ಹುಬ್ಬಳ್ಳಿ: ಸಂಗೀತ ಮತ್ತು ನೃತ್ಯದ ಸಮ್ಮಿಲನವೇ ಭರತನಾಟ್ಯ ಎಂದು ಪಂ| ಶಂಕರಾಚಾರ್ಯ ಕಡ್ಲಾಸ್ಕರ ಹೇಳಿದರು. ಆದರ್ಶನಗರ ಡಾ| ಡಿ.ಎಸ್. ಕರ್ಕಿ ಕನ್ನಡ ಭವನದಲ್ಲಿ ಶನಿವಾರ ಶ್ರುತಿ ನೃತ್ಯ ಅಕಾಡೆಮಿ ಉದ್ಘಾಟಿಸಿ, ನೃತ್ಯ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಆ ದೇವರು ಕೂಡಾ ನೃತ್ಯ ಮಾಡುವ ಮೂಲಕವೇ ನಟರಾಜ ಎಂಬ ಬಿರುದನ್ನು ಪಡೆದಿದ್ದಾನೆ. ಅದೇ ರೀತಿ ನಮ್ಮಲ್ಲಿರುವ ಹಲವಾರು ಕಲಾ ಪ್ರತಿಭೆಗಳು ನೃತ್ಯದ ಮೂಲಕವೇ ಹಲವಾರು ಬಿರುದು ಸಮ್ಮಾನಗಳನ್ನು ಪಡೆದಿರುವುದು ವಿಶೇಷ ಎಂದರು. ನೃತ್ಯ ಕಲೆಯೇ ನನ್ನ ಜೀವ ಎಂದುಕೊಂಡಿರುವ ಶ್ರುತಿ ಅವರು ಹಲವರಿಗೆ ನೃತ್ಯ ತರಬೇತಿ ನೀಡುತ್ತಾ ಶ್ರುತಿ ನೃತ್ಯ ಅಕಾಡೆಮಿ ಆರಂಭಿಸಿದ್ದಾರೆ.
ಅವರು ಇನ್ನಷ್ಟು ಸಾಧನೆ ಮಾಡುವ ಮೂಲಕ ಹೆಚ್ಚು ಪ್ರಸಿದ್ಧಿಯಾಗಲಿ ಎಂದು ಹಾರೈಸಿದರು. ಇದೇ ಸಂದರ್ಭದಲ್ಲಿ ಉದಯೋನ್ಮುಖ ಕಲಾವಿದ ಅಭಿಲಾಷ ಉಡುಪಾ ಅವರನ್ನು ಸನ್ಮಾನಿಸಲಾಯಿತು. ಕರ್ನಾಟಕ ಕಲಾಶ್ರೀ ಪುರಸ್ಕೃತ ಕೆ. ಚಂದ್ರಶೇಖರ ನಾವಡಾ ಅಧ್ಯಕ್ಷತೆ ವಹಿಸಿದ್ದರು.
ಇದಕ್ಕೂ ಪೂರ್ವದಲ್ಲಿ ಶ್ರುತಿ ಮುಸಳೆ ಹಾಗೂ ಅಭಿಲಾಷ ಉಡುಪಾ ನೃತ್ಯ ಪ್ರದರ್ಶನ ನೀಡಿದರು. ರಂಗಾಯಣ ಮಾಜಿ ನಿರ್ದೇಶಕ ಸುಭಾಸ ನರೇಂದ್ರ, ರಾಘವೇಂದ್ರ ರಾಮದುರ್ಗ ಮಾತನಾಡಿದರು. ವರದಾ ಶಂಕರಾಚಾರ್ಯ ಕಡ್ಲಾಸ್ಕರ, ಸುನೀತಾ ಜಗನ್ನಾಥ ಪೂಜಾರಿ,
-ಲಕ್ಷ್ಮಣ ಗಂಡಗಾಳೇಕರ, ಸತ್ಯನಾರಾಯಣ ಪಿಸೆ, ಸುರೇಖಾ, ಸ್ನೇಹಾ ಮುಸಳೆ, ಮುರಳಿಧರ ಮುಸಳೆ, ಕಿರಣ ಇತರರಿದ್ದರು. ಸ್ವಪ್ನಾ ಮುಸಳೆ ಪ್ರಾಸ್ತಾವಿಕ ಮಾತನಾಡಿದರು. ವಿನಾಯಕ ಲೋಖಂಡೆ ಸ್ವಾಗತಿಸಿದರು. ನವೀನಶಾಸಿ ಪುರಾಣಿಕ ನಿರೂಪಿಸಿದರು.