ಕಡೂರು: ಕೋಮುವಾದಿ ಪಕ್ಷದ ಜತೆ ಜೆಡಿಎಸ್ ಹೊಂದಾಣಿಕೆ ಮಾಡಿಕೊಂಡಿದೆ ಎನ್ನುವವರು ಕೇರಳದಲ್ಲಿ ಮುಸ್ಲಿಂ ಲೀಗ್ ಜತೆ ಹೊಂದಾಣಿಕೆ ಮಾಡಿಕೊಂಡಿರುವುದನ್ನು ಏನೆನ್ನುತ್ತಾರೆ. ಮುಸ್ಲಿಂ ಲೀಗ್ ಕೋಮುವಾದಿ ಪಕ್ಷವಲ್ಲವೇ ಎಂದು ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಪ್ರಶ್ನಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿವಿಧ ರಾಜ್ಯಗಳಲ್ಲಿ ವಿಭಿನ್ನ ಪಕ್ಷಗಳಿಗೆ ಮತದಾರರು ಮತ ನೀಡಿದರೂ ರಾಷ್ಟ್ರದಲ್ಲಿ ಪ್ರಸ್ತುತ ಬಿಜೆಪಿ ಸರ್ಕಾರವಿರಬೇಕು ಹಾಗೂ ಪ್ರಧಾನಿ ನರೇಂದ್ರ ಮೋದಿಯವರೇ ಸಮರ್ಥ ನಾಯಕ ಎಂದು ನಿರ್ಧರಿಸಿದ್ದಾರೆ. ಹಾಗಾಗಿ ಲೋಕಸಭಾ ಚುನಾವಣೆಯಲ್ಲಿ ಮತ್ತೆ ಬಿಜೆಪಿ ಅಧಿ ಕಾರಕ್ಕೆ ಬರುವುದು ನಿಶ್ಚಿತ. ಅದರಲ್ಲಿ ಯಾವುದೇ ಅನುಮಾನವಿಲ್ಲ ಎಂದರು.
ಕಾವೇರಿ ವಿಚಾರದಲ್ಲಿ ರಾಜ್ಯಕ್ಕೆ ಅನ್ಯಾಯವಾಗಿದೆ. ವಾಸ್ತವ ಪರಿಸ್ಥಿತಿಯನ್ನು ಮನವರಿಕೆ ಮಾಡಿಕೊಡುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ. ನ್ಯಾಯಮಂಡಳಿಯವರು ಎಸಿ ರೂಮಿನಲ್ಲಿ ಕುಳಿತು ದಿನಕ್ಕೊಂದು ಆದೇಶ ಹೊರಡಿಸುವುದು ಸರಿಯಲ್ಲ. ಕೆಆರ್‌ಎಸ್ ಅಣೆಕಟ್ಟೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ನಂತರ ನಿರ್ಧಾರ ತೆಗೆದುಕೊಳ್ಳಬೇಕಿದೆ. ಬಿಜೆಪಿಗೆ ರಾಜ್ಯದ ರೈತರ ಹಿತವೇ ಮುಖ್ಯ. ಪ್ರಧಾನಿ ಮಧ್ಯಸ್ಥಿಕೆ ವಹಿಸುವಂತೆ ಬಿಜೆಪಿಯವರು ಮಾತನಾಡಲಿ ಎನ್ನುವುದು ಬಾಲಿಶತನ. ಪ್ರಕರಣ ಸುಪ್ರೀಂ ಕೋರ್ಟಿನಲ್ಲಿರುವಾಗ ಪ್ರಧಾನಿ ಮಧ್ಯಸ್ಥಿಕೆ ವಹಿಸಲು ಹೇಗೆ ಸಾಧ್ಯವೆಂಬ ಕನಿಷ್ಠ ಪ್ರಜ್ಞೆಯಿರಬೇಕು. ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ ಎರಡೂ ಪಕ್ಷಗಳಿಂದ 25ಕ್ಕೂ ಹೆಚ್ಚು ಸ್ಥಾನ ಪಡೆಯುವುದು ನಿಶ್ಚಿತ. ಈ ಹಿಂದೆ ನಾನು ಕಾಂಗ್ರೆಸ್ಸಿನಲ್ಲಿದ್ದಾಗ ಜೆಡಿಎಸ್ ಜತೆಗೆ ಹೊಂದಾಣಿಕೆಯಲ್ಲಿ ಲೋಕಸಭೆಗೆ ಸ್ಪರ್ಧಿಸಿದ್ದೆ. ಈಗ ಬಿಜೆಪಿ ಸೇರಿದಾಗಲೂ ಜೆಡಿಎಸ್ ಜತೆ ಹೊಂದಾಣಿಕೆಯಾಗಿದೆ. ನಾನು ಹೋದೆಡೆಯಲ್ಲೆಲ್ಲ ಜೆಡಿಎಸ್ ಹೊಂದಾಣಿಕೆಯಾಗುತ್ತಿದೆ. ನನಗೆ ಅಧಿ ಕಾರ ಸಿಗಲಿ, ಬಿಡಲಿ. ಜೀವನವಿಡೀ ಬಿಜೆಪಿಯಲ್ಲೇ ಇರುತ್ತೇನೆ ಎಂದರು.