ಸಂಡೂರು: ಸಂಗೀತದ ಸಾಧನೆ ಹಾದಿಯಲ್ಲಿ ಪಳಗುತ್ತಿರುವ ಬಹುತೇಕವಾಗಿ ಸ್ವರಗಳ ಮೇಲೆ ಹಿಡಿತ ಸಾಧಿಸುತ್ತಿರುವ ಕಂಪ್ಲಿಯ ಚಿನ್ಮಯ್ ಜೋಶಿ ಅವರನ್ನು ಶ್ರೀಶೈಲೇಶ್ವರ ವಿದ್ಯಾಕೇಂದ್ರದಲ್ಲಿ ಆಡಳಿತಾಧಿಕಾರಿ ಕುಮಾರ ನಾನಾವಟೆ ಹಾಗೂ ಗೌರವಾಧ್ಯಕ್ಷೆ ಲಕ್ಮ್ಮಿ ನಾನಾವಟೆ ಸನ್ಮಾನಿಸಿದರು.
ಸನ್ಮಾನಿತರಾದ ಚಿನ್ಮಯ್ ಜೋಶಿ ಮಾತನಾಡಿ, ಸಂಗೀತ ದೈವಿಕಕಲೆ. ಬಾಲ್ಯಾವಸ್ಥೆಯಿಂದ ಇದನ್ನು ರೂಢಿಸಿಕೊಂಡರೆ ಸ್ವರ, ಲಯ, ತಾಳಗಳ ಮೇಲೆ ಹಿಡಿತ ಸಾಧಿಸಬಹುದಲ್ಲದೆ ಸಂಗೀತ ಸಾಧಕರಾಗಿ ಹೊರ ಹೊಮ್ಮಬಹುದು ಎಂದರು. ಸಂಸ್ಥೆಯೂ ಎಲ್ಲ ರಂಗದ ಸಾಧಕರನ್ನು ಶಾಲೆಗೆ ಸ್ವಾಗತಿಸಿ ಸನ್ಮಾನಿಸುತ್ತಿರುವುದು ಅತ್ಯಂತ ಹೆಮ್ಮೆಯ ವಿಚಾರ ಇದರಿಂದ ವಿದ್ಯಾರ್ಥಿಗಳಿಗೆ ಸ್ಫೂರ್ತಿ ಸಿಕ್ಕಂತಾಗುತ್ತದೆ ಎಂದರು.
ಆಡಳಿತಾಧಿಕಾರಿ ಕುಮಾರ ನಾನಾವಟೆ, ಸಂಸ್ಥೆಯು ಸಾಧಕರನ್ನು ಸನ್ಮಾನಿಸುವುದರ ಮೂಲಕ ವಿದ್ಯಾರ್ಥಿಗಳಿಗೆ ಬರೀ ಅಕ್ಷರ ವಿದ್ಯಾಭ್ಯಾಸ ಮಾತ್ರವಲ್ಲದೇ, ಸಾಹಿತ್ಯ, ಸಂಗೀತ, ಸಾಂಸ್ಕೃತಿಕ ಮತ್ತು ರಂಗಭೂಮಿಗೆ ಸಂಬಂಧಪಟ್ಟಂತಹ ಸಾಧಕರನ್ನು ಸನ್ಮಾನಿಸಿ ಅವರಿಂದ ಹಿತ ವಚನಗಳ ಮೂಲಕ ವಿದ್ಯಾರ್ಥಿಗಳಲ್ಲಿ ಸಾಧನೆಯ ಬೀಜಗಳನ್ನು ಬಿತ್ತುವಂತಹ ಮಹತ್ತರ ಕಾರ್ಯ ಮಾಡುತ್ತಿದೆ ಎಂದು ಹರ್ಷ ವ್ಯಕ್ತಪಡಿಸಿದರು. ಬಿ.ಇಡಿ. ಪ್ರಾಂಶುಪಾಲರಾದ ದೇವರಾಜ್ ಯು., ಸಿಬಿಎಸ್‌ಸಿ ಪ್ರಾಂಶುಪಾಲ ಸನಾವುಲ್ಲಾ ಎಂ.ಪಿ. ವಿಜ್ಞಾನ ವಿಭಾಗದ ಅಕಾಡೆಮಿಕ್ ಡೀನ್ ನಾಗೇಂದ್ರ ಪ್ರಸಾದ್, ವಾಣಿಜ್ಯ ವಿಭಾಗದ ಮುಖ್ಯಸ್ಥ ಆನಂದ್ ಹಾಗೂ ಶಿಕ್ಷಕರು ಉಪಸ್ಥಿತರಿದ್ದರು.