ಬೆಂಗಳೂರು: ಕೋರಮಂಗಲ, ಇಂದಿರಾನಗರ, ಮೆಜೆಸ್ಟಿಕ್ ಸೇರಿದಂತೆ ನಗರದ ವಿವಿಧ ಭಾಗಗಳಲ್ಲಿರುವ ಪಬ್, ಡ್ಯಾನ್ಸ್ ಬಾರ್‌ಗಳಲ್ಲಿ ಅನಧಿಕೃತವಾಗಿ ನಡೆಯುತ್ತಿದ್ದ ಮ್ಯೂಸಿಕ್ ಪಾರ್ಟಿಗಳನ್ನು ಸ್ಥಗಿತಗೊಳಿಸಲು ಕೇಂದ್ರ ಅಪರಾಧ ವಿಭಾಗ (ಸಿಸಿಬಿ) ಮುಂದಾಗಿದೆ. ಪಬ್‌ನಲ್ಲಿ ಡಿಸ್ಕೋಥೆಕ್ ಮ್ಯೂಸಿಕ್ ಪಾರ್ಟಿಗಳನ್ನು ನಡೆಸಲು 107 ಪಬ್ ಮಾಲೀಕರು ಸಲ್ಲಿಸಿದ್ದ ಪರವಾನಗಿಗಳನ್ನು ನಗರ ಪೊಲೀಸ್ ಆಯುಕ್ತರು ತಿರಷ್ಕೃತಗೊಳಿಸಿದ್ದಾರೆ.
ಈ ಬೆನ್ನಲ್ಲೇ ನಗರದಲ್ಲಿ ಅನಧಿಕೃತವಾಗಿ ಮ್ಯೂಸಿಕ್ ಪಾರ್ಟಿ, ಡಿಸ್ಕೋಥೆಕ್ ನಡೆಸುವ 107 ಪಬ್‌ಗಳಿಗೆ ಬೀಗ ಜಡಿಯಲು ಸಿಸಿಬಿ ಪೊಲೀಸರು ಮುಂದಾಗಿದ್ದಾರೆ. ಆದರೆ, ಹೋಟೆಲ್ ವ್ಯವಹಾರ ಮಾತ್ರವೇ ನಡೆಯಲು ಅನುಮತಿಯಿದೆ. ಈ ಕುರಿತು
“ಉದಯವಾಣಿ’ ಜತೆ ಮಾತನಾಡಿದ ಸಿಸಿಬಿ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್, 107 ಪಬ್‌ಗಳಿಗಳಲ್ಲಿ ಮ್ಯೂಸಿಕ್ ಪಾರ್ಟಿ, ಡಿಸ್ಕೋಥೆಕ್, ನಡೆಸಲು ಇದ್ದ ಪರವಾನಗಿ ರದ್ದುಗೊಂಡಿದೆ.
ಹೀಗಾಗಿ, ಪರವಾನಗಿ ರದ್ದುಗೊಂಡ ಪಬ್‌ಗಳಲ್ಲಿ ಇನ್ನೂ ಚಟುವಟಿಕೆಗಳು ನಡೆಯುತ್ತಿದ್ದರೆ ಸಿಸಿಬಿ ಹಾಗೂ ಸ್ಥಳೀಯ ಠಾಣಾ ಇನ್ಸ್‌ಪೆಕ್ಟರ್‌ಗಳು ಕ್ರಮವಹಿಸಿ ಸ್ಥಗಿತಗೊಳಿಸಲಿದ್ದಾರೆ ಎಂದು ತಿಳಿಸಿದರು. ಹೋಟೆಲ್, ರೆಸ್ಟೋರೆಂಟ್‌ಗಳಲ್ಲಿ ಮ್ಯೂಸಿಕ್ ಪಾರ್ಟಿ, ನಡೆಸಲು ಕಡ್ಡಾಯವಾಗಿ ನಗರ ಪೊಲೀಸ್ ಆಯುಕ್ತರಿಂದ ಪರವಾನಗಿ ಪಡೆಯಬೇಕು ಎಂದು ಸುಪ್ರೀಂಕೋರ್ಟ್ 2018ರಲ್ಲಿ ಸ್ಪಷ್ಟ ನಿರ್ದೇಶನ ನೀಡಿತ್ತು. ಜತೆಗೆ, ಸಾರ್ವಜನಿಕ ಮನರಂಜನೆ ಕಾರ್ಯಕ್ರಮಗಳಿಗೆ ಪರವಾನಗಿ ಕಾಯಿದೆ 2005ರಲ್ಲಿಯೂ ಈ ಬಗ್ಗೆ ಸ್ಪಷ್ಟವಾಗಿ ಉಲ್ಲೇಖವಿದೆ.
ಹೀಗಾಗಿ, ಹಲವು ಪಬ್‌ಗಳು ಪರವಾನಗಿ ಕೋರಿ ಆಯುಕ್ತರಿಗೆ ಮನವಿ ಸಲ್ಲಿಸಿದ್ದವು. ಆದರೆ, 107 ಪಬ್‌ಗಳು ನಿಯಮಾವಳಿಗಳನ್ನು ಉಲ್ಲಂ ಸಿ ಮ್ಯೂಸಿಕ್ ಪಾರ್ಟಿ ಸೇರಿದಂತೆ ಇನ್ನಿತರೆ ಕಾರ್ಯಚಟುವಟಿಕೆಗಳನ್ನು ನಡೆಸುತ್ತಿದ್ದವು. ಹೀಗಾಗಿ, ಪರವಾನಗಿ ರದ್ದುಗೊಳಿಸಿ ಮುಚ್ಚಿಸಲು ತೀರ್ಮಾನ ಕೈಗೊಳ್ಳಲಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.
ಕೋರಮಂಗಲ, ಇಂದಿರಾನಗರ ನೂರು ಅಡಿ ರಸ್ತೆಯ ಸುತ್ತಮುತ್ತಲ ಭಾಗಗಳಲ್ಲಿನ ಪಬ್‌ಗಳಲ್ಲಿ ಮ್ಯೂಸಿಕ್ ಪಾರ್ಟಿಗಳಿಂದ ನಿಯಮ ಮೀರಿ ಶಬ್ಧಮಾಲಿನ್ಯ ಉಂಟಾಗುತ್ತಿದ್ದು, ಸ್ಥಳೀಯ ನಿವಾಸಿಗಳಿಗೆ ತೊಂದರೆ ಉಂಟಾಗುತ್ತಿರುವ ಬಗ್ಗೆ ಸಲ್ಲಿಕೆಯಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ವಿಚಾರಣೆ ವೇಳೆ, ಪೊಲೀಸರ ಕಾರ್ಯವೈಖರಿ ಮೇಲೆ ಹೈಕೋರ್ಟ್ ಹಲವು ಬಾರಿ ಅಸಮಾಧಾನ ವ್ಯಕ್ತಪಡಿಸಿದ್ದನ್ನು ಸ್ಮರಿಸಬಹುದು.