Advertisement

ಸುಂದರ ಕುಟುಂಬದೊಳಗೊಂದು ಮ್ಯೂಸಿಕಲ್‌ ಜರ್ನಿ!

10:16 AM Nov 17, 2019 | Lakshmi GovindaRaju |

ಹಾರರ್‌, ಫ್ಯಾಮಿಲಿ ಡ್ರಾಮಾ, ಸೈಕಲಾಜಿಕಲ್‌ ಥ್ರಿಲ್ಲರ್‌ … ಹೀಗೆ ಬೇರೆ ಬೇರೆ ಜಾನರ್‌ ಸಿನಿಮಾಗಳನ್ನು ಕಟ್ಟಿಕೊಟ್ಟು ಸೈ ಎನಿಸಿಕೊಂಡಿರುವ ಹಿರಿಯ ನಿರ್ದೇಶಕ ಪಿ.ವಾಸು ಈ ಬಾರಿ “ಆಯುಷ್ಮಾನ್‌ ಭವ’ ಚಿತ್ರದಲ್ಲಿ ಮ್ಯೂಸಿಕಲ್‌ ಥ್ರಿಲ್ಲರ್‌ ಜಾನರ್‌ ಅನ್ನು ಪ್ರೇಕ್ಷಕರ ಮುಂದಿಟ್ಟಿದ್ದಾರೆ. ಒಂದು ಪಕ್ಕಾ ಫ್ಯಾಮಿಲಿ ಡ್ರಾಮಾ ಸಿನಿಮಾಕ್ಕೆ ಸಂಗೀತದ ಹಿನ್ನೆಲೆಯನ್ನು ಸೇರಿಸಿ, ಅದಕ್ಕೊಂದಿಷ್ಟು ಥ್ರಿಲ್ಲರ್‌ ಅಂಶಗಳನ್ನು ಬೆರೆಸಿ “ಆಯುಷ್ಮಾನ್‌ ಭವ’ ಸಿನಿಮಾವನ್ನು ಮಾಡಲಾಗಿದೆ.

Advertisement

ವಾಸು ಅವರ ಟಿಪಿಕಲ್‌ ಶೈಲಿಯೊಂದಿಗೆ ಸಾಗುವ ಈ ಸಿನಿಮಾದಲ್ಲಿ ಪ್ರೇಕ್ಷಕನಿಗೆ ಇಷ್ಟವಾಗುವ ಸಾಕಷ್ಟು ಅಂಶಗಳಿವೆ. ಮುಖ್ಯವಾಗಿ ಈ ಸಿನಿಮಾದಲ್ಲಿ ಒಂದು ಕಥೆ ಇದೆ. ಮೇಲ್ನೋಟಕ್ಕೆ ಒಂದು ಸಿಂಪಲ್‌ ಕಥೆಯಂತೆ ಕಂಡರೂ, ನಿರ್ದೇಶಕ ವಾಸು ಅವರು ಅದನ್ನು ನಿರೂಪಣೆಯ ಮೂಲಕ ಹೆಚ್ಚು ಆಪ್ತವಾಗಿಸಿದ್ದಾರೆ. ಫ್ಯಾಮಿಲಿ ಡ್ರಾಮಾ ಸಿನಿಮಾಗಳು ಕಡಿಮೆಯಾಗುತ್ತಿರುವ ಈ ಸಮಯದಲ್ಲಿ “ಆಯುಷ್ಮಾನ್‌ ಭವ’ದಲ್ಲಿ ತುಂಬಿದ ಕುಟುಂಬ, ಕಲರ್‌ಫ‌ುಲ್‌ ದೃಶ್ಯಗಳನ್ನು ನೋಡಬಹುದು.

