ಉಡುಪಿಯ ರಾಗಧನ ಸಂಸ್ಥೆಯು ಆಯೋಜಿಸಿದ ಈ ಬಾರಿಯ “ಗೃಹಸಂಗೀತ’ದಲ್ಲಿ ಆಷಾಢದ ಜಿನುಗು ಮಳೆಯ ಸದ್ದಿನ ನಡುವೆ ಯುವ ಕಲಾವಿದೆ, ಕಾರ್ಕಳದ ಕು| ಆತ್ರೇಯೀ ಕೃಷ್ಣಾ ಅವರು ಕರ್ನಾಟಕ ಸಂಗೀತ ಹಾಡುಗಾರಿಕೆ ನಡೆಸಿಕೊಟ್ಟರು. ಜುಲೈ 15, 2017ರಂದು ಸಂಜೆ ರಾಘವೇಂದ್ರ ಆಚಾರ್ಯ ಮತ್ತು ಸರೋಜಾ ಆರ್. ಆಚಾರ್ಯ ಇವರ ಪುತ್ರ ಡಾ| ಶಶಿಧರ ಆಚಾರ್ಯ- ಡಾ| ಶ್ರುತಿ ಆಚಾರ್ಯ ದಂಪತಿಯ “ಸಿರಿ’ ನಿವಾಸದಲ್ಲಿ ಈ ಆಪ್ತ ಕಛೇರಿ ನಡೆಯಿತು.
ಜಯಜಯ ಜಾನಕೀಕಾಂತ ನಾಟ ರಾಗ, ಖಂಡಛಾಪು ತಾಳದ ಪುರಂದರದಾಸರ ರಚನೆಯೊಂದಿಗೆ ಕಛೇರಿ ಆರಂಭಗೊಂಡಿತು. ಬಳಿಕ ರೀತಿಗೌಳದ ತ್ವರಿತಗತಿಯ ಆಲಾಪನೆಯೊಂದಿಗೆ ಚೇರರಾವದೇ ತ್ಯಾಗರಾಜರ ಆದಿತಾಳದ ಕೃತಿ, ಮಾಂಜಿ ರಾಗದಲ್ಲಿ ಶ್ರೀ ರಾಮಚಂದ್ರೇಣ ರಕ್ಷಿತಂ ಕೃತಿಗಳನ್ನು ಕಲಾವಿದೆ ಹೃದ್ಯವಾಗಿ ಪ್ರಸ್ತುತಪಡಿಸಿದರು. ಅನಂತರ ಎತ್ತಿಕೊಂಡ ಕಲ್ಯಾಣಿಯ ವಿಸ್ತಾರವಾದ ಆಲಾಪನೆಯು ಶ್ರೋತೃಗಳ ಮನಮುಟ್ಟಿತು. ಶ್ಯಾಮಾಶಾಸ್ತ್ರಿಗಳ ತಿಶ್ರ ಆದಿತಾಳದ ಕೃತಿ ಬಿರಾನವರಲಿಚ್ಚಿ ನೆರವಲ್, ಸ್ವರ ಪ್ರಸ್ತಾರಗಳಿಂದ ಪೋಷಿಸಲ್ಪಟ್ಟಿತು. ಆ ಬಳಿಕ ಶಹನಾ ರಾಗದ ಗಂಭೀರವಾದ ಆಲಾಪನೆಯೊಂದಿಗೆ ತ್ಯಾಗರಾಜರ ರಘುಪತೇ ರಾಮ, ದೇವರಂಜಿ ರಾಗದ ನಮಸ್ತೆ ಪರದೇವತೇ ಹಾಡಿದ ಬಳಿಕ, ಕಲಾವಿದೆ ಪ್ರಧಾನ ರಾಗವಾಗಿ ಆರಿಸಿಕೊಂಡದ್ದು ತೋಡಿ. ಶ್ರೋತೃಗಳ ನಿರೀಕ್ಷೆಗೆ ತಕ್ಕಂಥ ಆಲಾಪನೆ, ಸ್ಪಷ್ಟ, ನಿಖರವಾದ ಸಂಗತಿಗಳೊಂದಿಗಿನ ಕೊಲುವ ಮರೆಗದಾ ಕೃತಿಯ ನೆರವಲ್, ಕಲ್ಪನಾ ಸ್ವರಪ್ರಸ್ತಾರಗಳೊಂದಿಗಿನ ಪ್ರಸ್ತುತಿ ಮನೋಜ್ಞವಾಗಿತ್ತು. ರಾಮಮಂತ್ರವ ಜಪಿಸೋ (ಜೋನ್‌ಪುರಿ), ಮಧ್ಯಮ ಶ್ರುತಿ ರಾಗಮಾಲಿಕೆಯಲ್ಲಿ ನೀನ್ಯಾಕೋ ನಿನ್ನ ಹಂಗ್ಯಾಕೋ, ಬೃಂದಾವನೀ ರಾಗದ ತಿಲ್ಲಾನಗಳೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು.
