Advertisement
ಮೊದಲಿನಿಂದಲೂ ಇದ್ದ ಈ ಗೊಂದಲವು ಪ್ರತಾಪ್ ಗೌಡ ಪಾಟೀಲ್ ವಿರುದ್ಧದ ಅಕ್ರಮ ಮತದಾನದ ಕೇಸ್ ವಜಾಗೊಂಡ ಬಳಿಕ ಮತ್ತಷ್ಟು ಹೆಚ್ಚಾಗಿದೆ. ಇದಕ್ಕೆ ಸಾಕ್ಷಿ ಎಂಬಂತೆ ಪ್ರತಾಪ್ ಗೌಡ ಅವರ ಜನ್ಮದಿನದ ಕಾರ್ಯಕ್ರಮ, ಗಾಂಧಿ ಜಯಂತಿ ಹಾಗೂ ಬಿಜೆಪಿ ವಿವಿಧ ಮೋರ್ಚಾಗಳಿಗೆ ಪದಾಧಿಕಾರಿಗಳ ನೇಮಕಕ್ಕೆ ಹಲವು ಮೂಲ ಬಿಜೆಪಿ ಮುಖಂಡರು ಗೈರಾಗಿದ್ದಾರೆ. ಜತೆಗೆ ಅತೃಪ್ತರು ಪ್ರತ್ಯೇಕ ಸರಣಿ ಸಭೆ ನಡೆಸಿದ್ದಾರೆ.
ಪ್ರತಾಪ್ ಗೌಡ 2018ರ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಗೆದ್ದಿದ್ದರು. ಇವರ ವಿರುದ್ಧ ಬಿಜೆಪಿಯಿಂದ ಸ್ಪರ್ಧಿಸಿದ್ದ ಆರ್. ಬಸನಗೌಡ ತುರುವಿಹಾಳ ಅವರು ಕೇವಲ 213 ಮತಗಳಿಂದ ಸೋತಿದ್ದರು. ಬಳಿಕ ಪ್ರತಾಪ್ ಗೌಡ ಬಿಜೆಪಿ ಸೇರಿದ್ದು, ಆಗ ವ್ಯಕ್ತವಾಗಿದ್ದ ವಿರೋಧ ಈಗ ತೀವ್ರ ಸ್ವರೂಪ ತಾಳಿದೆ. ಕಾರಣ ಏನು?
ಪ್ರತಾಪ್ ಜತೆಯಲ್ಲಿ ಕಾಂಗ್ರೆಸ್‌ನಲ್ಲಿದ್ದ ಅವರ ಕೆಲವು ಬೆಂಬಲಿಗರೂ ಬಿಜೆಪಿ ಸೇರಿದ್ದರು. ಹೀಗಾಗಿ ಮಸ್ಕಿ ಮಂಡಲ ಬಿಜೆಪಿಯಲ್ಲಿ ಮೂಲ ಮತ್ತು ವಲಸಿಗ ಬಿಜೆಪಿಗರೆಂಬ ತಾರತಮ್ಯ ಶುರುವಾಗಿದೆ. ಹಳೆ ಬಿಜೆಪಿಗರನ್ನು ಪ್ರತಾಪ್ ಗೌರವಿಸುತ್ತಿಲ್ಲ. ಗುತ್ತಿಗೆ ಕೆಲಸ ಸಹಿತ ಪ್ರತಿಯೊಂದರಲ್ಲೂ ತನ್ನ ಹಿಂಬಾಲಕರಿಗೆ ಅನುಕೂಲ ಮಾಡಿಕೊಡುತ್ತಿದ್ದಾರೆ ಎಂಬ ದೂರುಗಳು ಹಲವು ಬಾರಿ ರಾಜ್ಯ ನಾಯಕರ ಬಳಿಯೂ ಪ್ರಸ್ತಾವವಾಗಿದ್ದವು.
Related Articles
ಉಪ ಚುನಾವಣೆಗೆ ಬಿಜೆಪಿಯಿಂದ ಪ್ರತಾಪ್ ಗೌಡ ಅವರೇ ಅಭ್ಯರ್ಥಿ ಎನ್ನುವುದು ಸ್ಪಷ್ಟ. ಕಾಂಗ್ರೆಸ್‌ನಲ್ಲಿ ಇನ್ನೂ ಸ್ಪಷ್ಟವಾಗಿಲ್ಲ. ಆದರೆ ಆರ್. ಆರ್. ನಗರ ಕ್ಷೇತ್ರದಲ್ಲಿ ಎದ್ದ ಗೊಂದಲ ಇಲ್ಲೂ ಮರುಕಳಿಸುವ ಲಕ್ಷಣವಿದೆ. ಕೇವಲ 213 ಮತಗಳ ಅಂತರದಿಂದ ಸೋತಿದ್ದ ಅಭ್ಯರ್ಥಿಗೆ ಟಿಕೆಟ್ ನೀಡಬೇಕೆಂಬ ಬೇಡಿಕೆ ಬಲವಾಗಿದೆ. ಪ್ರತಾಪ್‌ಗೆ ಟಿಕೆಟ್ ಖಾತ್ರಿಯಾದರೆ ಬಸನಗೌಡ ಅವರು ಕಾಂಗ್ರೆಸ್‌ಗೆ ಜಿಗಿಯುವುದು ಖಚಿತವಾಗಿದೆ. ಜತೆಗೆ ಬಸನಗೌಡರ ಸಹೋದರ ಸಿದ್ದನಗೌಡ ಅವರನ್ನು ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ನಿಲ್ಲಿಸುವ ಚರ್ಚೆಗಳು ಶುರುವಾಗಿವೆ.
Advertisement
ಯಾರೋ ಒಬ್ಬನಿಗಾಗಿ ಪಕ್ಷ ಬದಲಿಸುವ ಇಚ್ಛೆ ಇಲ್ಲ. ಆದರೆ ಪಕ್ಷ ಕಟ್ಟಿ ಬೆಳೆಸಿದ ಕಾರ್ಯಕರ್ತರಿಗೆ ಬೆಲೆ ಸಿಗು ತ್ತಿಲ್ಲ ಎನ್ನುವ ನೋವಿದೆ. ಈ ಬಗ್ಗೆ ಬೆಂಬ ಲಿಗರ ಜತೆ ಚರ್ಚಿಸಿದ್ದೇವೆ. ಏನಾಗ ಲಿದೆಯೋ ಕಾದು ನೋಡಬೇಕಿದೆ.– ಅಪ್ಪಾಜಿ ಗೌಡ ಪಾಟೀಲ್, ಬಿಜೆಪಿ ಜಿಲ್ಲಾ ಉಪಾಧ್ಯಕ್ಷರು, ಮಸ್ಕಿ ಬಸನಗೌಡ ತುರುವಿಹಾಳ ಅವರಿಗೆ ಟಿಕೆಟ್ ಕೊಡಬೇಕೆಂದು ವರಿಷ್ಠರ ಬಳಿ ಮನವಿ ಮಾಡಿ ಕೊಂಡಿದ್ದೇವೆ. ಅದಕ್ಕೆ ಸ್ಪಂದಿಸುವ ವಿಶ್ವಾಸವಿದೆ. ತಪ್ಪಿದರೆ ನಾವು ಬಿಜೆಪಿ ಯಲ್ಲಿರೋದಿಲ್ಲ..
– ಸಿದ್ದಣ್ಣ ಹೂವಿನಭಾವಿ, ಬಿಜೆಪಿ ಮುಖಂಡರು, ಮಸ್ಕಿ