ಆರಂಭದಿಂದಲೂ ಕುತೂಹಲ ಕಾಯ್ದಿರಿಸುತ್ತಲೇ ಸಾಗುವ ಈ ಸಿನಿಮಾದಲ್ಲಿ ಸೆಂಟಿಮೆಂಟ್‌, ಕಾಮಿಡಿ, ಆ್ಯಕ್ಷನ್‌ … ಹೀಗೆ ಎಲ್ಲವೂ ಇದೆ. ಕಥೆ ಮುಂದೆ ಸಾಗುತ್ತಿದ್ದಂತೆ ಮುಂದಿನ ಒಂದಷ್ಟು ಅಂಶಗಳನ್ನು ಪ್ರೇಕ್ಷಕ ಊಹಿಸಿಕೊಂಡರೂ, ಅಲ್ಲಲ್ಲಿ ಬರುವ ಕೆಲವು ಟ್ವಿಸ್ಟ್‌ಗಳ ಸಿನಿಮಾ ಖುಷಿ ಕೊಡುತ್ತವೆ. ಯಾವುದೇ ಗೊಂದಲವಿಲ್ಲದೇ ಸಾಗುವ ಈ ಸಿನಿಮಾದಲ್ಲಿ ಸಣ್ಣ ಸಂದೇಶವೂ ಇದೆ. ಅಷ್ಟಕ್ಕೂ ಚಿತ್ರದ ಕಥೆ ಏನು ಎಂದು ನೀವು ಕೇಳಬಹುದು.

ತುಂಬು ಕುಟುಂಬವೊಂದಕ್ಕೆ ಸಾಮಾನ್ಯ ಕೆಲಸಗಾರನಾಗಿ ಸೇರುವ ನಾಯಕ, ಒಂದು ದೊಡ್ಡ ಸಮಸ್ಯೆ ಹಾಗೂ ತಪ್ಪನ್ನು ಸರಿಪಡಿಸಿಕೊಳ್ಳುತ್ತಾನೆ. ಹೀಗೆ ಕೆಲಸಗಾರನಾಗಿ ಬರುವ ನಾಯಕನಿಗೊಂದು ಹಿನ್ನೆಲೆ ಇದೆ, ಅಂತೆಯೇ ನಾಯಕಿಗೂ ಒಂದು ಹಿನ್ನೆಲೆ ಇದೆ. ಇಡೀ ಸಿನಿಮಾವನ್ನು ಮುಂದುವರೆಸಿಕೊಂಡು ಹೋಗೋದು ಕೂಡಾ ಈ ಅಂಶಗಳೇ. ಅದೇನೆಂಬುದನ್ನು ತೆರೆಮೇಲೆ ನೋಡಿದರೇನೇ ಚೆಂದ.

ಸಿನಿಮಾದ ಮೊದಲರ್ಧ ತುಂಬಾ ಲವಲವಿಕೆಯಿಂದ ಸಾಗಿದರೆ, ದ್ವಿತೀಯಾರ್ಧದಲ್ಲಿನ ಒಂದಷ್ಟು ಅಂಶಗಳು ಚಿತ್ರದ ವೇಗಕ್ಕೆ ಬ್ರೇಕ್‌ ಹಾಕಿರೋದು ಸುಳ್ಳಲ್ಲ. ರಂಗಾಯಣ ರಘು, ಯಶ್‌ ಶೆಟ್ಟಿ ನಡುವಿನ ಕಾಮಿಡಿ ದೃಶ್ಯಗಳಿರಬಹುದು, ಅಂಡರ್‌ವಾಟರ್‌ ಫೈಟ್‌ ಇರಬಹುದು, ನಾಯಕ-ನಾಯಕಿಯ ಕಾಡಿನ ಸುತ್ತಾಟದ ಒಂದಷ್ಟು ದೃಶ್ಯಗಳಿರಬಹುದು … ಇವೆಲ್ಲವೂ ಸಿನಿಮಾದ ಅವಧಿಯನ್ನು ಹೆಚ್ಚಿಸಿವೆಯೇ ಹೊರತು, ಕಥೆಗೆ ಹೆಚ್ಚು ಪೂರಕವಾಗಿಲ್ಲ.

Advertisement

ಈ ಚಿತ್ರದಲ್ಲಿ ಕಥೆಗೆ ಎಷ್ಟು ಪ್ರಾಮುಖ್ಯತೆ ಇದೆಯೋ ಸಂಗೀತಕ್ಕೂ ಅಷ್ಟೇ ಪ್ರಾಮುಖ್ಯತೆ ಇದೆ. ಸಂಗೀತ ಕಥೆಯ ಒಂದು ಭಾಗ ಕೂಡಾ ಹೌದು. “ಆಯುಷ್ಮಾನ್‌ ಭವ’ ಚಿತ್ರ ನಿಮಗೆ ಇನ್ನಷ್ಟು ಆಪ್ತವಾಗುವಂತೆ ಮಾಡುವಲ್ಲಿ ಶಿವರಾಜಕುಮಾರ್‌ ಅವರ ಪಾತ್ರ ಮಹತ್ವದ್ದು. ಇಡೀ ಕಥೆಯನ್ನು ಹೊತ್ತು ಸಾಗಿದವರಲ್ಲಿ ಶಿವರಾಜಕುಮಾರ್‌ ಕೂಡಾ ಪ್ರಮುಖರು. ಅವರಿಲ್ಲಿ ಸರಳ ಸುಂದರ. ತುಂಬಾ ಗಂಭೀರವಾದ ಪಾತ್ರವನ್ನು ಅಷ್ಟೇ ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ.

