Advertisement
ಪರ್ಕಳದ ಸರಿಗಮ ಭಾರತಿಯಲ್ಲಿ ಈ ಸಲದ ವಿಜಯದಶಮಿಯ ಸಂಗೀತ ಹಬ್ಬದಲ್ಲಿ ಹಳೆ ವಿದ್ಯಾರ್ಥಿನಿ ಕು| ಸಂಸ್ಕೃತಿ, ಬೆಂಗಳೂರು ಇವರ ಸಂಗೀತ ಕಾರ್ಯಕ್ರಮದ ಬಳಿಕ ಸಂಗೀತ ಶಿಕ್ಷಕಿ ಸ್ವರ್ಣಾ ಎನ್. ಭಟ್ ಅವರು ಹಾಡುಗಾರಿಕೆಯನ್ನು ನಡೆಸಿ ಕೊಟ್ಟರು. ನವರಾಗ ಮಾಲಿಕಾ ವರ್ಣದ ನಂತರ ಹಂಸಧ್ವನಿಯ ವರವಲ್ಲಭ ರಮಣವನ್ನು ಹಾಡಿದರು. ಮುಂದೆ “ದುರ್ಗಾದೇವೀ ದುರಿತ ನಿವಾರಿಣಿ’ಯ ನಂತರ ಆಲಾಪನೆ, ಸ್ವರ ಕಲ್ಪನೆಗಳೊಂದಿಗೆ ಶ್ರೀ ಸರಸ್ವತೀ (ಆರಭಿ), ಶಂಭೋ ಮಹಾದೇವ ( ಪಂತುವರಾಳಿ)ವನ್ನು ಪ್ರಸ್ತುತಿ ಪಡಿಸಿದರು. ಮುಂದೆ ಪ್ರಧಾನ ರಾಗವಾಗಿ ಕೀರವಾಣಿಯನ್ನು ಆರಿಸಿಕೊಂಡು ವರವೀಣಾಪಾಣಿಯನ್ನು$ ನೆರವಲ್ ಮತ್ತು ಸ್ವರಗಳಿಂದ ವಿಸ್ತರಿಸಿದರು. ಹಂಸಾನಂದಿ ರಾಗದ ತಿಲ್ಲಾನದೊಂದಿಗೆ ಕಛೇರಿಯನ್ನು ಸಮಾಪ್ತಿಗೊಳಿಸಿದರು. ಪಕ್ಕವಾದ್ಯದಲ್ಲಿ ವಸಂತಿ ರಾಮ ಭಟ್ ವಯೊಲಿನ್ ಹಾಗೂ ಡಾ| ಬಾಲಚಂದ್ರ ಆಚಾರ್ ಮೃದಂಗ ಸಹಕಾರವನ್ನಿತ್ತರು.
Related Articles
Advertisement
ಅನಂತರದ ಕಛೇರಿಯನ್ನು ನಡೆಸಿಕೊಟ್ಟವರು ಚೆನ್ನೈಯ ವಿ| ಸಾಕೇತರಾಮನ್. ನಳಿನಕಾಂತಿಯ ವರ್ಣದ ಆಕರ್ಷಕ ಪ್ರಸ್ತುತಿಯಿಂದ ಕಾರ್ಯಕ್ರಮ ಶುರುವಾಯಿತು. ಮಲಯ ಮಾರುತದ ಮನಮುಟ್ಟುವ ಆಲಾಪನೆ, ಸ್ವರ ಕಲ್ಪನೆಗಳೊಂದಿಗೆ “ಸ್ಮರಣೆಯೊಂದೇ ಸಾಲದೇ’ ದಾಸರ ಕೀರ್ತನೆಯನ್ನು ಮನೋಜ್ಞವಾಗಿ ಹಾಡಲಾಯಿತು. ಮುಂದೆ ನಾಸಿಕಾಭೂಷಣಿ ರಾಗದ ಆಲಾಪನೆಯನ್ನು ಮಾಡಿದ ರೀತಿ ಮನಮುಟ್ಟಿತು. ಆನಂದ ಭೈರವಿಯ ಸಾಂಪ್ರದಾಯಿಕವಾದ ಆಲಾಪನೆಯೊಂದಿಗೆ ಅಪರೂಪದ ಕೃತಿ “ನೀ ಮದಿ ಚಲ್ಲಗ’ವನ್ನು ಮುಂದಿಟ್ಟರು. ಬೃಂದಾವನಿ ಸಾರಂಗದಲ್ಲಿ ಪುರಂದರದಾಸರ “ಇದು ಭಾಗ್ಯ ಇದು ಭಾಗ್ಯವಯ್ನಾ’ವನ್ನು ಹಾಡಿದ ಬಳಿಕ ಪ್ರಧಾನ ರಾಗವಾಗಿ ಪೂರ್ವಿಕಲ್ಯಾಣಿಯನ್ನು ಆರಿಸಿಕೊಂಡು ದೀಕ್ಷಿತರ “ಮೀನಾಕ್ಷಿ ಮೀ ಮುದಂ ದೇಹಿ’ಯನ್ನು ಹಾಡಿದರು. ಮಧುರಾಪುರಿ ನಿಲಯೇಯಲ್ಲಿ ರಾಗದ ಪ್ರಮುಖ ಸಂಚಾರಗಳನ್ನು ಎತ್ತಿ ಹಿಡಿಯುವ ರೀತಿಯಲ್ಲಿ ನೆರವಲ್ ಹಾಗೂ ಕಲ್ಪನಾ ಸ್ವರಗಳನ್ನು ಪೋಣಿಸಿದರು. ಬಾರೋ ಕೃಷ್ಣಯ್ನಾ, ತಿಲ್ಲಾನಗಳೊಂದಿಗೆ ಈ ಕಛೇರಿ ಕೊನೆಗೊಂಡಿತು. ವಯೊಲಿನ್‌ನಲ್ಲಿ ವಿಠಲರಂಗನ್ ,ಮೃದಂಗದಲ್ಲಿ ಸುನಾದ ಕೃಷ್ಣ ಅಮೈ ಮತ್ತು ಮೋರ್ಸಿಂಗ್‌ನಲ್ಲಿ ಪಯ್ಯನೂರ್ ಗೋವಿಂದ ಪ್ರಸಾದ್ ಸಹಕರಿಸಿದರು.
ವಿದ್ಯಾಲಕ್ಷ್ಮೀ ಕಡಿಯಾಳಿ