ಮುಳ್ಳೇರಿಯದ ರಾಗಸುಧಾರಸ ಸಂಸ್ಥೆ ಆಯೋಜಿಸಿದ ಸಂಗೀತ ಶಿಬಿರದಲ್ಲಿ ಹೆಸರಾಂತ ಪಿಟೀಲು ವಾದಕರೂ, ಗಾಯಕರೂ ಆದ ವಿಠಲ ರಾಮಮೂರ್ತಿಯವರು ಸಂಗೀತ ಜ್ಞಾನವನ್ನು ಶಿಬಿರಾರ್ಥಿಗಳಿಗೆೆ ಧಾರೆಯೆರೆದರು. ಮೋಹನ ಕಲ್ಯಾಣಿ ರಾಗದ ತಾಮದಂ ತಗಾದಯಾ, ಚಿತ್ತರಂಜನಿ ರಾಗದ ನಾದ ತನುಮನಿಶಂ, ತ್ಯಾಗರಾಜರ ಕೊನೆಯ ಕೃತಿ ಎಂದು ಹೇಳಲ್ಪಡುವ ವಾಗಧೀಶ್ವರಿ ರಾಗದ ಪರಮಾತು¾ಡು ವೆಡಲೇ, ಗರುಡಧ್ವನಿ ರಾಗದ ತತ್ವಮೆರುಗ ತರಮಾ ಇತ್ಯಾದಿ ಉತ್ತಮ ಕೃತಿಗಳನ್ನು ಹೇಳಿಕೊಟ್ಟಿರುವುದು ಮಾತ್ರವಲ್ಲದೆ ವಿದ್ಯಾರ್ಥಿಗಳಿಗೆ ಪ್ರತಿಭೆಯನ್ನು ಪ್ರದರ್ಶಿಸಲು ವೇದಿಕೆಯನ್ನೂ ಒದಗಿಸಿದರು.
ಶಿಬಿರದಲ್ಲಿ ಬೆಳಗ್ಗಿನಿಂದ ಸಂಜೆಯ ತನಕ ಎಡೆಬಿಡದೆ ಸಂಗೀತಭ್ಯಾಸ ಮಾಡುವುದು ನಿಜಕ್ಕೂ ಒಂದು ಅಪೂರ್ವವಾದ ಅನುಭವವಾಗಿತ್ತು. ವಿಜಯಶ್ರೀ ವಿಠಲ್, ಶ್ರೀಹರಿ ವಿಠಲ್ ಮತ್ತು ಪಾವನಿ ಅನುಪಿಂಡಿಯವರೂ ಕೂಡ ಗುರುಗಳಂತೆಯೇ ಉತ್ತಮ ಭೋದಕರಾಗಿ ಶಿಬಿರಾರ್ಥಿಗಳಿಗೆ ಅಭ್ಯಾಸಮಾಡಿಸಿದರು. ಶಿಬಿರದ ಕೊನೆಯ ದಿನ ನಡೆದ ವಿ| ಟಿ.ವಿ. ಶಂಕರನಾರಾಯಣನ್‌ರವರ ಕಛೇರಿಯು ಸಂಗೀತ ರಸಿಕರನ್ನು ಮಂತ್ರಮುಗ್ಧಗೊಳಿಸಿತು.
