ಮುದ್ದೇಬಿಹಾಳ: ಮಸೀದಿಯೊಂದರ ಮೌಲಾನಾ ಒಬ್ಬರು ಬಿಜೆಪಿ ಶಾಸಕರನ್ನು ಹೊಗಳಿ ಮೆಚ್ಚುಗೆ ಸೂಚಿಸಿರುವ ವಿಡಿಯೋವೊಂದು ವೈರಲ್ ಆಗಿದೆ.
ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ವಿಧಾನಸಭಾ ಮತಕ್ಷೇತ್ರದ ಬಿಜೆಪಿ ಶಾಸಕರೂ ಆಗಿರುವ ಕರ್ನಾಟಕ ರಾಜ್ಯ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಅಧ್ಯಕ್ಷ ಎ.ಎಸ್. ಪಾಟೀಲ ನಡಹಳ್ಳಿ ಅವರನ್ನು ಮುದ್ದೇಬಿಹಾಳದ ಹಡಲಗೇರಿ ರಸ್ತೆ ಪಕ್ಕದಲ್ಲಿರುವ ಅರ್ಫಾತ್ ಮಸ್ಜೀದಿನ ಮೌಲಾನಾ ಅಲ್ಲಾಭಕ್ಷ ಖಾಜಿ ಬಿಜೆಪಿ ಶಾಸಕ ನಡಹಳ್ಳಿ ಅವರ ಗುಣಗಾನ ಮಾಡಿದ್ದಾರೆ
ಸಂದರ್ಭ: ಪಿಲೇಕೆಮ್ಮನಗರ ಬಡಾವಣೆಯಲ್ಲಿ ಹೊಸದಾಗಿ ನಿರ್ಮಿಸಿದ ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟನೆ ಮತ್ತು ಹೈಮಾಸ್ಟ್ ದೀಪ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಶಾಸಕರ ಅಭಿವೃದ್ದಿಪರ ಕೆಲಸಗಳ ಬಗ್ಗೆ ಮೌಲಾನಾ ಖಾಜಿ ಅವರು ಮಾತನಾಡುವಾಗ ಶಾಸಕ ನಡಹಳ್ಳಿಯವರು ಎಲ್ಲರನ್ನು ಸಮನಾಗಿ ಕಾಣುತ್ತಾರೆ. ಬೆಂಗಳೂರಿನಲ್ಲಿ ಕಾಂಗ್ರೆಸ್ ಶಾಸಕರಾಗಿರುವ ಮಾಜಿ ಸಚಿವ ಜಮೀರ್ ಅಹ್ಮದ್ ಅವರನ್ನು ನಾವು ಭೇಟಿ ಮಾಡಲು ಹೋದಾಗ ನಿಮ್ಮೂರಿನ ಬಿಜೆಪಿ ಶಾಸಕ ನಡಹಳ್ಳಿಯವರು ಒಳ್ಳೇ ಕೆಲಸಗಾರರಿದ್ದಾರೆ. ನಿಮ್ಮೂರಿಗೆ ಸಾಕಷ್ಟು ಅಭಿವೃದ್ದಿ ಕೆಲಸ ತರ್ತಿದ್ದಾರೆ. ನನಗೆ ಸಚಿವ ಸ್ಥಾನ ಕೊಡದಿದ್ರೂ ಪರ್ವಾಗಿಲ್ಲ ಆದ್ರೆ ನಮ್ಮೂರಿಗೆ ಅಭಿವೃದ್ದಿ ಕೆಲಸಕ್ಕಾಗಿ ಅನುದಾನ ಕೊಡ್ರಿ ಎಂದು ಸರ್ಕಾರಕ್ಕೆ ಹಠ ಹಿಡೀತಾರೆ. ತಂದೆಗೆ ಮಗ ಚಾಕೊಲೆಟ್ ಕೊಡ್ಸುವಂತೆ ಕೇಳಲು ಹೇಗೆ ಹಠ ಹಿಡೀತಾನೋ ಹಾಗೆ ನಿಮ್ಮ ಶಾಸಕರು ಹಠ ಹಿಡಿದು ಕೆಲ್ಸ ತರ್ತಾರೆ ಅಂತ ನಮಗೆ ಹೇಳಿದ್ರು. ಇದು ನಮ್ಮ ಶಾಸಕ ನಡಹಳ್ಳಿ ಅವರ ಕಾರ್ಯವೈಖರಿ. ಇಲ್ಲಿ ಈ ಹಿಂದೆ ಶಾಸಕರಾಗಿದ್ದ ಸಿ.ಎಸ್ ಸಾಹೇಬ್ರು (ಸಿ.ಎಸ್. ನಾಡಗೌಡ- 25 ವರ್ಷ ಕಾಂಗ್ರೆಸ್ ಶಾಸಕರಾಗಿ, ಸಚಿವರಾಗಿ ಅಧಿಕಾರ ನಡೆಸಿದ್ರು) ಏನೂ ಮಾಡ್ಲಿಲ್ಲ. ನಡಹಳ್ಳಿ ಅವರು ಶಾಸಕರಾದ ಮೇಲೆ ನಮ್ಮ ಬಡಾವಣೆಗಳ ಚಿತ್ರಣ ಬದಲಾಗುತ್ತಿದೆ. ಕೊಳಚೆ ಪ್ರದೇಶವಾಗಿದ್ದ ಪಿಲೇಕೆಮ್ಮ ನಗರವನ್ನು ವಿಐಪಿ ಪ್ರದೇಶವಾಗಿ ಮಾಡಿದ್ದಾರೆ. ಅವರು ನಮಗೆ ಶಾಸಕರಾಗಿ ಸಿಕ್ಕಿದ್ದು ಅಲ್ಲಾನ ಇಚ್ಚೆಯಾಗಿತ್ತು ಎಂದು ಹೇಳಿದರು.
ಮಸೀದಿಯೊಂದರ ಮೌಲಾನಾ ಒಬ್ಬರು ಹಿಂದಿನ ಕಾಂಗ್ರೆಸ್ ಶಾಸಕರು ಏನೂ ಮಾಡ್ಲಿಲ್ಲ ಈಗಿನ ಬಿಜೆಪಿ ಶಾಸಕರು ಸಾಕಷ್ಟು ಅಭಿವೃದ್ದಿ ಮಾಡಿದ್ದಾರೆ ಎಂದು ಉರ್ದು ಮತ್ತು ಕನ್ನಡ ಭಾಷೆಯಲ್ಲಿ ಜನರನ್ನುದ್ದೇಶಿಸಿ ಮಾತನಾಡಿರುವ ವಿಡಿಯೋ ಈ ಭಾಗದಲ್ಲಿ ವೈರಲ್ ಆಗಿದೆ.