ಟರ ಅನುಭವಿ ರಾಜಕಾರಣಿ.

ಅವರ ಮೂಲಕ ಬರುವ ದಿನಗಳಲ್ಲಿ ಕೈಗಾರಿಕೆ, ನೀರಾವರಿ, ಆಧುನಿಕ ತಂತ್ರಜ್ಞಾನದ ಕೃಷಿ ಸೇರಿದಂತೆ ಇನ್ನಿತರ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವುದರೊಂದಿಗೆ ಜಿಲ್ಲೆ ಅಭಿವೃದ್ಧಿಯಾಗುತ್ತದೆ. ಜಗದೀಶ ಶೆಟ್ಟರ ಅವರು ನನ್ನ ಮಿತ್ರರಾಗಿದ್ದು ಅವರಿಗೆ ತಮ್ಮ ಮತವನ್ನು ನೀಡಿ ಆಶೀರ್ವದಿ ಸುವಂತೆ ಪ್ರಧಾನಿ ಮೋದಿಯವರೇ ಹೇಳಿದ್ದು, ಬಿಜೆಪಿಗೆ ಮತ ನೀಡುವಂತೆ ಮನವಿ ಮಾಡಿದರು.

Advertisement

ಅಭ್ಯರ್ಥಿ ಜಗದೀಶ ಶೆಟ್ಟರ ಮಾತನಾಡಿ, ನರೇಂದ್ರ ಮೋದಿಯವರು ದೇಶದ ಆಸ್ತಿಯಾಗಿದ್ದು ಅವರಂತಹ ಮತ್ತೊಬ್ಬ ಪ್ರಧಾನಿ ಸಿಗಲು ಸಾಧ್ಯವಿಲ್ಲ. ತಮ್ಮ ದಕ್ಷ ಆಡಳಿತದಿಂದ ದೇಶ ವಿದೇಶಗಳಲ್ಲಿ ಜನಪ್ರಿಯರಾಗಿದ್ದಾರೆ. ಯುದ್ಧಕಾಲದಲ್ಲಿ ಭಾರತೀಯರನ್ನು ಸುರಕ್ಷಿತವಾಗಿ ಕರೆ ತಂದಿದ್ದಾರೆ ಎಂದರು.

ವೇದಿಕೆ ಮೇಲೆ ಬೆಳಗಾವಿ ಜಿಲ್ಲಾ ಬಿಜೆಪಿ ಗ್ರಾಮಾಂತರ ಅಧ್ಯಕ್ಷ ಸುಭಾಸ ಪಾಟೀಲ, ಮಾಜಿ ಶಾಸಕ ಎಮ್‌ ಎಲ್‌ ಮುತ್ತೇನ್ನವರ, ಕೆಎಲ್‌ಇ ನಿರ್ದೇಶಕ ಜಯಾನಂದ ಮುನವಳ್ಳಿ, ಪ್ರಭಾ ಶುಗರ್ ಅಧ್ಯಕ್ಷ ಅಶೋಕ ಪಾಟೀಲ, ಬಿಜೆಪಿ ನಗರ ಮಂಡಲ ಅಧ್ಯಕ್ಷ ಭೀಮಶಿ ಭರಮನ್ನವರ, ಗ್ರಾಮೀಣ ಅಧ್ಯಕ್ಷ ರಾಜೇಂದ್ರ ಗೌಡಪ್ಪಗೋಳ, ಚಿಕ್ಕರೇವಣ್ಣ, ಕೆ ವಿ ಪಾಟೀಲ ಇದ್ದರು. ನ್ಯಾಯವಾದಿ ಎಲ್‌ ಎಚ್‌ ಭಂಡಿ ಸ್ವಾಗತಿಸಿ, ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next