ಶಾಸ್ತ್ರೀಯ ಸಂಗೀತಕ್ಕೆ ಹೇಳಿ ಮಾಡಿಸಿದಂತಹ ತೂಕವಾದ ಶಾರೀರ, ಸಾಧಿಸಲೇ ಬೇಕೆನ್ನುವ ಹಠ ಮತ್ತು ಪರಿಶ್ರಮ, ಉತ್ತಮ ಪಾಠಾಂತರ, ಮನೋಧರ್ಮಗಳನ್ನು ಹೊಂದಿರುವ ಈ ಯುವ ಪ್ರತಿಭಾವಂತೆ, ಇನ್ನೂ ಕೊಂಚ ಹೆಚ್ಚಿನ ಪರಿಶ್ರಮದಿಂದ ಸಾಧನೆ ಮಾಡಿದಲ್ಲಿ ಒಬ್ಬ ಪ್ರಬುದ್ಧ ಕಲಾವಿದೆಯಾಗಿ ಇನ್ನೂ ಎತ್ತರದ ಮಜಲುಗಳನ್ನು ಏರಬಲ್ಲಳು. ಪಕ್ಕವಾದ್ಯದಲ್ಲಿ ವಯಲಿನ್ ನುಡಿಸಿದ ವಿ| ಗಣರಾಜ ಕಾರ್ಲೆಯವರು ತಮ್ಮ ಮೃದುವಾದ ನುಡಿಸಾಣಿಕೆಯಲ್ಲಿ ಶಹನಾ, ಕಲ್ಯಾಣಿ, ತೋಡಿ ರಾಗಗಳ ಮಿಂಚಿನ ಸಂಚಾರಗಳನ್ನು ಕಾಣಿಸಿದರು. ವಿಳಂಬ ಆದಿತಾಳದಲ್ಲಿ ಉತ್ತಮ ಮಟ್ಟದ ತನಿ ಆವರ್ತನವನ್ನು ನುಡಿಸಿದವರು ವಿ| ಪನ್ನಗ ಶರ್ಮನ್. ಇವರಿಬ್ಬರೂ ಕಲಾವಿದೆಗೆ ಉತ್ತಮ ಸಹಕಾರವನ್ನು ನೀಡಿದರು.
ತಮ್ಮ ನಿವಾಸದಲ್ಲಿ ಗೃಹ ಸಂಗೀತವನ್ನು ಏರ್ಪಡಿಸಿ, ಉತ್ತಮ ಆತಿಥ್ಯದ ಜತೆಗೆ ಸಂಗೀತವನ್ನು ಸವಿಯುವ ಅವಕಾಶ ಮಾಡಿಕೊಟ್ಟ ಸಂಗೀತಾಭಿಮಾನಿ ಹಿರಿಯಕ್ಕ ಸರೋಜಾ ಆರ್. ಆಚಾರ್ಯ ಹಾಗೂ ಅವರ ಮನೆಯವರು ಅಭಿನಂದನಾರ್ಹರು.
ವಿದ್ಯಾಲಕ್ಷ್ಮೀ ಕಡಿಯಾಳಿ