ಕಾರವಾರ: ಭಯೋತ್ಪಾದನೆ ವಿರುದ್ಧ ವಿರೋಧಿ ಹೇಳಿಕೆಗಳನ್ನು ಆಗಾಗ ನೀಡುತ್ತಾ, ಮುಸ್ಲಿಂ ಮತಗಳು ನನಗೆ ಬೇಕಿಲ್ಲ ಎಂದು ಬಹಿರಂಗವಾಗಿಯೇ ಹೇಳುತ್ತಿದ್ದ ಉತ್ತರ ಕನ್ನಡ ಜಿಲ್ಲೆಯ ಸಂಸದ ಹಾಗೂ ಕೇಂದ್ರ ಸಚಿವ ಅನಂತ ಕುಮಾರ ಹೆಗಡೆ ಈಗ ಮುಸ್ಲಿಂ ಸಮುದಾಯದ ಮಹಿಳೆ ಪರ ನಿಂತಿರುವುದು ಈಚಿನ ಅವರ ಕಾರವಾರ ಭೇಟಿಯಲ್ಲಿ ಸ್ಪಷ್ಟವಾಗಿದೆ. ಅನಂತಕುಮಾರ್ ಹೆಗಡೆ ಮೃದು ಹಿಂದುತ್ವದ ಮೊರೆ ಹೋದರೆ ಎಂಬ ಅನುಮಾನ ಅವರ ಕಟ್ಟಾ ಬೆಂಬಲಿಗರನ್ನು ಕಾಡುತ್ತಿದೆ.
ಕಾರವಾರ ನಗರಸಭೆ ಚುನಾವಣೆಯಲ್ಲಿ ವಾರ್ಡ್ ನಂ.15 ರಲ್ಲಿ ಬಿಜೆಪಿ ಶಗುಪ್ತಾ ಸಿದ್ದಿಕಿ ಅವರನ್ನು ಕಣಕ್ಕಿಳಿಸಿದೆ. ಕಾರವಾರ ನಗರಸಭೆ ಚುನಾವಣೆಯ ಇತಿಹಾಸದಲ್ಲೇ ಮೊಟ್ಟ ಮೊದಲ ಬಾರಿಗೆ ಬಿಜೆಪಿ ಮುಸ್ಲಿಂ ಮಹಿಳೆಯನ್ನು ಅಭ್ಯರ್ಥಿಯಾಗಿ ಆಯ್ಕೆ ಮಾಡಿದೆ. ಇದು ಹಲವರ ಹುಬ್ಬೇರುವಂತೆ ಮಾಡಿದೆ.
ಕಳೆದ ವಿಧಾನಸಭಾ ಚುನಾವಣೆಯ ಪ್ರಚಾರ ಸಭೆಗಳಲ್ಲಿ ಅಲ್ಪಸಂಂಖ್ಯಾತ ಸಮುದಾಯವೊಂದರ ವಿರುದ್ಧ ಉಗ್ರ ಭಾಷಣದ ಮೂಲಕ ಪ್ರಹಾರ ನಡೆಸಿದ್ದ ಕೇಂದ್ರ ಸಚಿವ ಹಿಂದೂ ಮತಬ್ಯಾಂಕ್ ಒಂದೆಡೆ ಸೇರಿಸುವಲ್ಲಿ ಯಶಸ್ವಿಯಾಗಿದ್ದರು. ಜಿಲ್ಲೆಯಲ್ಲಿ 4 ಬಿಜೆಪಿ ಶಾಸಕರು ಆಯ್ಕೆಯಾಗಲೂ ಸಹ ಕಾರಣರಾಗಿದ್ದರು. ಈ ಹಿಂದಿನ ಎರಡು ಲೋಕಸಭಾ ಚುನಾವಣೆ ಸಂದರ್ಭದಲ್ಲೂ ಮುಸ್ಲಿಂರ ಮತದ ಅವಶ್ಯಕತೆ ನಮಗಿಲ್ಲ. ಮುಸ್ಲಿಂರು ತನಗೆ ಮತ ನೀಡುವುದು ಸಹ ಬೇಡ ಎಂದು ಬಹಿರಂಗವಾಗಿ ಹೇಳಿದ್ದರು. ಇದರಿಂದ ಜಿಲ್ಲೆಯ ಸುಮಾರು ಎರಡೂವರೆ ಲಕ್ಷದಷ್ಟು ಮುಸ್ಲಿಂ ಸಮುದಾಯದ ಮತಗಳು ಹೆಗಡೆ ವಿರುದ್ಧ ಚಲಾವಣೆಯಾಗುತ್ತವೆ ಎಂದು ಲೆಕ್ಕಾಚಾರ ಹಾಕಲಾಗಿತ್ತು. ಅವರ ಹೇಳಿಕೆಯಿಂದ ಹಿಂದೂ ಮತಗಳು ಧ್ರುವೀಕರಣವಾಗಿ ಒಟ್ಟಾಗಿ ಅತೀ ಹೆಚ್ಚಿನ ಅಂತರದಿಂದ ಅವರು ಗೆಲ್ಲಲು ಸಹಾಯವಾಗಿತ್ತು ಎಂಬುದು ರಾಜಕೀಯ ಲೆಕ್ಕಾಚಾರವಾಗಿತ್ತು. ಆದರೆ ಈ ಬಾರಿಯ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಅನಂತಕುಮಾರ ಹೆಗಡೆ ತನ್ನ ಈ ಕಟ್ಟಾ ಹಿಂದುತ್ವದ ಧೋರಣೆ ಕೈ ಬಿಟ್ಟರೇ?.
