Advertisement

ಸಂಗೀತ, ನೃತ್ಯ ಅಕಾಡೆಮಿ ಪ್ರತ್ಯೇಕತೆಗೆ ಸಿದ್ಧತೆ

06:00 AM Sep 26, 2018 | |

ಬೆಂಗಳೂರು: ಆಧುನಿಕತೆಗೆ ತಕ್ಕಂತೆ ಸಂಗೀತ ಮತ್ತು ನೃತ್ಯ ಕ್ಷೇತ್ರಗಳು ಹೊಸ ಮಾದರಿಗಳನ್ನು ಅಳವಡಿಸಿಕೊಂಡು ವಿಸ್ತಾರಗೊಳ್ಳುತ್ತಿವೆ. ಇದಕ್ಕೆ ಪೂರಕವಾಗಿ ಸ್ಪಂದಿಸುವ ಉದ್ದೇಶದಿಂದ ಕರ್ನಾಟಕ ಸಂಗೀತ, ನೃತ್ಯ ಅಕಾಡೆಮಿಯನ್ನು ನೃತ್ಯ ಅಕಾಡೆಮಿ ಮತ್ತು ಸಂಗೀತ ಅಕಾಡೆಮಿಯನ್ನಾಗಿ ಪ್ರತ್ಯೇಕಗೊಳಿಸಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಿದ್ಧತೆ ನಡೆಸಿದೆ.

Advertisement

ಸಂಗೀತ ಮತ್ತು ನೃತ್ಯ ಕ್ಷೇತ್ರಗಳಲ್ಲಿ ನೂರಾರು ಪ್ರಕಾರಗಳಿವೆ. ಜತೆಗೆ ಇತ್ತೀಚೆಗೆ ಹೊಸ ಮಾದರಿಗಳು ಸೇರಿಕೊಂಡು ಇವುಗಳ ವ್ಯಾಪ್ತಿ ಮತ್ತಷ್ಟು ವಿಸ್ತಾರಗೊಂಡಿವೆ. ಹೀಗಾಗಿ ಸಂಗೀತ ಮತ್ತು ನೃತ್ಯಕ್ಕೆ ಒಂದೇ ಅಕಾಡೆಮಿ ಎಂದಾದರೆ ಎರಡು ಕ್ಷೇತ್ರಗಳಿಗೂ ಸಲ್ಲಬೇಕಾದ ಪ್ರಾಮುಖ್ಯತೆ ದೊರಕುವುದಿಲ್ಲ. ಹೀಗಾಗಿ ಅವುಗಳನ್ನು ಪ್ರತ್ಯೇಕಿಸಲು ಆಲೋಚಿಸಲಾಗಿದೆ. ಸಾಂಸ್ಕೃತಿಕ ನೀತಿ ಅನುಷ್ಠಾನಗೊಂಡ ಹಿನ್ನೆಲೆಯಲ್ಲಿ ಈ ಅಕಾಡೆಮಿಯನ್ನು ಪ್ರತ್ಯೇಕಗೊಳಿಸಲಾಗುತ್ತಿದೆ.

ಈಗಾಗಲೇ ಈ ಬಗ್ಗೆ ಪ್ರಸ್ತಾವನೆ ಸಿದ್ಧಗೊಳಿಸಿರುವ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಒಂದು ತಿಂಗಳ ಹಿಂದೆಯೇ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ಸರ್ಕಾರ ಇದಕ್ಕೆ ಒಪ್ಪಿಗೆ ನೀಡಿದ ನಂತರ ಪ್ರತ್ಯೇಕ ಅಕಾಡೆಮಿಗಳು ಸ್ಥಾಪನೆಯಾಗಲಿವೆ. ಜತೆಗೆ ಅಕಾಡೆಮಿಗಳಿಗೆ ಅನುದಾನವೂ ಹಂಚಿಕೆಯಾಗಲಿದ್ದು, ಒಟ್ಟಾರೆ ಅನುದಾನ ಹೆಚ್ಚಳವಾಗಲಿದೆ. ಇದರಿಂದ ಹೊಸ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಸಹಕಾರಿಯಾಗುತ್ತದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಕೇಂದ್ರ ಸಂಗೀತ ನಾಟಕ ಅಕಾಡೆಮಿಯಂತೆ ಕರ್ನಾಟಕದಲ್ಲೂ ರಾಜ್ಯ ಸಂಗೀತ ನಾಟಕ ಅಕಾಡೆಮಿ ಎಂದಿತ್ತು. ಸಾಹಿತ್ಯ, ಲಲಿತಕಲೆ, ನಾಟಕ, ಸಂಗೀತ ನೃತ್ಯ ಹಾಗೂ ಜನಪದ ಕ್ಷೇತ್ರಗಳು ಈ ಅಕಾಡೆಮಿ ವ್ಯಾಪ್ತಿಗೆ ಬರುತ್ತಿದ್ದವು. 1977ರಲ್ಲಿ ಅಕಾಡೆಮಿಗಳನ್ನು ಪ್ರತ್ಯೇಕಿಸಿ ಸಂಗೀತ ಮತ್ತು ನೃತ್ಯ, ಸಾಹಿತ್ಯ, ಜನಪದ, ಲಲಿತಕಲೆ, ನಾಟಕ ಎಂಬ 5 ಅಕಾಡೆಮಿಗಳನ್ನು ಸ್ಥಾಪಿಸಲಾಯಿತು. 

