Advertisement

Music, Dance; ಸಂಗೀತ, ನೃತ್ಯ ಪರೀಕ್ಷೆಗೆ ಮುಹೂರ್ತ ಸನ್ನಿಹಿತ

12:15 AM Jun 21, 2024 | Team Udayavani |

ಮಂಗಳೂರು: ನೃತ್ಯ, ಸಂಗೀತ ಕ್ಷೇತ್ರದ ಆಸಕ್ತ ವಿದ್ಯಾರ್ಥಿಗಳಿಗಾಗಿ ಪ್ರತೀ ಮೇಯಲ್ಲಿ ನಡೆಸುತ್ತಿದ್ದ ವಿಶೇಷ ಸಂಗೀತ, ನೃತ್ಯ, ತಾಳವಾದ್ಯ ಪರೀಕ್ಷೆಗಳು ಈ ಬಾರಿ ಬೇರೆ ಬೇರೆ ಕಾರಣಗಳಿಂದ ನಡೆದಿಲ್ಲ. ಜೂ. 21ರಂದು ಡಾ| ಗಂಗೂಬಾಯಿ ಹಾನಗಲ್‌ ಸಂಗೀತ, ಪ್ರದರ್ಶನ ಕಲೆಗಳ ವಿಶ್ವವಿದ್ಯಾನಿಲಯದ ಸಿಂಡಿಕೇಟ್‌ ಸಭೆ ನಡೆಯಲಿದ್ದು, ದಿನಾಂಕ ನಿಗದಿಯಾಗುವ ಸಾಧ್ಯತೆಯಿದೆ.

Advertisement

ಹಲವು ದಶಕಗಳಿಂದ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಪ್ರತೀ ವರ್ಷ ವಿಶೇಷ ಸಂಗೀತ, ನೃತ್ಯ, ತಾಳವಾದ್ಯದಲ್ಲಿ ಜೂನಿಯರ್‌, ಸೀನಿಯರ್‌, ವಿದ್ವತ್‌ಪೂರ್ವ ಹಾಗೂ ವಿದ್ವತ್‌ ಪರೀಕ್ಷೆಗಳನ್ನು ನಡೆಸಿ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ನೀಡುತ್ತಿತ್ತು. ಆದರೆ ಈ ವರ್ಷದಿಂದ ಎಲ್ಲ ಪರೀಕ್ಷೆಗಳ ಜವಾಬ್ದಾರಿಯನ್ನು ಮೈಸೂರಿನ ಕರ್ನಾಟಕ ರಾಜ್ಯ ಡಾ| ಗಂಗೂಬಾಯಿ ಹಾನಗಲ್‌ ಸಂಗೀತ ಮತ್ತು ಪ್ರದರ್ಶನ ಕಲೆಗಳ ವಿ.ವಿ.ಗೆ ಸರಕಾರ ವಹಿಸಿದೆ.

ಪರೀಕ್ಷೆಗೆ ಸಂಬಂಧಿಸಿ ಕಳೆದ ಎಪ್ರಿಲ್‌ನಲ್ಲೇ ನೋಂದಣಿ ಮಾಡಿಸಿಕೊಂಡವರು 1,500 ರೂ. ಶುಲ್ಕವನ್ನೂ ಪಾವತಿಸಿದ್ದರು.

ವಿ.ವಿ.ಗೆ ಸವಾಲು
ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ಪ್ರತೀ ವರ್ಷ ಪರೀಕ್ಷೆ ನಡೆಸುತ್ತಿದ್ದುದರಿಂದ ಯಾವ ರೀತಿ ಪರೀಕ್ಷೆ ಆಯೋಜಿಸಬೇಕು, ಬೇಕಾದ ಮೂಲಸೌಕರ್ಯ, ಪರೀಕ್ಷಾ ಕೊಠಡಿ, ಸಿಬಂದಿ ನಿಯೋಜನೆ ಕುರಿತಾದ ಸ್ಪಷ್ಟವಾದ ಮಾಹಿತಿ ಹೊಂದಿತ್ತು. ಆದರೆ ಡಾ| ಗಂಗೂಬಾಯಿ ಹಾನಗಲ್‌ ವಿ.ವಿ.ಗೆ ಇದು ಸವಾಲಾಗಿದೆ.

ವಿ.ವಿ. ಪ್ರಮಾಣಪತ್ರಕ್ಕೆ ತೂಕ
ಇಲ್ಲಿಯ ವರೆಗೆ ಪರೀಕ್ಷಾರ್ಥಿಗಳಿಗೆ ವಿದ್ವಾನ್‌, ವಿದುಷಿ ಬಿರುದುಗಳು ಬೋರ್ಡ್‌ನಿಂದ ದೊರೆಯುತ್ತಿತ್ತು. ಆದರೆ ವಿ.ವಿ. ಪರೀಕ್ಷೆ ನಡೆಸುತ್ತಿರುವು ದರಿಂದ ಅದರಲ್ಲಿ ಉತ್ತೀರ್ಣರಾದರೆ ಸಿಗುವ ಪ್ರಮಾಣ ಪತ್ರಕ್ಕೆ ಪದವಿಯಷ್ಟೇ ಮಾನ್ಯತೆ ಇದೆ. ಇದರಿಂದ ವಿದ್ಯಾರ್ಥಿ ಗಳಿಗೂ ಲಾಭ ಹೆಚ್ಚು.

