ಬೀದರ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಪ್ರಗತಿ ಸಂಗೀತ ಕಲಾ ಸಂಸ್ಥೆ ಆಶ್ರಯದಲ್ಲಿ ಇತ್ತಿಚೆಗೆ ನಗರದ ರಂಗ ಮಂದಿರದಲ್ಲಿ ನಡೆದ ಸಂಗೀತ ಸೌರಭ ಕಾರ್ಯಕ್ರಮ ಜನಮನ ಸೂರೆಗೊಂಡಿತು.
ಸಮಾರಂಭದಲ್ಲಿ ಹಿರಿಯ ಕಲಾವಿದರಾದ ರಾಜೇಂದ್ರಸಿಂಗ್ ಪವಾರ ಹಾಗೂ ಜಗನ್ನಾಥ ನಾನಕೇರಿ ಅವರಿಂದ ನಡೆದ ಸಾಮೂಹಿಕ ಗಾಯನ ನೆರೆದಿದ್ದ ಸಹೃದಯರ ಮನತಟ್ಟಿತು. ರೋಶನ್ ರಮೇಶ ಅವರ ತಬಲಾ ಸೋಲೊಗೆ ಸಹೃದಯರು ಚಪ್ಪಾಳೆ ತಟ್ಟಿ ಪ್ರೋತ್ಸಾಹಿಸಿದರು.
ಇದಕ್ಕೂ ಮೊದಲು ಹಿರಿಯ ಜಾನಪದ ವಿದ್ವಾಂಸ ಡಾ| ಜಗನ್ನಾಥ ಹೆಬ್ಟಾಳೆ ಕಾರ್ಯಕ್ರಮ ಉದ್ಘಾಟಿಸಿ, ನಾಡು ನುಡಿಯ ಸೇವೆಯಲ್ಲಿ ಸಂಘ ಸಂಸ್ಥೆಗಳ ಪಾತ್ರ ಅತೀ ಮುಖ್ಯವಾಗಿದೆ. ಈ ನಿಟ್ಟಿನಲ್ಲಿ ಪ್ರಗತಿ ಸಂಗೀತ ಕಲಾ ಸಂಸ್ಥೆಯ ಕಾರ್ಯವು ಅನನ್ಯವಾಗಿದೆ ಎಂದು ತಿಳಿಸಿದರು.
ಕಸಾಪ ಮಾಜಿ ಅಧ್ಯಕ್ಷ ಸುರೇಶ ಚನ್ನಶೆಟ್ಟಿ ಮಾತನಾಡಿ, ಸಾಹಿತ್ಯ ಮತ್ತು ಸಂಗೀತ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಕನ್ನಡ ಭಾಷಾ ಬೆಳವಣಿಗೆಯಲ್ಲಿ ಸಂಗೀತದ ಪಾತ್ರ ಅತೀ ಅಮೂಲ್ಯವಾಗಿದೆ ಎಂದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ರಾಮ ಸಿಂಧೆ ಮಾತನಾಡಿ, ಪ್ರಗತಿ ಸಂಗೀತ ಕಲಾ ಸಂಸ್ಥೆಯು ಸಂಗೀತ ಕ್ಷೇತ್ರದಲ್ಲಿ ಗುರುತರ ಕೆಲಸ ಮಾಡುತ್ತಿದೆ. ಇಲಾಖೆಯ ಸಹಯೋಗದೊಂದಿಗೆ ಅತ್ಯಂತ ಉತ್ತಮ ರೀತಿಯಲ್ಲಿ ಕಾರ್ಯಕ್ರಮ ರೂಪಿಸುತ್ತದೆ ಎಂದು ತಿಳಿಸಿದರು. ಎಸ್‌ಬಿಐನ ಉಪ ವ್ಯವಸ್ಥಾಪಕ ರಮೇಶ ಶಿಂಧೆ ಮಾತನಾಡಿದರು.
ಲಕ್ಷ್ಮಣರಾವ ಆಚಾರ್ಯ ಸಾನ್ನಿಧ್ಯ ವಹಿಸಿದ್ದರು. ಸಂಸ್ಥೆಯ ಅಧ್ಯಕ್ಷ ರಮೇಶ ಕೋಳಾರ, ಡಾ| ಮಲ್ಲಿಕಾರ್ಜುನ ಚಟ್ನಳ್ಳಿ, ರಾಜಕುಮಾರ ಹೆಬ್ಟಾಳೆ, ಲುಂಬಿಣಿ ಗೌತಮ, ಹಣಮಂತ ಮಲ್ಕಾಪೂರ, ಶಿರೋಮಣಿ ಶ್ರೀಮಂಡಲ ಇದ್ದರು