ಧರ್ಮಸ್ಥಳದ ಸಮೀಪದ ಕರಿಂಬಿತ್ತಿಲ್ ಮನೆಯಲ್ಲಿ ವರ್ಷಂಪ್ರತಿ ಬೇಸಿಗೆಯಲ್ಲಿ ಐದಾರು ದಿವಸಗಳ ಕಾಲ ನಡೆಯುವ ಸಂಗೀತ ಶಿಬಿರಕ್ಕೆ ಇಪ್ಪತ್ತರ ಸಂಭ್ರಮ. ತಮ್ಮ ಹಳ್ಳಿಯ ಮಕ್ಕಳಿಗೂ ಸಂಗೀತದ ಮಹತ್ವದ ಅರಿವಾಗಬೇಕೆಂಬ ಉದ್ದೇಶದಿಂದ ಬೆರಳೆಣಿಕೆಯಷ್ಟು ಮಂದಿ ಮಕ್ಕಳೊಂದಿಗೆ ಪ್ರಾರಂಭಗೊಂಡ ಈ ಸಂಗೀತ ಶಿಬಿರವು ಇಂದು ನೂರಕ್ಕೂ ಅಧಿಕ ಮಂದಿಗೆ ವಿದ್ವತ್ತನ್ನು ಧಾರೆಯೆರೆಯುತ್ತಿದೆ. ವಿ| ವಿಠಲರಾಮಮೂರ್ತಿ ಮತ್ತು ಮನೆಯವರು ಇದರ ಸಂಘಟಕರು. ಒಂದು ವಾರದ ಸಂಗೀತ ದಾಸೋಹದಲ್ಲಿ ಎಳೆಯ ಮಕ್ಕಳಿಂದ ತೊಡಗಿ ವಯೋವೃಧœರಾದಿಯಾಗಿ ಎಲ್ಲರೂ ವಿದ್ಯಾರ್ಥಿಗಳೇ.
ಮೇ 14 ರಿಂದ 19 ರವರೆಗೆೆ ನಡೆದ ಈ ಬಾರಿಯ ಶಿಬಿರದ ಮೊದಲ ಮೂರು ದಿನದ ಸಂಪನ್ಮೂಲ ವ್ಯಕ್ತಿಯಾಗಿದ್ದವರು ಮೃದಂಗ ವಾದಕರೂ, ಉತ್ತಮ ಗಾಯಕರೂ ಆಗಿರುವ ಟಿ.ವಿ. ಗೋಪಾಲಕೃಷ್ಣ. ಅವರು ತಮ್ಮದೇ ರಚನೆಯಾದ ದೇವಗಾಂಧಾರ ರಾಗದ ಶಾರದೇ ವಿಶಾರದೇ, ಹಮೀರ್ ಕಲ್ಯಾಣಿ ರಾಗದ ತಿಲ್ಲಾನ, ತಂಜಾವೂರು ಶಂಕರ ಅಯ್ಯರ್ ಅವರ ದೇಶ್ ರಾಗದ ರಾಮನಾಮ ಎಂಬೀ ಹಾಡುಗಳನ್ನು ಕಲಿಸಿಕೊಟ್ಟರು. ಇವರು ಶಿಷ್ಯೆಯಾದ ದೇವಿ ನೈತ್ಯರೊಂದಿಗೆ ಸೇರಿ ಹಾಡಿದ ಕಛೇರಿಯು ಮೆಚ್ಚುಗೆಗೆ ಪಾತ್ರವಾಯಿತು. ಮಾತ್ರವಲ್ಲದೆ ಶಿಷ್ಯೆಯಾದ ಡಾ| ಸಹನಾ ಶ್ರೀನಿವಾಸ್ ಅವರ ವೀಣಾ ಕಛೇರಿಯಲ್ಲಿ ಅದ್ಭುತವಾಗಿ ಮೃದಂಗ ನುಡಿಸಿದರು.
ಮತ್ತೂಬ್ಬರು ಸಂಪನ್ಮೂಲ ವ್ಯಕ್ತಿಯಾಗಿದ್ದವರೆಂದರೆ ಶ್ರೇಷ್ಠ ವಯಲಿನ್ ವಾದಕರಾಗಿರುವ ವಿ.ವಿ. ಸುಬ್ರಹ್ಮಣ್ಯಂ. ಅವರು ವಿಠಲ ರಾಮಮೂರ್ತಿ ವåತ್ತು ಮುಷ್ಣಂ ರಾಜಾರಾವ್ ಅವರೊಂದಿಗೆ ನಡೆಸಿಕೊಟ್ಟ ವಯಲಿನ್ ವಾದನವು ಅಮೋಘವಾಗಿತ್ತು. ಅಲ್ಲದೆ ಯಮುನಾ ಕಲ್ಯಾಣಿ ರಾಗದಲ್ಲಿ ಹರಿದಾಸುಲು ವೆಡಲೇ ಎಂಬ ಕೃತಿಯನ್ನೂ ಶಿಬಿರಾರ್ಥಿಗಳಿಗೆ ಪಾಠಮಾಡಿದರು.
