ಹರಪನಹಳ್ಳಿ: ಸಂಗೀತಕ್ಕೆ ರೋಗಗಳನ್ನು ಗುಣಪಡಿಸುವ ಶಕ್ತಿಯಿದೆ. ಸಂಗೀತದಿಂದ ಆರೋಗ್ಯ ವೃದ್ಧಿಯಾಗುತ್ತದೆ ಎಂದು ಕೂಲಹಳ್ಳಿ ಪಟ್ಟದ ಚಿನ್ಮಯಿ ಸ್ವಾಮೀಜಿ ಹೇಳಿದರು.
ಪಟ್ಟಣದ ವೀರಭದ್ರೇಶ್ವರ ದೇವಸ್ಥಾನದ ಆವರಣದಲ್ಲಿ ಸ್ವರ ವೈಭವ ಹಿಂದೂಸ್ತಾನಿ ಸಂಗೀತ ಪಾಠ ಶಾಲೆ ವತಿಯಿಂದ ಏರ್ಪಡಿಸಿದ್ದ ಪ್ರಥಮ ವರ್ಷದ ಸ್ವರ ವೈಭವೋತ್ಸವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಪಂಡಿತ್ ಪುಟ್ಟರಾಜ ಗವಾಯಿಗಳು ಅಂಧರಾಗಿದ್ದು, ಅಂಧತೆ ಬಗ್ಗೆ ಯೋಚಿಸದೆ ಸಂಗೀತವನ್ನು ಪ್ರಪಂಚಕ್ಕೆ ಪರಿಚಯಿಸಿದರು. ಅವರ ಆಶೀರ್ವಾದಿಂದ ಸ್ವರ ವೈಭವ ಪಾಠ ಶಾಲೆ ಮುನ್ನೆಡೆಸುವ ಜವಾಬ್ಟಾರಿ ಬಸವರಾಜ್ ಭಂಡಾರಿ ಮೇಲಿದೆ ಎಂದರು.
ಸರ್ಕಲ್ ಇನ್ಸ್‌ಪೆಕ್ಟರ್ ಡಿ.ದುರುಗಪ್ಪ ಮಾತನಾಡಿ, ಅನೇಕ ಬಡ ಮಕ್ಕಳು ಸಂಗೀತ ಕಲಿಯಲು ಆಸಕ್ತಿಯಿದ್ದು, ಆರ್ಥಿಕ ಸಮಸ್ಯಯಿಂದ ಸಂಗೀತದಿಂದ ದೂರ ಉಳಿಯುವಂತಾಗಿದೆ. ಗ್ರಾಮೀಣ ಪ್ರದೇಶದ ಬಡ ಮಕ್ಕಳೀಗೆ ಈ ಸಂಗೀತ ಪಾಠ ಶಾಲೆ ವರದಾನವಾಗಿದೆ ಎಂದು ಹೇಳಿದರು.
ಹಡಗಲಿ ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತ ಗವಾಯಿ ಯುವರಾಜಗೌಡ ಮಾತನಾಡಿ, ಸಂಗೀತ ಪ್ರಾಣಿ ಮತ್ತು ಪಕ್ಷಿಗಳಿಂದ ಬಂದಿದೆ. ಏಳು ಸ್ವರಗಳಿಂದ ಸಂಗೀತ ಹುಟ್ಟಿದೆ. ತಾಯಿ ಲಾಲಿ ಹಾಡುವ ಮೂಲಕ ಮಗುವಿಗೆ ಸಂಗೀತದ ಜ್ಞಾನ ನೀಡುತ್ತಾಳೆ ಎಂದರು.
ಪರ್ಲ್ ಪಬ್ಲಿಕ್ ಶಾಲೆಯ ಅಧ್ಯಕ್ಷ ವಿರೂಪಾಕ್ಷಪ್ಪ ಮಾತನಾಡಿದರು. ಜಿ.ಪಂ ಸದಸ್ಯ ಡಾ| ಮಂಜುನಾಥ ಉತ್ತಂಗಿ, ಯುವ ಮುಖಂಡ ಶಶಿಧರ್ ಪೂಜಾರ್, ಹಾರಾಳ ಅಶೋಕ, ಬಸವರಾಜ್ ಹುಲಿಯಪ್ಪನವರ್, ಪ್ರಹ್ಲಾದ ಸ್ವಾಮೀಜಿ, ಸಂಗೀತ ಶಿಕ್ಷಕ ಬಸವರಾಜ ಭಂಡಾರಿ, ಉಪನ್ಯಾಸಕ ಸಿ.ಅಜ್ಜಯ್ಯ ಇದ್ದರು. ಪಾಠ ಶಾಲಾ ವಿದ್ಯಾರ್ಥಿಗಳಿಂದ ಸಂಗೀತ ಕಾರ್ಯಕ್ರಮ ನಡೆಸಲಾಯಿತು.