ಅಹಮದಾಬಾದ್: “ವಿಶ್ವದ 150 ಇಸ್ಲಾಮಿಕ್ ರಾಷ್ಟ್ರಗಳಲ್ಲಿ ಯಾವುದಾದರೂ ಒಂದು ದೇಶಕ್ಕೆ ಹೋಗಲು ಮುಸ್ಲಿಮರಿಗೆ ಅವಕಾಶವಿದೆ. ಆದರೆ ಹಿಂದೂಗಳಿಗಿರುವುದು ಭಾರತ ದೇಶ ಒಂದು ಮಾತ್ರ” ಎಂದು ಹೇಳುವ ಮೂಲಕ ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಸಮರ್ಥಿಸಿಕೊಂಡಿದ್ದಾರೆ.
ಅಹಮದಾಬಾದ್‌ನ ಸಬರಮತಿ ಆಶ್ರಮದಲ್ಲಿ ನಡೆದ ರ್ಯಾಲಿಯಲ್ಲಿ ಅವರು ನೂತನ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸುತ್ತಿರುವ ಕಾಂಗ್ರೆಸ್ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದರು.
ಈ ವಿಷಯದಲ್ಲಿ ಮಹಾತ್ಮ ಗಾಂಧಿ ಮತ್ತು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಆಶಯಗಳನ್ನು ಕಾಂಗ್ರೆಸ್ ಗೌರವಿಸುತ್ತಿಲ್ಲ ಎಂದು ಅವರು ಆರೋಪಿಸಿದರು.
ದೇಶ ವಿಭಜನೆಗೊಂಡಾಗ ಪಾಕಿಸ್ತಾನದಲ್ಲಿ ಶೇ. 22 ರಷ್ಟು ಹಿಂದೂಗಳಿದ್ದರು. ಆದರೆ, ಈಗ ಅತ್ಯಾಚಾರ, ನಿರಂತರ ದೌರ್ಜನ್ಯದಿಂದ ಅಲ್ಲಿನ ಹಿಂದೂಗಳ ಸಂಖ್ಯೆ ಶೇ. 3 ರಷ್ಟಾಗಿದೆ. ಆದ್ದರಿಂದ ಹಿಂದೂಗಳು ಭಾರತಕ್ಕೆ ವಾಪಾಸ್ ಬರಬೇಕಾಗಿದೆ ಎಂದರು. ಈ ತೊಂದರೆಗೀಡಾದ ಹಿಂದೂಗಳಿಗೆ ಸಹಾಯ ಮಾಡಲು ಕಾಂಗ್ರೆಸ್ ಏನು ಮಾಡಬೇಕೋ ಅದನ್ನು ನಾವು ಮಾಡುತ್ತಿದ್ದೇವೆ. ಆದರೆ, ನೀವು ವಿರೋಧಿಸುತ್ತಿದ್ದೀರಿ ಎಂದು ವಾಗ್ದಾಳಿ ನಡೆಸಿದರು.
ಬಾಂಗ್ಲಾದೇಶದಲ್ಲಿ ಹಿಂದೂಗಳ ಸಂಖ್ಯೆ ಶೇ. 2, ಕೆಲ ದಶಕಗಳ ಹಿಂದೆ 2 ಲಕ್ಷ ಹಿಂದೂಗಳು ಹಾಗೂ ಸಿಖ್ಖರು ವಾಸಿಸುತ್ತಿದ್ದ ಅಪ್ಘಾನಿಸ್ತಾನದಲ್ಲಿ ಈಗ ಹಿಂದೂಗಳ ಸಂಖ್ಯೆ 500 ಆಗಿದೆ. ಮುಸ್ಲಿಂರು 150 ರಾಷ್ಟ್ರಗಳಲ್ಲಿ ಏಲ್ಲಿ ಬೇಕಾದರೂ ವಾಸಿಸಬಹುದು ಆದರೆ, ಹಿಂದೂಗಳಿಗೆ ಭಾರತ ಬಿಟ್ಟರೇ ಬೇರೆ ರಾಷ್ಟ್ರವಿಲ್ಲ. ಆದ್ದರಿಂದ ಅವರು ವಾಪಾಸ್ ದೇಶಕ್ಕೆ ಮರಳಿದರೆ ಏನು ತೊಂದರೆ ಎಂದು ರೂಪಾನಿ ಈ ವೇಳೆ ಪ್ರಶ್ನಿಸಿದರು.