ಶಿಬಿರದಲ್ಲಿ ಭಾಗವಹಿಸಿದ ಮತ್ತಿಬ್ಬರು ಕಲಾವಿದರೆಂದರೆ ಆಸ್ಕರ್ ಪ್ರಶಸ್ತಿಗೆ ನಾಮಾಂಕಿತಗೊಂಡಿರುವ ಗಾಯಕಿ ಬಾಂಬೆ ಜಯಶ್ರೀ ಮತ್ತು ಯುವ ಸಂಗೀತಾಸಕ್ತರ ಆದರ್ಶವಾಗಿರುವ ವಿ| ಅಭಿಷೇಕ್ ರಘುರಾಂ. ಈ ಮೇರುಕಲಾವಿದರಿಬ್ಬರು ಹೇಳಿಕೊಟ್ಟ ಕರ್ನಾಟಕ ಸಂಗೀತದ ಅಪರೂಪದ ರಚನೆಯಾದ ತಿರುಪ್ಪುಗಳು, ಮೋಹನರಾಗದ ಮರುವಕುದಯ, ಶಹನ ರಾಗದ ಕಾವವೇ ಕನ್ಯಾಕುಮಾರಿ ಎಂಬೀ ಕೃತಿಗಳು ಮನಗೆದ್ದವು.
ಸಮಾರೋಪದಲ್ಲಿ ಶಿಬಿರದಲ್ಲಿ ಕಲಿತ ಹಾಡುಗಳನ್ನೆಲ್ಲಾ ಶಿಬಿರಾರ್ಥಿಗಳು ಪ್ರಸ್ತುತಪಡಿಸಿ ಗುರುವಂದನೆ ಸಲ್ಲಿಸಿದರು. ಅನಂತರ ನಡೆದ ಬಾಂಬೆ ಜಯಶ್ರೀಯವರ ಪ್ರಧಾನ ಕಛೇರಿಯು ಹೆಚ್ಚಿನ ರಾಗಾಲಾಪನೆ, ಸ್ವರ ಪ್ರಸ್ತಾರಗಳಿಲ್ಲದೆ ಸುಂದರ ಸಂಗತಿಗಳಿಂದ ಕೂಡಿದ ವಿವಿಧ ಭಜನ್‌ಗಳ ಪ್ರಸ್ತುತಿಯ ಮೂಲಕ ಸಂಪನ್ನಗೊಂಡಿತು.
ಶಿಬಿರವೆಂದರೆ ಬರಿಯ ಹಾಡುಗಳ ಕಲಿಕೆ ಮಾತ್ರವಲ್ಲದೆ ಸಂಗೀತದ ಬಗೆಗೆ ಆಸಕ್ತಿ ಅರಳಿಸುವ ಹತ್ತು ಹಲವು ಕಾರ್ಯಕ್ರಮಗಳಿದ್ದುವು. ಪ್ರತಿದಿನ ಬೆಳಗ್ಗಿನ ಜಾವ ಸಂಗೀತದ ಬಾಲಪಾಠಗಳ ಅಭ್ಯಾಸ. ವಿವಿಧ ಕಾರ್ಯಕ್ರಮಗಳು, ಯಕ್ಷ-ಗಾಯನ-ಸಂವಹನ, ರಸಪ್ರಶ್ನೆಗಳು, ,ಫನ್ ವಿದ್ ಲಯ ಮೊದಲಾದ ಕಾರ್ಯಕ್ರಮಗಳು ಗಮನಸೆಳೆದವು.
ಶ್ರೀವಾಣಿ ಕಾಕುಂಜೆ