Advertisement

ಚುನಾವಣೆ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಮೇಯಲ್ಲಿ ಪರೀಕ್ಷೆ ನಡೆಸಲು ಸಾಧ್ಯವಾಗಿಲ್ಲ. ಜೂ. 21ರಂದು ನಡೆಯುವ ಸಿಂಡಿಕೇಟ್‌ ಸಭೆ ಯಲ್ಲಿ ವಿಚಾರವನ್ನು ಮಂಡಿಸಿ, ಅನುಮೋದನೆ ಪಡೆದು ಪರೀಕ್ಷೆಯ ದಿನಾಂಕವನ್ನು ಅಂತಿಮಗೊಳಿಸಲಾಗುವುದು.
-ನಾಗೇಶ್‌ ವಿ. ಬೆಟ್ಟಕೋಟೆ
ಕುಲಪತಿ, ಡಾ| ಗಂಗೂಬಾಯಿ ಹಾನಗಲ್‌ ಸಂಗೀತ ಮತ್ತು ಪ್ರದರ್ಶನ ಕಲೆಗಳ ವಿ.ವಿ. ಮೈಸೂರು

ಸಿದ್ಧರಾಗಿದ್ದ ವಿದ್ಯಾರ್ಥಿಗಳು
ಸಾಮಾನ್ಯವಾಗಿ ವಾರ್ಷಿಕ ಪರೀಕ್ಷೆ ಗಳು ಮುಗಿದ ಬಳಿಕ ವಿದ್ಯಾರ್ಥಿಗಳು ಈ ಪರೀಕ್ಷೆಗೆ ಸಿದ್ಧರಾಗುತ್ತಾರೆ. ಆದರೆ ಈ ಬಾರಿ ಹೊಸ ಶೈಕ್ಷಣಿಕ ವರ್ಷ ಆರಂಭವಾದರೂ ಪರೀಕ್ಷೆ ನಡೆಯದಿರುವುದು ವಿದ್ಯಾರ್ಥಿಗಳ ಆತಂಕಕ್ಕೆ ಕಾರಣವಾಗಿದೆ.

15,000ಕ್ಕೂ ಅಧಿಕ ಅಭ್ಯರ್ಥಿಗಳು
ರಾಜ್ಯದಲ್ಲಿ ಪ್ರಸ್ತುತ 14,729 ಅಭ್ಯರ್ಥಿಗಳ ನೋಂದಣಿ ಅಂತಿಮಪಡಿಸ ಲಾಗಿದ್ದು, 2,000ದಷ್ಟು ಅರ್ಜಿದಾರರು ಪರಿಶೀಲಿಸಿ ಕೊಳ್ಳಲು ಬಾಕಿ ಇದೆ. 538 ಮಂದಿಯ ಅರ್ಜಿ ತಿರಸ್ಕೃತಗೊಂಡಿದೆ. ಪರೀಕ್ಷೆಯ ಮೇಲ್ವಿಚಾರಣೆಗಾಗಿ 1,800 ಸಿಬಂದಿಯನ್ನು ಆಯ್ಕೆ ಮಾಡಲಾಗಿದೆ. ಪ್ರಸ್ತುತ ಶಾಲೆ-ಕಾಲೇಜು ಆರಂಭವಾಗಿರುವುದು ಕೂಡ ಪರೀಕ್ಷೆ ಆಯೋಜಿಸಲು ಅಡ್ಡಿಯಾಗಿದೆ. ಆದ್ದರಿಂದ ಶನಿವಾರ-ರವಿವಾರ ಪರೀಕ್ಷೆಗಳು ನಡೆಸುವ ಬಗ್ಗೆ ಅಥವಾ ನಿರಂತರ ನಾಲ್ಕೈದು ದಿನ ರಜೆ ಇರುವಾಗ ಪರೀಕ್ಷೆ ನಡೆಸಬೇಕೇ ಎನ್ನುವ ಬಗ್ಗೆ ಸಿಂಡಿಕೇಟ್‌ ಸಭೆಯಲ್ಲಿ ತೀರ್ಮಾನಿಸ ಲಾಗುವುದು ಎನ್ನುತ್ತಾರೆ ವಿ.ವಿ. ಕುಲಪತಿ.

 *ಭರತ್‌ ಶೆಟ್ಟಿಗಾರ್‌

Advertisement

Udayavani is now on Telegram. Click here to join our channel and stay updated with the latest news.

Next