ಈ ಚಿತ್ರದ ಮತ್ತೂಂದು ಅಚ್ಚರಿ ರಚಿತಾ ರಾಮ್‌. ಈ ಹಿಂದಿನ ಸಿನಿಮಾಗಳಲ್ಲಿ ಮಾಡಿರುವ ಪಾತ್ರಗಳಿಗಿಂತ ಸಂಪೂರ್ಣ ಭಿನ್ನವಾದ ಪಾತ್ರ ರಚಿತಾ ಅವರಿಗೆ ಸಿಕ್ಕಿದೆ. ಈ ತರಹದ ಪಾತ್ರವನ್ನು ಒಪ್ಪಿ, ಅದಕ್ಕೆ ನ್ಯಾಯ ಒದಗಿಸಲು ಕೂಡಾ ಧೈರ್ಯ ಬೇಕು. ಆ ಮಟ್ಟಿಗೆ ರಚಿತಾ ಇಲ್ಲಿ ಗೆದ್ದಿದ್ದಾರೆ ಮತ್ತು ಇಷ್ಟವಾಗುತ್ತಾರೆ. ಇನ್ನು, ಹಿರಿಯ ನಟ ಅನಂತ್‌ ನಾಗ್‌ ಅವರು ಸಿನಿಮಾದ ಹೈಲೈಟ್‌ಗಳಲ್ಲೊಂದು.

ಉಳಿದಂತೆ ನಿಧಿ ಸುಬ್ಬಯ್ಯ, ಯಶ್‌ ಶೆಟ್ಟಿ, ರಾಜೇಶ್‌ ನಟರಂಗ, ಸುಂದರ್‌, ರಂಗಾಯಣ ರಘು, ಸಾಧುಕೋಕಿಲ … ಚಿತ್ರದಲ್ಲಿ ನಟಿಸಿದ ಕಲಾವಿದರು ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ. ಇನ್ನು, ಮೊದಲೇ ಹೇಳಿದಂತೆ ಚಿತ್ರದಲ್ಲಿ ಸಂಗೀತಕ್ಕೆ ಹೆಚ್ಚಿನ ಮಹತ್ವವಿದೆ. ಆ ನಿಟ್ಟಿನಲ್ಲಿ ಸಂಗೀತ ನಿರ್ದೇಶಕ ಗುರುಕಿರಣ್‌ ಅವರ ಕೆಲಸವನ್ನು ಮೆಚ್ಚಲೇಬೇಕು. ಚಿತ್ರದ ಹಾಡು, ಹಿನ್ನೆಲೆ ಸಂಗೀತ ಇಷ್ಟವಾಗುತ್ತದೆ. ಪಿಕೆಎಚ್‌ ದಾಸ್‌ ಛಾಯಾಗ್ರಹಣದಲ್ಲಿ “ಆಯುಷ್ಮಾನ್‌ ಭವ’ ಸುಂದರ.

ಚಿತ್ರ: ಆಯುಷ್ಮಾನ್‌ ಭವ
ನಿರ್ಮಾಣ: ದ್ವಾರಕೀಶ್‌ ಚಿತ್ರ
ನಿರ್ದೇಶನ: ಪಿ.ವಾಸು
ತಾರಾಗಣ: ಶಿವರಾಜಕುಮಾರ್‌, ರಚಿತಾ ರಾಮ್‌, ಅನಂತ್‌ನಾಗ್‌, ನಿಧಿ, ಸಾಧುಕೋಕಿಲ, ಯಶ್‌ ಶೆಟ್ಟಿ ಮತ್ತಿತರರು.

* ರವಿಪ್ರಕಾಶ್‌ ರೈ

Advertisement

Udayavani is now on Telegram. Click here to join our channel and stay updated with the latest news.

Next