Advertisement

ಮೇಯರ್‌ ಆಯ್ಕೆಯಲ್ಲಿ  ಮುಸ್ಲಿಮರ ಅವಗಣನೆ

10:09 AM Mar 09, 2018 | |

ಮಂಗಳೂರು: ಮಂಗಳೂರು ಮಹಾ ನಗರ ಪಾಲಿಕೆಯ ಮೇಯರ್‌ ಆಯ್ಕೆ ವಿಚಾರ ದಲ್ಲಿ ನಾನಾ ರೀತಿಯ ಲೆಕ್ಕಾಚಾರ- ಲಾಬಿಯ ಬಳಿಕ ಭಾಸ್ಕರ್‌ ಕೆ. ಅವರನ್ನು ಆಯ್ಕೆ ಮಾಡಿ ರುವುದಕ್ಕೆ ಈಗ ಕಾಂಗ್ರೆಸ್‌ ಪಕ್ಷದೊಳಗೆಯೇ ಸ್ವಲ್ಪ ಮಟ್ಟಿನ ಅಸಮಾಧಾನ ವ್ಯಕ್ತವಾಗಿದೆ. ಕೆಲವು ಶಾಸಕರೇ ಪರೋಕ್ಷವಾಗಿ ನೂತನ ಮೇಯರ್‌ ಆಯ್ಕೆ ಯನ್ನು ವಿರೋಧಿಸಿರುವುದು ವಿಶೇಷ.

Advertisement

ಪಾಲಿಕೆಯಲ್ಲಿ ಕಳೆದ ನಾಲ್ಕು ವರ್ಷಗಳ ಕಾಂಗ್ರೆಸ್‌ ಆಡಳಿತದಲ್ಲಿ ಜಾತಿ ಪ್ರಾತಿನಿಧ್ಯ ಲೆಕ್ಕಾ ಚಾರದಲ್ಲಿ ಮೂವರು ಹಿಂದೂ ಮತ್ತು ಓರ್ವ ಕ್ರೈಸ್ತ ಸಮುದಾಯದವರು ಮೇಯರ್‌ ಆಗಿದ್ದು, ಈ ಹಿನ್ನೆಲೆಯಲ್ಲಿ ಈ ಬಾರಿ ಅದರಲ್ಲಿಯೂ ಅಂತಿಮ ವರ್ಷದ ಆಡಳಿತಾವಧಿಯಲ್ಲಿ ಮುಸ್ಲಿಂ ಸಮುದಾಯದ ಸದಸ್ಯರಿಗೆ ಮೇಯರ್‌ ಹುದ್ದೆಗೆ ಅವಕಾಶ ಕೊಡಬೇಕೆಂಬ ಬೇಡಿಕೆ ಇತ್ತು. ಈ ಬಗ್ಗೆ ಮುಸ್ಲಿಂ ಮುಖಂಡರು ಸಭೆ ನಡೆಸಿ ಕಾಂಗ್ರೆಸ್‌ ನಾಯಕರ ಮೇಲೆ ಒತ್ತಡವನ್ನೂ ತಂದಿದ್ದರು. 

ಇನ್ನೊಂದೆಡೆ ಕೆಲವು ಶಾಸಕರು ಕೂಡ ಈ ಬಾರಿ ಮುಸ್ಲಿಂ ಸಮುದಾಯಕ್ಕೆ ಪ್ರಾತಿನಿಧ್ಯ ಕೊಡ ಬೇಕೆಂದು ಪಟ್ಟು ಹಿಡಿದಿದ್ದರು. ಆದರೆ ಹೈಕಮಾಂಡ್‌ ತೀರ್ಮಾನ ಅವರ ನಿರೀಕ್ಷೆಯನ್ನು ಹುಸಿ ಯಾಗಿಸಿದ್ದು, ಇದರಿಂದ ಬೇಸರ ಗೊಂಡಿ ರುವ ವಿಚಾರ ಇದೀಗ ಬೆಳಕಿಗೆ ಬಂದಿದೆ. ಜತೆಗೆ ಮೇಯರ್‌ ಹುದ್ದೆ ಕೈತಪ್ಪಿದ ಕಾರಣ ತಮ್ಮ ಬೇಡಿಕೆ ಈಡೇರಿಲ್ಲ ಎಂಬ ಅಸಮಾಧಾನ ಮುಸ್ಲಿಂ ಸಮುದಾಯದ ನಾಯಕರಲ್ಲಿಯೂ ಇದೆ.

ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಈ ರೀತಿಯ ತೀರ್ಮಾನಗಳಿಂದ ಹೊಡೆತ ಬೀಳುವ ಆತಂಕ ಕೂಡ ಕೆಲವು ಜನಪ್ರತಿನಿಧಿಗಳನ್ನು ಕಾಡುತ್ತಿರುವುದು ವಾಸ್ತವಾಂಶ. ಈ ಹಿನ್ನೆಲೆಯಲ್ಲಿ ಕೆಲವು ಜನ ಪ್ರತಿನಿಧಿಗಳನ್ನು “ಉದಯವಾಣಿ’ ಸಂಪರ್ಕಿಸಿದಾಗ, ಅದಕ್ಕೆ ಪೂರಕ ಎಂಬಂತೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಆದರೆ ಅಂತಿಮವಾಗಿ ಹೈಕಮಾಂಡ್‌ ತೀರ್ಮಾನಕ್ಕೆ ಬದ್ಧ ವಾಗಿರಬೇಕಾಗುತ್ತದೆ ಎನ್ನುವ ಮೂಲಕ ಪಕ್ಷದ ತೀರ್ಮಾನಕ್ಕೆ ತಲೆಬಾಗಿರುವುದು ಗಮನಾರ್ಹ.