ಯಕ್ಷಗಾನ ಬಯಲಾಟ ಪ್ರತ್ಯೇಕಗೊಂಡವು: ಈ ಹಿಂದೆ ಯಕ್ಷಗಾನ ಮತ್ತು ಬಯಲಾಟ ಅಕಾಡೆಮಿ ಒಂದೇ ಇತ್ತು. ಆದರೆ, ಯಕ್ಷಗಾನ ಮತ್ತು ಬಯಲಾಟದ ಕಾರ್ಯಕ್ಷೇತ್ರಗಳು ವಿಭಿನ್ನವಾದವು. ಒಂದು ಉತ್ತರ ಕರ್ನಾಟಕದ ಕಲೆ ಮತ್ತೂಂದು ಕರಾವಳಿ ಭಾಗದ ಕಲೆ ಎಂಬ ಕಾರಣಕ್ಕಾಗಿ ಕಳೆದ ವರ್ಷ ಯಕ್ಷಗಾನ ಮತ್ತು ಬಯಲಾಟ ಅಕಾಡೆಮಿಯಿಂದ ಬಯಲಾಟವನ್ನು ಪ್ರತ್ಯೇಕಗೊಳಿಸಿ ಬಾಗಲಕೋಟೆಯಲ್ಲಿ ಬಯಲಾಟ ಅಕಾಡೆಮಿ ಆರಂಭಿಸಲಾಗಿತ್ತು. ಇದೇ ಮಾದರಿಯಲ್ಲಿ ಸಂಗೀತ ಮತ್ತು ನೃತ್ಯ ಅಕಾಡೆಮಿಗಳನ್ನು ವಿಭಜಿಸಲಾಗುತ್ತಿದೆ. ಇದಲ್ಲದೆ, 1978ರಲ್ಲಿ ಪ್ರಾರಂಭವಾದ ಸಂಗೀತ ನೃತ್ಯ ಅಕಾಡೆಮಿಗೆ ಇಲ್ಲಿಯವರೆಗೂ ನೃತ್ಯ ಕ್ಷೇತ್ರದಿಂದ ಕೇವಲ 3 ಮಂದಿ ಮಾತ್ರ ಅಧ್ಯಕ್ಷರಾಗಿದ್ದಾರೆ. 1987ರಿಂದ 1990ರವರೆಗೆ ಮಾಯಾರಾವ್‌, 1995ರಿಂದ 1997ರವರೆಗೆ ಯು.ಕೆ.ಚಂದ್ರಭಾಗದೇವಿ ಹಾಗೂ 2011 ರಿಂದ 2013ರವರೆಗೆ ವೈಜಯಂತಿ ಕಾಶಿ ಮಾತ್ರ ಈ ಕ್ಷೇತ್ರದಿಂದ ಅಧ್ಯಕ್ಷರಾಗಿದ್ದರು. ಉಳಿದಂತೆ ಸಂಗೀತ ಕ್ಷೇತ್ರದಿಂದಲೇ ಅಧ್ಯಕ್ಷರಾಗಿ ನೇಮಕ ವಾಗುತ್ತಿರುವುದು ನೃತ್ಯ ಕ್ಷೇತ್ರವನ್ನು ಸರ್ಕಾರ ಕಡೆಗಣಿಸಿದಂತಾಗಿದೆ. ಇದಕ್ಕೆ ಸಿಗಬೇಕಾದ ಮಾನ್ಯತೆ ದೊರೆಯುತ್ತಿಲ್ಲ ಎಂದು ಹಲವು ಬಾರಿ ನೃತ್ಯ ಕಲಾವಿದರು 
ಅಸಮಾಧಾನ ವ್ಯಕ್ತಪಡಿಸಿದ್ದೂ ಇದೆ.