ಬಿಜೆಪಿ ಅಭ್ಯರ್ಥಿ ಹೇಳುವುದು ಹೀಗೆ: ಕಳೆದ ಅನೇಕ ವರ್ಷಗಳಿಂದ ಪತಿ ಜೊತೆ ಗಲ್ಫ್ ನಲ್ಲಿದ್ದೆ. ತಾನು ಆಗಿನಿಂದಲೇ ಬಿಜೆಪಿ ಮತ್ತು ಪ್ರಧಾನಿ ನರೇಂದ್ರ ಮೋದಿಯವರ ಅಭಿಮಾನಿಯಾಗಿದ್ದೆ. ಬಿಜೆಪಿ ಮುಸ್ಲಿಂ ವಿರೋಧಿ ಎಂಬುದು ಶುದ್ಧ ಸುಳ್ಳು. ವಾರ್ಡ್ ನಂ. 15ರಿಂದ ಟಿಕೆಟ್ ಬಯಸಿ ತಾನು ಬಿಜೆಪಿಯನ್ನು ಸಂಪರ್ಕಿಸಿದೆ. 15ನೇ ವಾರ್ಡ್‌ನಲ್ಲಿ ನಾಲ್ಕೈದು ಟಿಕೆಟ್ ಆಕಾಂಕ್ಷಿಗಳಿದ್ದರೂ ಸಹ, ಪಕ್ಷ ತನ್ನನ್ನು ಗುರುತಿಸಿ ಟಿಕೇಟ್ ನೀಡಿದೆ. ನನ್ನ ವಾರ್ಡ್‌ನಲ್ಲಿ ಮುಸ್ಲಿಂ ಸಮುದಾಯದ ಮತದಾರರು ಹೆಚ್ಚಿದ್ದು ಕಣದಲ್ಲಿ ನಾಲ್ಕು ಮುಸ್ಲಿಂ ಅಭ್ಯರ್ಥಿಗಳಿದ್ದಾರೆ. ಆದರೂ ಮುಸ್ಲಿಂ ಸಮುದಾಯದವರು ನನ್ನ ಬೆಂಬಲಿಸಲಿದ್ದಾರೆ ಹಾಗೂ ಮುಸ್ಲಿಂ ಮಹಿಳೆಯರು ಬಹಿರಂಗವಾಗಿ ನನಗೆ ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ ಎಂದರು.
ಅನುಮಾನ: ಬಿಜೆಪಿಯು ಮುಸ್ಲಿಂ ಮಹಿಳೆಯನ್ನು ಕಣಕ್ಕಿಳಿಸಿರುವುದರ ಬಗ್ಗೆ ಇತರೆ ಪಕ್ಷ ಹಾಗೂ ಪಕ್ಷೇತರ ಮುಸ್ಲಿಂ ಅಭ್ಯರ್ಥಿಗಳು ಬಿಜೆಪಿಯ ನಡೆಯ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದಾರೆ. ಬಿಜೆಪಿ ಮುಸ್ಲಿಂ ಸಮುದಾಯವನ್ನು ಮಹಿಳೆ, ಪುರುಷರೆಂದು ವಿಭಜಿಸುತ್ತಿದೆ. ತ್ರಿವಳಿ ತಲಾಖ್ ನಿಷೇಧ ಇತ್ಯಾದಿ ಮೂಲಕ ಪ್ರಧಾನಿ ಮೋದಿ ಮುಸ್ಲಿಂ ಸಮುದಾಯದ ಮಹಿಳೆಯರಿಗೆ ಅನುಕೂಲ ಮಾಡಿಕೊಡುತ್ತಿದ್ದಾರೆ ಎಂದು ಸುಳ್ಳು ಸುದ್ದಿ ಪ್ರಚಾರ ಮಾಡಲಾಗುತ್ತಿದೆ. ಆದರೆ ಇಂಥ ಸುಳ್ಳಿನ ಆಟ ಬಹಳ ದಿನ ನಡೆಯದು ಎಂದು ಅಭ್ಯರ್ಥಿ ಹೇಳುತ್ತಿದ್ದಾರೆ.