Advertisement

ಮಾಡಾಳು ಪ್ರಕರಣ: ಎಚ್ಚರಿಕೆಯ ಹೆಜ್ಜೆಯಿಡಲು ಪ್ರಧಾನ್‌ ಸೂಚನೆ

12:47 AM Mar 06, 2023 | Team Udayavani |

ಬೆಂಗಳೂರು: ಶಾಸಕ ಮಾಡಾಳು ವಿರೂಪಾಕ್ಷಪ್ಪ ಪ್ರಕರಣದಿಂದ ಪಕ್ಷಕ್ಕೆ ಆಗಿರುವ “ಡ್ಯಾಮೇಜ್‌’ ಕಂಟ್ರೋಲ್‌ಗೆ ಖುದ್ದು ಅಖಾಡಕ್ಕೆ ಇಳಿದಿರುವ ಬಿಜೆಪಿ ರಾಜ್ಯ ಚುನಾವಣ ಉಸ್ತುವಾರಿ ಧರ್ಮೇಂದ್ರ ಪ್ರಧಾನ್‌ ಅವರು ಪಕ್ಷಕ್ಕೆ ಕೆಲವು ಸೂಚನೆಗಳನ್ನು ನೀಡಿದ್ದಾರೆ.

Advertisement

ಈ ಸಂಬಂಧ ಶನಿವಾರ ತಡರಾತ್ರಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಪಕ್ಷದ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲು ಅವರೊಂದಿಗೆ ಮಹತ್ವದ ಸಭೆ ನಡೆಸಿರುವ ಅವರು, ಮಾಡಾಳು ಪ್ರಕರಣದ ಬೆಳವಣಿಗೆಗಳ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ ಎನ್ನಲಾಗಿದೆ.

ಚುನಾವಣ ಸಿದ್ಧತೆ, ಯಾತ್ರೆಗಳು, ಪ್ರಧಾನಿ ಮೋದಿ, ಅಮಿತ್‌ ಶಾ ಹಾಗೂ ಇತರ ರಾಷ್ಟ್ರೀಯ ನಾಯಕರ ರಾಜ್ಯ ಪ್ರವಾಸದ ಕುರಿತು ಚರ್ಚಿಸಲು ಸಭೆ ನಡೆದಿದೆ ಎನ್ನಲಾಗುತ್ತಿದ್ದರೂ, ಸಭೆಯ ಪ್ರಧಾನ ವಿಷಯ ಮಾಡಾಳು ಪ್ರಕರಣವೇ ಆಗಿತ್ತು ಎನ್ನಲಾಗುತ್ತಿದೆ. ಪ್ರಕರಣದಲ್ಲಿ ಸರಕಾರ ಮತ್ತು ಪಕ್ಷದ ವಿರುದ್ಧ ಯಾವುದೇ ಕಾರಣಕ್ಕೂ ಕಾಂಗ್ರೆಸ್‌ ಕೈ ಮೇಲಾಗದಂತೆ ನೋಡಿಕೊಳ್ಳಿ, ಚುನಾವಣೆ ಮುನ್ನ ಭ್ರಷ್ಟಾಚಾರದ ಆರೋಪ ಪಕ್ಷದ ಮೇಲೆ ನಕಾರಾತ್ಮಕ ಪರಿಣಾಮ ಬೀರಲಿದೆ. ಇಂತಹ ಘಟನೆಗಳು ಮರುಕಳಿಸದಂತೆ ನೋಡಿಕೊಳ್ಳಿ, ಸಂಪುಟ ಸಹೋದ್ಯೋಗಿಗಳು ಮತ್ತು ನಿಗಮ ಮಂಡಳಿ ಅಧ್ಯಕ್ಷರು ಎಚ್ಚರಿಕೆಯಿಂದ ಇರುವಂತೆ ನೋಡಿಕೊಳ್ಳುವಂತೆ ಮುಖ್ಯಮಂತ್ರಿಗಳಿಗೆ ಪ್ರಧಾನ್‌ ಸೂಚಿಸಿದರು ಎನ್ನಲಾಗಿದೆ.

