ಫೈಜಾಬಾದ್, ಉತ್ತರ ಪ್ರದೇಶ : ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವನ್ನು ವಿರೋಧಿಸುವ ಮುಸ್ಲಿಮರು ಪಾಕಿಸ್ಥಾನ ಇಲ್ಲವೇ ಬಾಂಗ್ಲಾದೇಶಕ್ಕೆ ಹೋಗಬೇಕು ಎಂದು ಉತ್ತರ ಪ್ರದೇಶದ ಶಿಯಾ ವಕ್‌ಫ್ ಮಂಡಳಿ ಅಧ್ಯಕ್ಷ ವಸೀಂ ರಿಜ್ವಿ ಹೇಳಿದ್ದಾರೆ.
ಬಾಬರಿ ಮಸೀದಿ/ರಾಮ ಜನ್ಮಭೂಮಿ ವಿವಾದದ ವಿಚಾರಣೆಯನ್ನು ಇದೇ ಫೆ.8ರ ಗುರುವಾರದಂದು ಸುಪ್ರೀಂ ಕೋರ್ಟ್ ಕೈಗೆತ್ತಿಕೊಳ್ಳಲಿದೆ.
ರಿಜ್ವಿ ಅವರು ನಿನ್ನೆ ಶುಕ್ರವಾರದ ಪ್ರಾರ್ಥನೆಯನ್ನು ವಿವಾದಿತ ಅಯೋಧ್ಯೆಯಲ್ಲಿ ಕೈಗೊಂಡು ಬಳಿಕ ರಾಮಜನ್ಮಭೂಮಿಯ ಪ್ರಧಾನ ಅರ್ಚಕ ಆಚಾರ್ಯ ಸತ್ಯೇಂದ್ರ ದಾಸ್ ಅವರನ್ನು ಭೇಟಿಯಾದರು.
ಈ ಸಂದರ್ಭದಲ್ಲಿ ರಿಜ್ವಿ ಅವರು ಮಾತನಾಡುತ್ತಾ, “ಅಯೋಧ್ಯೆಯಲ್ಲಿ ರಾಮ ಜನ್ಮಭೂಮಿ ದೇವಳ ನಿರ್ಮಾಣವನ್ನು ವಿರೋಧಿಸುವ ಕಟ್ಟಾ ಮೂಲಭೂತವಾದಿ ಮುಸ್ಲಿಮರು ಪಾಕಿಸ್ಥಾನಕ್ಕೆ ಮತ್ತು ಬಾಂಗ್ಲಾದೇಶಕ್ಕೆ ಹೋಗಬೇಕು; ಅಂತಹ ಮುಸ್ಲಿಮರಿಗೆ ಭಾರತದಲ್ಲಿ ಅವಕಾಶ ಇಲ್ಲ’ ಎಂದು ಹೇಳಿದರು.
ಮಸೀದಿ ಹೆಸರಲ್ಲಿ ಜಿಹಾದ್ ಹರಡಲು ಬಯಸುವವರು ಸಿರಿಯದಲ್ಲಿನ ಐಸಿಸ್ ಮುಖ್ಯಸ್ಥ ಅಬು ಬಕ್‌ರ್ ಬಾಗ್ಧಾದಿಯ ಪಡೆಯನ್ನು ಸೇರಿಕೊಳ್ಳಲು ಹೋಗಬೇಕು ಎಂದು ರಿಜ್ವಿ ಹೇಳಿದರು.
ಮೂಲಭೂತವಾದಿ ಮುಸ್ಲಿಂ ಮತಪಂಡಿತರು ಭಾರತವನ್ನು ನಾಶ ಮಾಡಲು ಯತ್ನಿಸುತ್ತಿದ್ದಾರೆ. ಅವರು ಪಾಕಿಸ್ಥಾನಕ್ಕೆ ಮತ್ತು ಅಫ್ಘಾನಿಸ್ಥಾನಕ್ಕೆ ಹೋಗಬೇಕು ಎಂದು ರಿಜ್ವಿ ಟೀಕಿಸಿದರು.
ರಿಜ್ವಿ ಅವರ ಈ ಮಾತುಗಳಿಗೆ ಪ್ರತಿಕ್ರಿಯೆ ನೀಡಿರುವ ಶಿಯಾ ಉಲೇಮಾ ಕೌನ್ಸಿಲ್ ಅಧ್ಯಕ್ಷ ಮೌಲಾನಾ ಇಫ್ತಿಕರ್ ಹುಸೇನ್ ಇಂಕಿಲಾಬಿ ಅವರು “ರಿಜ್ವಿ ಒಬ್ಬ ಕ್ರಿಮಿನಲ್; ಆತ ವಕ್‌ಫ್ ಆಸ್ತಿಪಾಸ್ತಿಯನ್ನು ಕಬಳಿಸಿ ಅಕ್ರಮವಾಗಿ ಮಾರುವಲ್ಲಿ ಶಾಮೀಲಾಗಿದ್ದಾರೆ’ ಎಂದು ಹೇಳಿದ್ದಾರೆ.