ಬೆಂಗಳೂರು: ಆಂಜನೇಯ ಸ್ವಾಮಿ ದೇವಸ್ಥಾನ ಜೀರ್ಣೋದ್ಧಾರಕ್ಕಾಗಿ ಬೆಂಗಳೂರಿನ ಮುಸ್ಲಿಂ ಉದ್ಯಮಿಯೊಬ್ಬರು ಜಾಗವನ್ನು ದೇಣಿಗೆಯಾಗಿ ನೀಡುವ ಮೂಲಕ ಸಾಮಾಜಿಕ ಅಂತರ್ಜಾಲತಾಣದಲ್ಲಿ ಎಲ್ಲರ ಪ್ರಶಂಸೆಗೆ ಕಾರಣರಾಗಿದ್ದಾರೆ ಎಂದು ವರದಿ ತಿಳಿಸಿದೆ.
ಬೆಂಗಳೂರು-ಹೊಸಕೋಟೆ ಹೈವೇ ಸಮೀಪ ಇರುವ ಆಂಜನೇಯ ಸ್ವಾಮಿ ದೇವಾಲಯದ ಪುನರ್ ನಿರ್ಮಾಣ ಕಾರ್ಯಕ್ಕಾಗಿ ನಗರದ ಕಾಡುಗೋಡಿ ನಿವಾಸಿ ಎಚ್ ಎಂಜಿ ಬಾಷಾ ಅವರು ಸುಮಾರು 80ಲಕ್ಷ ರೂಪಾಯಿ ಮೌಲ್ಯದ ಸ್ಥಳವನ್ನು ದಾನವಾಗಿ ನೀಡಿದ್ದಾರೆ.
ಬೆಂಗಳೂರು ಗ್ರಾಮಾಂತರ ಪ್ರದೇಶದ ವಲಗೇರಪುರದಲ್ಲಿರುವ ಚಿಕ್ಕ ಹನುಮಾನ್ ಗುಡಿ ಸಮೀಪ ಉದ್ಯಮಿ ಬಾಷಾ ಅವರು ಮೂರು ಎಕರೆ ಜಮೀನು ಹೊಂದಿದ್ದರು. ಭಕ್ತರು ತುಂಬಾ ಇಕ್ಕಟ್ಟಾದ ಸ್ಥಳದಲ್ಲಿ ಪೂಜೆ ಸಲ್ಲಿಸುವುದನ್ನು ಗಮನಿಸಿದ ನಂತರ ಸ್ವಲ್ಪ ಜಾಗವನ್ನು ದೇವಾಲಯಕ್ಕೆ ನೀಡಲು ನಿರ್ಧರಿಸಿರುವುದಾಗಿ ಬಾಷಾ ತಿಳಿಸಿದ್ದಾರೆ.
ಇದನ್ನೂ ಓದಿ:ಆ್ಯಪಲ್ ನ ಮೊದಲ Headphone ಬಿಡುಗಡೆ: ಇದರ ಬೆಲೆ, ವಿಶೇಷತೆಗಳ ಮಾಹಿತಿ ಇಲ್ಲಿದೆ
ಹಲವಾರು ಭಕ್ತರು ಗುಡಿಗೆ ಪ್ರದಕ್ಷಿಣೆ ಹಾಕಲು ಕಷ್ಟಪಡುತ್ತಿರುವುದು ನನ್ನ ಗಮನಕ್ಕೆ ಬಂದಿತ್ತು. ಸುಮಾರು ಆರು ತಿಂಗಳ ಹಿಂದೆ ಗ್ರಾಮಸ್ಥರು ಹನುಮಾನ್ ಗುಡಿಯನ್ನು ನವೀಕರಣ ಮಾಡಲು ನಿರ್ಧರಿಸಿದ್ದರು. ಈ ಹಿನ್ನೆಲೆಯಲ್ಲಿ ನಾನು 1.5ಗುಂಟೆ ಜಾಗವನ್ನು ಭಕ್ತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ನೀಡಿದ್ದೇನೆ ಎಂದು ತಿಳಿಸಿರುವುದಾಗಿ ಇಂಡಿಯಾಟೈಮ್ಸ್ ವರದಿ ಮಾಡಿದೆ.
ಬಾಷಾ ಅವರ ಉದಾರತೆಗೆ ಖುಷಿಯಾಗಿರುವ ಹನುಮಾನ್ ದೇವಾಲಯದ ಟ್ರಸ್ಟಿಗಳು ಧನ್ಯವಾದ ಅರ್ಪಿಸಿ ಪ್ರದೇಶದ ಸುತ್ತಲೂ ಪೋಸ್ಟರ್ ಗಳನ್ನು ಹಾಕಿರುವುದಾಗಿ ವರದಿ ತಿಳಿಸಿದೆ.