ಅಗಾಧವಾದ ನೃತ್ಯಕ್ಷೇತ್ರ ಸಂಗೀತ ನೃತ್ಯ ಅಕಾಡೆಮಿಯಿಂದ ನೃತ್ಯವನ್ನು ಪ್ರತ್ಯೇಕಗೊಳಿಸಲು ಇಲಾಖೆ ಮುಂದಾಗಿರುವುದು ಒಳ್ಳೆಯ ನಿರ್ಧಾರ. ಸಂಗೀತದಂತೆ ನೃತ್ಯ ಕ್ಷೇತ್ರವೂ ಅಗಾಧವಾದದು. ಕರ್ನಾಟಕ, ಹಿಂದೂಸ್ತಾನಿ, ಗಮಕ, ಹರಿಕಥೆ ಎಲ್ಲವೂ ಸಂಗೀತ ಮತ್ತು ನೃತ್ಯ ಅಕಾಡೆಮಿಗೆ ಒಳಪಟ್ಟಿರುತ್ತದೆ. ಈ ಎರಡು ಕ್ಷೇತ್ರವನ್ನು ಪ್ರತಿನಿಧಿಸುವ ಅಕಾಡೆಮಿ ಒಂದೇ ಆಗಿದ್ದರೆ ನೃತ್ಯ ಕ್ಷೇತ್ರ ಗೌಣವಾಗಲಿದೆ. ನೃತ್ಯ ಕ್ಷೇತ್ರವನ್ನು ಕೇವಲ ಒಬ್ಬರು ಮಾತ್ರ ಪ್ರತಿನಿಧಿಸುತ್ತಾರೆ. ಇದರಿಂದ ನೃತ್ಯಕ್ಕೆ ಸಿಗಬೇಕಾದ ಮಾನ್ಯತೆ ಸಿಗುವುದಿಲ್ಲ. ಸಂಶೋಧನಗೂ ತೋಡಕಾಗುತ್ತದೆ ಎಂದು ಭರತನಾಟ್ಯ ನೃತ್ಯ ಕಲಾವಿದೆ ಲಲಿತಾ ಶ್ರೀನಿವಾಸನ್‌ ತಿಳಿಸಿದ್ದಾರೆ. 

Advertisement

ಕರ್ನಾಟಕ ಸಂಗೀತ ಮತ್ತು ನೃತ್ಯಾ ಅಕಾಡೆಮಿಯಿಂದ ನೃತ್ಯ ಅಕಾಡೆಮಿಯನ್ನು ಪ್ರತ್ಯೇಕಗೊಳಿಸಲು  ಇಲಾಖೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ.
ಸರ್ಕಾರ ಒಪ್ಪಿದ ಕೂಡಲೇ ನೃತ್ಯ ಅಕಾಡೆಮಿ ಸ್ಥಾಪನೆಗೊಳ್ಳಲಿದೆ. 

● ಡಾ.ಜಯಮಲಾ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ

ನೃತ್ಯ ಕ್ಷೇತ್ರ ಬದಲಾಗಿದ್ದು, ಇದರಲ್ಲಿ ಹಲವು ಪ್ರಕಾರಗಳು ಒಳಗೊಂಡಿವೆ. ಇವುಗಳನ್ನು ಪ್ರತಿನಿಧಿಸಲು ಒಂದು ಅಕಾಡೆಮಿಯ ಅಗತ್ಯವಿದೆ. ನೃತ್ಯ
ಅಕಾಡೆಮಿ ಪ್ರತ್ಯೇಕಗೊಂಡರೆ ಸಾಕಷ್ಟು ಅನುದಾನ ದೊರೆಯಲಿದೆ. ಇದರಿಂದ ನೃತ್ಯ ಕ್ಷೇತ್ರದಲ್ಲಿ ಸಂಶೋಧನೆ, ವಿಚಾರ ಸಂಕಿರಣ ಅಥವಾ ನೃತ್ಯ ಕಲಾವಿದರ ಕುರಿತು ಸಾಕಷ್ಟು ಪುಸ್ತಕ ತರಲು ಸಾಧ್ಯವಾಗುತ್ತದೆ.

● ವೈಜಯಂತಿ ಕಾಶಿ, ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಮಾಜಿ ಅಧ್ಯಕ್ಷೆ

ಶ್ರುತಿ ಮಲೆನಾಡತಿ

Advertisement

Udayavani is now on Telegram. Click here to join our channel and stay updated with the latest news.

Next