ಮಾಡಾಳು ಪ್ರಶಾಂತ್‌ ಲೋಕಾಯುಕ್ತ ಬಲೆಗೆ ಬಿದ್ದ ಹಿನ್ನೆಲೆಯಲ್ಲಿ ವಿರೂಪಾಕ್ಷಪ್ಪ ಮತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ರಾಜೀನಾಮೆಗೆ ಆಗ್ರಹಿಸಿ ಕಾಂಗ್ರೆಸ್‌ ಹೋರಾಟಕ್ಕಿಳಿದಿದ್ದು, ಮುಖ್ಯಮಂತ್ರಿಗಳ ನಿವಾಸಕ್ಕೆ ಮುತ್ತಿಗೆ ಯತ್ನವನ್ನೂ ನಡೆಸಿದೆ. ರಾಜ್ಯಾದ್ಯಂತ ಈ ವಿಚಾರವನ್ನಿಟ್ಟುಕೊಂಡೇ ಪ್ರತಿಭಟನೆ ನಡೆಸಲು ಕಾಂಗ್ರೆಸ್‌ ನಿರ್ಧರಿಸಿದೆ. ಹಾಗಾಗಿ 40 ಪರ್ಸೆಂಟ್‌ ಕಮಿಷನ್‌ ಮತ್ತು ಭ್ರಷ್ಟಾಚಾರ ಆರೋಪವನ್ನು ಸಮರ್ಥವಾಗಿ ಎದುರಿಸಬೇಕು. ಯಾವುದೇ ಕಾರಣಕ್ಕೂ ಕಾಂಗ್ರೆಸ್‌ ಕೈ ಮೇಲಾಗದಂತೆ ನೋಡಿಕೊಳ್ಳಬೇಕು. ಅದಕ್ಕೆ ಬೇಕಾದ ಸಿದ್ಧತೆ ಮಾಡಿಕೊಳ್ಳಿ, ಕಾಂಗ್ರೆಸ್‌ ಆರೋಪ, ಟೀಕೆಗಳಿಗೆ ತಕ್ಕ ಎದುರೇಟು ನೀಡಬೇಕು, ಇಡೀ ಸಚಿವ ಸಂಪುಟ ಒಟ್ಟಾಗಿ ಕಾಂಗ್ರೆಸ್‌ ಟೀಕೆಗಳನ್ನು ಎದುರಿಸಬೇಕು ಎಂದು ಸೂಚಿಸಿದರು ಎನ್ನಲಾಗಿದೆ.

ರಾಜಕೀಯ ಲೆಕ್ಕಾಚಾರ
ರಾಜ್ಯ ಸರಕಾರದ ವಿರುದ್ಧದ ಕಾಂಗ್ರೆಸ್‌ ಹೋರಾಟದ ಸ್ವರೂಪ ಮತ್ತೂಂದು ಹಂತ ತಲುಪಿದೆ. ಮಾ.9ರಂದು ಕಾಂಗ್ರೆಸ್‌ ಕರೆದಿರುವ 2 ಗಂಟೆಗಳ ರಾಜ್ಯ ಬಂದ್‌ ಮೇಲ್ನೋಟಕ್ಕೆ ಕೇವಲ ಎರಡು ತಾಸುಗಳಿಗೆ ಸೀಮಿತವಾಗಿರಬಹುದು. ಆದರೆ ಈ ಅಲ್ಪಾವಧಿಯಲ್ಲೇ ಇಡೀ ರಾಜ್ಯದ ಗಮನವನ್ನು ಹೋರಾಟದತ್ತ ಸೆಳೆಯುವ ಮೂಲ ಉದ್ದೇಶ ಕಾಂಗ್ರೆಸ್‌ನದ್ದಾಗಿದೆ. ಇದೇ ಕಾರಣಕ್ಕೆ ಬಂದ್‌ ಆಚರಣೆ ಜತೆಗೆ ಜಿಲ್ಲಾ ಕೇಂದ್ರಗಳಲ್ಲಿ ಕಾಂಗ್ರೆಸ್‌ ಕಾರ್ಯಕರ್ತರು ಪ್ರತಿಭಟನೆಯನ್ನೂ ನಡೆಸುತ್ತಿದ್ದಾರೆ. ವಾಣಿಜ್ಯೋದ್ಯಮಿಗಳು, ವಿವಿಧ ಸಂಘಟನೆಗಳಿಗೆ ಕೇವಲ ಎರಡು ತಾಸು ಸ್ವಯಂಪ್ರೇರಿತವಾಗಿ ಬಂದ್‌ ಮಾಡಿ ಹೋರಾಟ ಬೆಂಬಲಿಸುವಂತೆ ಮನವಿ ಮಾಡಲಾಗುತ್ತಿದೆ.