ಹೈಕಮಾಂಡ್‌ನ‌ ತೀರ್ಮಾನ

Advertisement

“ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿ ಯಲ್ಲಿ ಶೇ. 20ರಷ್ಟು ಮುಸ್ಲಿಂ, ಶೇ. 20ರಷ್ಟು ಕ್ರೈಸ್ತ ಹಾಗೂ ಶೇ. 60ರಷ್ಟು ಹಿಂದೂ ಸಮುದಾಯಕ್ಕೆ ಸೇರಿದ ಜನರಿದ್ದಾರೆ. ಪಾಲಿಕೆಯ ಈ ಐದು ವರ್ಷಗಳ ಅವಧಿಯಲ್ಲಿ 3 ಬಾರಿ ಹಿಂದೂ ಸಮುದಾಯಕ್ಕೆ ಹಾಗೂ ಒಂದು ಬಾರಿ ಕ್ರೈಸ್ತ ಸಮುದಾಯಕ್ಕೆ ಮೇಯರ್‌ ಹುದ್ದೆಯನ್ನು ಕಾಂಗ್ರೆಸ್‌ ಪಕ್ಷ ನೀಡಿದೆ. ಹಾಗಿರುವಾಗ ಈ ಬಾರಿ ಮುಸ್ಲಿಂ ಸಮುದಾಯಕ್ಕೆ ಮೇಯರ್‌ ಸ್ಥಾನ ನೀಡಬೇಕೆಂಬ ಬೇಡಿಕೆ ನ್ಯಾಯಬದ್ಧವಾಗಿತ್ತು. ಮುಸ್ಲಿಂ ಸಮುದಾಯಕ್ಕೆ ಮೇಯರ್‌ ಹುದ್ದೆ ನೀಡಬೇಕೆಂದು ನಾನು ಆರಂಭದಿಂದಲೂ ಅಭಿ ಪ್ರಾಯವನ್ನು ಸಾರ್ವಜನಿಕವಾಗಿ ವ್ಯಕ್ತಪಡಿಸಿದ್ದೇನೆ ಹಾಗೂ ಹೈಕಮಾಂಡ್‌ಗೂ ತಿಳಿಸಿದ್ದೆ. ಆದರೆ ಕಾರಣಾಂತರಗಳಿಂದ ಅದಕ್ಕೆ ಮನ್ನಣೆ ಸಿಗಲಿಲ್ಲ. ಆದರೆ ಹೈಕಮಾಂಡ್‌ನ‌ ತೀರ್ಮಾನಕ್ಕೆ ನಾನು ಬದ್ಧ ನಾಗಿರು ತ್ತೇನೆ’ ಎನ್ನುವ ಮೂಲಕ ಶಾಸಕ ಜೆ.ಆರ್‌. ಲೋಬೊ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ. 

ನೋವಾಗಿದೆ; ತೀರ್ಮಾನಕ್ಕೆ ಬದ್ಧ

“ಪಾಲಿಕೆಯ ಈ ಅವಧಿಯಲ್ಲಿ ನಾಲ್ಕು ಬಾರಿ ಮೇಯರ್‌ ಸ್ಥಾನವನ್ನು ನಮಗೆ ನೀಡಿಲ್ಲ; ಹಾಗಾಗಿ ಕೊನೆಯ ಬಾರಿಯಾದರೂ ಕೊಡಿ ಎಂದು ಕೇಳಿದ್ದೆವು. ಹಿರಿಯ ಕಾಂಗ್ರೆಸ್‌ ಕಾರ್ಯಕರ್ತನೆಂಬ ನೆಲೆಯಲ್ಲಿ ನಾನು ಮುಸ್ಲಿಂ ಸಮುದಾಯದ ಪರವಾಗಿ ಬೇಡಿಕೆಯನ್ನು ಮಂಡಿಸಿದ್ದೆ. ಆದರೆ ಹೈಕಮಾಂಡ್‌ ತೀರ್ಮಾನ ಬೇರೆಯೇ ಆಗಿದ್ದು, ಅದಕ್ಕೆ ನಾವು ಬದ್ಧರಾಗಿರುತ್ತೇವೆ. ನಮ್ಮ ಕೂಗಿಗೆ ಸ್ಪಂದಿಸದಿರುವುದಕ್ಕೆ ನೋವಾಗಿರುವುದು ನಿಜ. ಪಕ್ಷದ ನಾಯಕರು ಈ ನೋವು ಶಮನ ಮಾಡಲು ಸೂಕ್ತ ಕ್ರಮ ಕೈಗೊಳ್ಳಬೇಕು’ ಎಂದು ಕೆಪಿಸಿಸಿ ಸದಸ್ಯ ಕಣಚೂರು ಮೋನು ಅವರು ಕೂಡ ತಮ್ಮ ಅಸಮಾಧಾನ ತೋಡಿಕೊಂಡಿದ್ದಾರೆ.

