ಕುಕನೂರು: ಮಾನವನ ಜೀವನದಲ್ಲಿ ಕಷ್ಟ-ಸುಖ ಸಹಜ. ಆದರೆ ಅದನ್ನು ಮರೆಸಿ ಜೀವನದಲ್ಲಿ ಸಂತೃಪ್ತಿ ನೀಡುವ ಶಕ್ತಿ ಸಂಗೀತಕ್ಕಿದೆ ಎಂದು ಗಾಯಕ ಮುರಾರಿ ಭಜಂತ್ರಿ ಹೇಳಿದರು.
ಪಟ್ಟಣದ ಭಜಂತ್ರಿ ಓಣಿಯ ದುರ್ಗಾದೇವಿ ದೇವಸ್ಥಾನದಲ್ಲಿ ಶ್ರೀ ಪಂಚಾಕ್ಷರ ಶಿಕ್ಷಣ ಸಂಘದಿಂದ ಗಾನಯೋಗಿ ಪಂಚಾಕ್ಷರ ಗವಾಯಿಗಳ 79ನೇ ಪುಣ್ಯಸ್ಮರಣೆ ಹಾಗೂ ಪುಟ್ಟರಾಜ ಗವಾಯಿಗಳ 9ನೇ ಪುಣ್ಯಸ್ಮರಣೆ ಅಂಗವಾಗಿ ನಡೆದ ಸಂಗೀತ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಇಂದಿನ ದಿನಗಳಲ್ಲಿ ಉತ್ತಮವಾದ ಗುರುಗಳನ್ನು ಪಡೆಯುವುದು ಒಂದು ಪುಣ್ಯದ ಕಾರ್ಯವೇ ಸರಿ. ಈ ನಿಟ್ಟಿನಲ್ಲಿ ಸಂಗೀತ ಕ್ಷೇತ್ರದಲ್ಲಿ ಜಗವೇ ಮೆಚ್ಚುವಂತಹ ಗುರುಗಳು ಯಾರಾದರೂ ಇದ್ದರೆ ಅದು ಗಾನಯೋಗಿ ಪಂಚಾಕ್ಷರಿ ಗವಾಯಿ ಹಾಗೂ ಪಂಡಿತ ಪುಟ್ಟರಾಜ ಗವಾಯಿಗಳು ಎಂದರು.
ರುದ್ರಪ್ಪ ಭಂಡಾರಿ ಮಾತನಾಡಿ ದೇಹಕ್ಕೆ ಅಂಟಿರುವ ಕೊಳೆ ತೊಳೆಯುವುದು ಎಷ್ಟು ಮುಖ್ಯವೋ ಅದಕ್ಕಿಂತಲೂ ಮನಸ್ಸಿಗೆ ಅಂಟಿದ ಜಾಡ್ಯ ತೊಳೆಯುವುದು ಮುಖ್ಯ. ಅಂತಹ ಕೊಳೆಯನ್ನು ತೊಳೆಯಲು ಸಂಗೀತದಿಂದ ಮಾತ್ರ ಸಾಧ್ಯ. ಆದ್ದರಿಂದ ಮನಸ್ಸು ನೆಮ್ಮದಿಯಾಗಿರಲು ಸಂಗೀತ ಕೇಳುತ್ತಿರಬೇಕು ಎಂದು ಸಲಹೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಜಿಪಂ ಮಾಜಿ ಅಧ್ಯಕ್ಷ ರಾಮಣ್ಣ ಭಜಂತ್ರಿ ಮಾತನಾಡಿ, ಬದುಕು ಸಾಗಿಸಲು ಹಲವಾರು ಮಾರ್ಗಗಳಿದ್ದರೂ ಆರೋಗ್ಯಕರ ಮಾರ್ಗದಿಂದ ಸಾಗುವುದೇ ಶ್ರೇಯಸ್ಕರವಾದದು. ಅಂತಹ ಬದುಕಿಗೆ ಸಂಗೀತ ಕೇಳುವುದು ಉತ್ತಮವಾದ ಮಾರ್ಗ. ಈ ಮಾರ್ಗದಲ್ಲಿ ನಡೆದ ಹಲವಾರು ಜನ ಇಂದಿಗೂ ನಮ್ಮೊಂದಿಗೆ ಇದ್ದಾರೆ. ಅಂತಹವರಲ್ಲಿ ಗದುಗಿನ ಪೂಜ್ಯರು ಅಂಧ, ಅನಾಥರ ಬದುಕಿಗೆ ದಾರಿ ದೀಪವಾಗಿದ್ದಾರೆ. ಅಂತಹವರ ಸ್ಮರಣೆ ಮಾಡುವ ಮೂಲಕ ನಮ್ಮಲ್ಲಿಯೂ ಅವರ ವಿಚಾರಧಾರೆ ಅಳವಡಿಸಿಕೊಳ್ಳಬೇಕು ಎಂದರು.
ಬಸವರಾಜ ಕಿತ್ತೂರು, ಕರಿಯಪ್ಪ ಭಜಂತ್ರಿ, ಯಲ್ಲಪ್ಪ ಸಂದಿಮನಿ, ನೀಲಕಂಠಪ್ಪ ಮೇಣದಾಳ, ಮುತ್ತಣ್ಣ ಕವಲೂರು, ಗವಿಸಿದ್ದಪ್ಪ ಅಣ್ಣಿಗೇರಿ, ಪರಶುರಾಮ ಭಜಂತ್ರಿ, ಮುಕುಂದ ಭಜಂತ್ರಿ, ಶಾವಿತ್ರಮ್ಮ ಭಜಂತ್ರಿ, ಶಂಕ್ರಮ್ಮ ಹಳ್ಳಿಕೇರಿ, ಗೀತಾ ಅಕ್ಕಿ, ಸಂದ್ಯಾವಳಿ ದೀಕ್ಷಿತ್, ಬಸಮ್ಮ ಎಚ್., ಚಂದ್ರಶೇಖರ ಕಿತ್ತೂರು, ಶ್ರೀಕಾಂತ ಭಜಂತ್ರಿ, ಮಾಂತೇಶ ಧಾರವಾಡ, ಜಾನಕಿ ಕಿತ್ತೂರು, ಮಹೇಶ್ವರಿ ಬಡಿಗೇರ ಹಾಗೂ ಇತರರಿದ್ದರು.