Advertisement

ಬಂದ್‌ ಯಾವುದೇ ಕಾರಣಕ್ಕೂ ಒತ್ತಾಯಪೂರ್ವಕವಾಗಿ ಮಾಡುವುದಿಲ್ಲ. ಮಕ್ಕಳು ಪರೀಕ್ಷೆ ಬರೆಯಲು, ಶಾಲಾ-ಕಾಲೇಜುಗಳಿಗೆ ತೆರಳಲು, ನೌಕರರು ಕೆಲಸಕ್ಕೆ ತೆರಳಲು ಯಾವುದೇ ತೊಂದರೆ ಆಗದಿರಲು ಸಾರಿಗೆ ಸೇವೆಗೆ ಎಂದಿನಂತೆ ಮುಂದುವರಿಯಲಿದೆ. ಆಸ್ಪತ್ರೆಗಳಲ್ಲಿ ಸೇವೆಗಳು ಕೂಡ ಇರಲಿವೆ. ಜನರೇ ಸ್ವಯಂಪ್ರೇರಿತವಾಗಿ ಎರಡು ವಾಣಿಜ್ಯ ಚಟುವಟಿಕೆಗಳನ್ನು ಸ್ಥಗಿತಗೊಳಿಸಿ ಬೆಂಬಲ ನೀಡಲಿದ್ದಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮ್ಮದ್‌ ಹೇಳಿದ್ದಾರೆ.

ಏನಿದು ಲುಕ್‌ಔಟ್‌ ನೋಟಿಸ್‌ ?
ವ್ಯಕ್ತಿ ವಿರುದ್ಧ ಲುಕ್‌ಔಟ್‌ ನೋಟಿಸ್‌ ಜಾರಿ ಮಾಡಿದರೆ ಆತನನ್ನು ಬಂಧಿಸಲು ಅವಕಾಶವಿದೆ. ವಿಚಾರಣೆ ಮಾಡಲು ಪೊಲೀಸ್‌ ಠಾಣೆಗೆ ಭೇಟಿ ನೀಡುವಂತೆ ಆತನ ಕುಟುಂಬದ ಸದಸ್ಯರನ್ನು ಕೇಳಬಹುದು. ಅಂತಾರಾಷ್ಟ್ರೀಯ ಗಡಿಗಳು, ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳು, ಕಡಲ ಪ್ರದೇಶಗಳು, ಬಂದರು, ರಾಜ್ಯದ ಗಡಿ ಪ್ರದೇಶಗಳು ಇತ್ಯಾದಿಗಳಲ್ಲಿ ಆರೋಪಿಗಳನ್ನು ಬಂಧಿಸಲು ಈ ಅಸ್ತ್ರ ಬಳಸಲಾಗುತ್ತದೆ. ಅವುಗಳನ್ನು ದೇಶದ ಎಲ್ಲ ವಲಸೆ ಚೆಕ್‌ಪೋಸ್ಟ್‌ಗಳಿಗೂ ಕಳುಹಿಸಿಕೊಡಲಾಗುತ್ತದೆ. ಒಂದು ವೇಳೆ ಮಾಹಿತಿ ನೀಡದೆ ಸಂಬಂಧಿತ ಆರೋಪಿ ವಿದೇಶಕ್ಕೆ ಇಲ್ಲವೆ ಹೊರರಾಜ್ಯಗಳಿಗೆ ತೆರಳಲು ಮುಂದಾದರೆ ಸಂಬಂಧಪಟ್ಟ ತನಿಖಾ ಸಂಸ್ಥೆಗಳು ವಶಕ್ಕೆ ಪಡೆಯಬಹುದು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next