ಕಾಂಗ್ರೆಸ್‌ ಜನಪ್ರತಿನಿಧಿಗಳಿಂದಲೇ ಅಪಸ್ವರ
ದೇವಾಡಿಗ ಸಮಾಜಕ್ಕೆ ಮನ್ನಣೆ
“ಕಾಂಗ್ರೆಸ್‌ ಪಕ್ಷ ಎಲ್ಲ ಜಾತಿ, ಧರ್ಮದವರನ್ನು ಗೌರವಿಸುವ ಪಕ್ಷ. ಹಿರಿತನ ಮತ್ತು ಪಕ್ಷದ ಮುಖಂಡರ ಅಭಿಪ್ರಾಯವನ್ನು ಕ್ರೋಡೀಕರಿಸಿ ಮೇಯರ್‌ ಆಯ್ಕೆ ಮಾಡಲಾಗಿದೆ. ದೇವಾಡಿಗ ಸಮಾಜವು ಸಣ್ಣ ಸಮಾಜ ವಾಗಿದ್ದು, ಅದಕ್ಕೂ ಪ್ರಾತಿನಿಧ್ಯ ನೀಡ ಬೇಕಾಗಿದೆ. ಹಾಗಾಗಿ ಇದನ್ನೂ ಇಲ್ಲಿ ಪರಿಗಣಿಸ ಲಾಗಿದೆ. ಹಲವು ಮಂದಿ ಆಕಾಂಕ್ಷಿಗಳಿರುವಾಗ ಒಬ್ಬರಿಗೆ ನೀಡಿದಾಗ ಇನ್ನೊಬ್ಬರಿಗೆ ಅಥವಾ ಅವರ ಸಮು ದಾಯಕ್ಕೆ ಅಸಮಾಧಾನ ಆಗುವುದು ಸಹಜ. ಎಲ್ಲರನ್ನೂ ಸಮಾಧಾನಪಡಿಸುವುದು ಕಷ್ಟ. ಮುಸ್ಲಿಂ ಸಮುದಾಯ ದವರಿಗೆ ಹಲವು ಅವಕಾಶ ನೀಡಲಾಗಿದೆ. ಇಬ್ಬರು ಶಾಸಕರು, ಜಿ.ಪಂ. ಸ್ಥಾಯೀ ಸಮಿತಿ, ತಾ.ಪಂ. ಅಧ್ಯಕ್ಷ ಹುದ್ದೆ ನೀಡಲಾಗಿದೆ. ಇನ್ನು ಪಾಲಿಕೆಯಲ್ಲಿ ಸ್ಥಾಯೀ ಸಮಿತಿಗಳೂ ಇವೆ’ ಎಂದು ಮೇಯರ್‌ ಆಯ್ಕೆ ವಿಚಾರ ದಲ್ಲಿ  ನಿರ್ಣಾಯಕ ಪಾತ್ರ ವಹಿಸಿದ್ದ ಸಚಿವ ರಮಾನಾಥ ರೈ ಅವರು ಪ್ರತಿಕ್ರಿಯಿಸಿದ್ದಾರೆ. 

ಭಾಸ್ಕರ್‌ ಆಯ್ಕೆಗೆ ಅಸಮಾಧಾನವಿಲ್ಲ
ಇನ್ನು ಮೇಯರ್‌ ಹುದ್ದೆಗೆ ಈ ಬಾರಿ ಪ್ರಬಲ ಆಕಾಂಕ್ಷಿಯಾಗಿದ್ದ ಪಾಲಿಕೆ ಸದಸ್ಯ ಅಬ್ದುಲ್‌ ರವೂಫ್‌, “ಭಾಸ್ಕರ್‌ ಕೆ. ಅವರಿಗೆ ಮೇಯರ್‌ ಆಗುವ ಯೋಗವಿತ್ತು; ಹಾಗಾಗಿ ಅವರು ಮೇಯರ್‌ ಆಗಿದ್ದಾರೆ. ಮೇಯರ್‌ ಹುದ್ದೆಗೆ ನಾನೂ ಆಕಾಂಕ್ಷಿಯಾಗಿದ್ದೆ, ಭಾಸ್ಕರ್‌ ಕೆ. ಅವರೂ ಆಕಾಂಕ್ಷಿಯಾಗಿದ್ದರು. ಅವರು ನನ್ನ ಸ್ನೇಹಿತ. ಅವರು ಮೇಯರ್‌ ಆದ ಬಗ್ಗೆ ನನಗೆ ಅಸಮಾಧಾನವಿಲ್ಲ. ಅವರಿಗೆ ಶುಭ ಹಾರೈಸಿದ್ದೇನೆ’ ಎಂದು ಪ್ರತಿಕ್ರಿಯಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next