ಮಹಾರಾಷ್ಟ್ರ: ಅಫ್ಘಾನಿಸ್ತಾನದ 35 ವರ್ಷದ ಮುಸ್ಲಿಂ ಆಧ್ಯಾತ್ಮಿಕ ಗುರುವನ್ನು ಮಹಾರಾಷ್ಟ್ರದ ನಾಸಿಕ್ ನಲ್ಲಿ ಮಂಗಳವಾರ (ಜುಲೈ 05) ಗುಂಡಿಕ್ಕಿ ಹತ್ಯೆಗೈದಿರುವ ಘಟನೆ ನಡೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ:ಚಂದ್ರಶೇಖರ ಗುರೂಜಿ ಹತ್ಯೆ ಪ್ರಕರಣ : ಮರಣೋತ್ತರ ಪರೀಕ್ಷೆಯಲ್ಲಿ ಮಹತ್ವದ ಸುಳಿವು
ಸ್ಥಳೀಯವಾಗಿ ಸೂಫಿ ಬಾಬಾ ಎಂದೇ ಜನಪ್ರಿಯರಾಗಿದ್ದ ಖ್ವಾಜಾ ಸೈಯದ್ ಚಿಶ್ತಿಯ ತಲೆಗೆ ಗುಂಡಿಟ್ಟು ಹತ್ಯೆ ಮಾಡಲಾಗಿದೆ. ಹಂತಕರು ಸೈಯದ್ ಚಿಶ್ತಿ ಅವರ ವಾಹನದಲ್ಲಿಯೇ ಪರಾರಿಯಾಗಿರುವುದಾಗಿ ವರದಿ ವಿವರಿಸಿದೆ.
ಸೈಯದ್ ಚಿಶ್ತಿಯ ವಾಹನ ಚಾಲಕನ ಪ್ರಮುಖ ಕೊಲೆ ಆರೋಪಿ ಎಂದು ಶಂಕಿಸಲಾಗಿದೆ. ಪೊಲೀಸರ ಮಾಹಿತಿ ಪ್ರಕಾರ, ಸೈಯದ್ ಚಿಶ್ತಿ ನಾಸಿಕ್ ನ ಯೆಯೋಲಾ ನಗರದಲ್ಲಿ ಹಲವಾರು ವರ್ಷಗಳಿಂದ ವಾಸವಾಗಿರುವುದಾಗಿ ತಿಳಿಸಿದ್ದಾರೆ.
ಬಾಬಾ ಹತ್ಯೆಯ ಹಿಂದೆ ಯಾವುದೇ ಧಾರ್ಮಿಕ ಉದ್ದೇಶ ಇಲ್ಲ ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ಸಾಕ್ಷಿಗಳ ಹೇಳಿಕೆ ಆಧಾರದಲ್ಲಿ ಸೈಯದ್ ಚಿಶ್ತಿಯ ಚಾಲಕನ ವಿರುದ್ಧ ಎಫ್ ಐಆರ್ ದಾಖಲಿಸಿದ್ದು, ಶಂಕಿತರ ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿ ಸಚಿನ್ ಪಾಟೀಲ್ ಮಾಹಿತಿ ನೀಡಿದ್ದಾರೆ.
ಸೈಯದ್ ಚಿಶ್ತಿಯ ಕೊಲೆಗೆ ಕಾರಣ ಏನೆಂದು ಈವರೆಗೆ ತಿಳಿದು ಬಂದಿಲ್ಲ. ಅಫ್ಘಾನಿಸ್ತಾನದ ಪ್ರಜೆಯಾದ ಹಿನ್ನೆಲೆಯಲ್ಲಿ ನಾಸಿಕ್ ನಲ್ಲಿ ಭೂಮಿ ಖರೀದಿಸಲು ಸಾಧ್ಯವಾಗದ ಪರಿಣಾಮ ಸ್ಥಳೀಯ ಜನರ ಸಹಾಯದಿಂದ ಚಿಶ್ತಿ ಭೂಮಿಯನ್ನು ಸ್ವಾಧೀನಪಡಿಸಿಕೊಂಡಿದ್ದು, ಈ ಹಿನ್ನೆಲೆಯಲ್ಲಿ ಕೊಲೆ ನಡೆದಿರುವ ಸಾಧ್ಯತೆ ಇದೆ ಎಂದು ಪಾಟೀಲ್ ತಿಳಿಸಿದ್ದಾರೆ.