ಧಾರವಾಡ: ಯೋಗಾಭ್ಯಾಸದಂತೆ ಸಂಗೀತ ಹಾಗೂ ಲಲಿತ ಕಲೆಗಳ ತರಬೇತಿಯೂ ಅವಶ್ಯವಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ದಲಿಂಗೇಶ ರಂಗಣ್ಣವರ ಹೇಳಿದರು.
ನಗರದ ಸೃಜನಾ ರಂಗಮಂದಿರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ರೈಸಿಂಗ್ ಸ್ಟಾರ್ ಆರ್ಟ್ ಕಲ್ಚರಲ್ ಅಕಾಡೆಮಿ ಹಮ್ಮಿಕೊಂಡಿದ್ದ ಹಿಂದೂಸ್ಥಾನಿ ಶಾಸ್ತ್ರೀಯ ಗಾಯನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಇಂದಿನ ಯುವಪೀಳಿಗೆಯು ಪಾಶ್ಚಿಮಾತ್ಯ ಕಲೆಗಳಿಗೆ ಮಾರು ಹೋಗುತ್ತಿರುವುದು ವಿಷಾದನೀಯ ಸಂಗತಿ. ನಮ್ಮ ಭಾರತೀಯ ಶಾಸ್ತ್ರೀಯ ಸಂಗೀತ ಕಲಾ ಪ್ರಕಾರಗಳನ್ನು ಅಭ್ಯಾಸ ಮಾಡುವುದು ಬಹಳ ಅವಶ್ಯವಿದೆ.
ಕಾರಣ ಸಂಗೀತ ಕಲೆಯು ಯೋಗಾಭ್ಯಾಸದಂತೆ ಮಾನಸಿಕ ಹಾಗೂ ದೈಹಿಕವಾಗಿ ಆರೋಗ್ಯಕ್ಕೆ ಪೂರಕವಾಗಿದ್ದು, ಶಾಲಾ-ಕಾಲೇಜುಗಳಲ್ಲಿ ಕೂಡ ವಿದ್ಯಾರ್ಥಿಗಳಿಗೆ ಪಠ್ಯ ಚಟುವಟಿಕೆಗಳೊಂದಿಗೆ ಪಠ್ಯೇತರ ಚಟುವಟಿಕೆಗಳಾದ ಸಂಗೀತ, ನೃತ್ಯ ಹಾಗೂ ರಂಗ ತರಬೇತಿ ಶಿಬಿರಗಳು ಸಹಕಾರಿಯಾಗಲಿವೆ ಎಂದರು.
ನಮ್ಮ ನಾಡಿನ ಸಂತರು, ದಾರ್ಶನಿಕರು ಹಾಗೂ ಪ್ರಸಿದ್ಧ ಸಂಗೀತಗಾರರ ಕುರಿತು ಪುಸ್ತಕಗಳು ಹಾಗೂ ಗ್ರಂಥಗಳನ್ನು ಓದುವದರೊಂದಿಗೆ ಮಕ್ಕಳಿಗೂ ಕೂಡ ಅಭ್ಯಾಸಕ್ಕೆ ಪೂರಕವಾಗಲಿವೆ ಎಂದರು. ಇದೇ ಸಂದರ್ಭದಲ್ಲಿ ದೆಹಲಿಯ ಕಲಾವಿದ ಗುಲಾಂ ಹಸನ್‌ಖಾನ, ತಬಲಾ ವಾದಕರಾದ ಉಸ್ತಾದ್ ನಿಸಾರ ಅಹ್ಮದ್, ಸಂಗೀತಗಾರ ಶರಣ ಕುಮಾರ, ತಬಲಾ ವಾದಕರಾದ ಪ್ರಸಾದ ಮಡಿವಾಳರ ಅವರನ್ನು ಸಂಸ್ಥೆ ವತಿಯಿಂದ ಸನ್ಮಾನಿಸಲಾಯಿತು.
ರೈಸಿಂಗ್ ಸ್ಟಾರ್ ಆರ್ಟ್ ಕಲ್ಚರಲ್ ಅಕಾಡೆಮಿ ಅಧ್ಯಕ್ಷ ಪ್ರಕಾಶ ಮಲ್ಲಿಗವಾಡ ಅಧ್ಯಕ್ಷತೆ ವಹಿಸಿದ್ದರು. ಯುವ ಕಲಾವಿದ ಬಸವರಾಜ ಹಿರೇಮಠ ಹಾಗೂ ತಬಲಾ ವಾದಕ ಪ್ರಸಾದ ಮಡಿವಾಳರ ಇದ್ದರು. ಸನ್ಮಾನಿತರಾದ ಯುವ ಕಲಾವಿದ ಗುಲಾಂ ಹಸನ್ ಖಾನ ಸುಮಾರು ಎರಡೂವರೆ ಗಂಟೆ ಹಿಂದೂಸ್ಥಾನಿ ಶಾಸ್ತ್ರೀಯ ಗಾಯನ ಪ್ರಸ್ತುತ ಪಡಿಸಿದರು.
ತಬಲಾ ವಾದಕರಾದ ಉಸ್ತಾದ್ ನಿಸಾರ ಅಹ್ಮದ್ ಹಾಗೂ ಸಂಗೀತಗಾರ ಶರಣಕುಮಾರ ಅವರು ಹಾರ್ಮೋನಿಯಂ ಸಾಥ್ ನೀಡಿದರು. ಅನುಷಾ ನಾಡಿಗೇರ ಸ್ವಾಗತಿಸಿದರು. ಸತೀಶ ಮೂರುರ ನಿರೂಪಿಸಿದರು. ಶರತಕುಮಾರ ವಂದಿಸಿದರು.