ಬೈಂದೂರು,ಆ. 8: ಅಣಬೆಗಳಿಗೆ ಮಳೆಗಾಲದಲ್ಲಿ ಭಾರೀ ಡಿಮ್ಯಾಂಡ್. ಸಹಜವಾಗಿ ಪಟ್ಟಣ ಪ್ರದೇಶಗಳಲ್ಲಿ ಕೃತಕವಾಗಿ ಅಣಬೆಗಳನ್ನು ಬೆಳೆಸಲಾಗುತ್ತದೆ. ಆದರೆ ಗ್ರಾಮೀಣ ಭಾಗದಲ್ಲಿ ದೊರೆಯುವ ಅಣಬೆಗಳು ವಿಶೇಷ ಬೇಡಿಕೆ ಹೊಂದಿರುತ್ತದೆ. ಇವುಗಳು ಮಳೆಗಾಲದಲ್ಲಿ ಮಾತ್ರ ದೊರೆಯುತ್ತದೆ.ಜುಲೈ ಅಂತ್ಯದಿಂದ ಆಗಸ್ಟ್ ಮಧ್ಯಂತರದವರೆಗೆ ಹಳ್ಳಿಗಳಲ್ಲಿ ಅಣಬೆಗಳು ಕಾಣಸಿಗುತ್ತದೆ. ವಿಷ ಜಂತುಗಳು ಸ್ಪರ್ಶಿಸುತ್ತದೆ ಎನ್ನುವ ಕಾರಣದಿಂದ ನಾಗರಪಂಚಮಿ ಬಳಿಕ ಅಣಬೆಗಳನ್ನು ತಿನ್ನುವುದಿಲ್ಲ.
ಇದನ್ನೂ ಓದಿ:ಹೀಗೂ ಉಂಟೇ: ಕುರೂಪಿ ವ್ಯಕ್ತಿಯನ್ನು ಮದುವೆಯಾಗಲು “ಈ ದೇಶದಲ್ಲಿ” ಬಹು ಬೇಡಿಕೆ!
ಉತ್ತಮ ಧಾರಣೆ ಮಾರುಕಟ್ಟೆಯಲ್ಲಿ ಉತ್ತಮ ಧಾರಣೆಯಿದೆ. ನೂರು ಅಣಬೆಗೆ ಇನ್ನೂರ ಐವತ್ತರಿಂದ ಎಂಟುನೂರು ರೂ. ವರೆಗೆ ದರವಿದೆ. ಗ್ರಾಮೀಣ ಭಾಗದಲ್ಲಿ ಅಣಬೆಗಳನ್ನು ಕೊಂಡು ಪಟ್ಟಣ ಪ್ರದೇಶದಲ್ಲಿ ಮಾರಾಟ ಮಾಡಲು ಏಜೆಂಟ್‌ಗಳು ಸಹ ಇದ್ದಾರೆ. ಸರಾಸರಿ 15 ದಿನಗಳಿಂದ ಒಂದು ತಿಂಗಳು ಮಾತ್ರ ಅಣಬೆಗಳು ದೊರೆಯುತ್ತದೆ. ಅಣಬೆಗಳಿಂದ ತಯಾರಿಸಿದ ಖಾದ್ಯಗಳು ಶಿರೂರು, ಭಟ್ಕಳ ಮುಂತಾದ ಕಡೆಗಳಿಂದ ಮುಂಬಯಿ ಹಾಗೂ ವಿದೇಶಕ್ಕೂ ರವಾನೆಯಾಗುತ್ತದೆ.
ಉತ್ತರ ಕನ್ನಡದ ಅಣಬೆಗಳಿಗೂ ವಿಶೇಷವಾದ ಬೇಡಿಕೆಯಿದೆ. ಗ್ರಾಮೀಣ ಭಾಗದ ಕೆಲವರಿಗೆ ಅಣಬೆ ಹುಡುಕುವುದು ಆದಾಯದ ಮೂಲವಾಗಿದೆ. ಕಳೆದೊಂದು ವಾರದಿಂದ ಅಲ್ಲಲ್ಲಿ ಅಣಬೆಗಳ ಮಾರಾಟ ಕಂಡು ಬರುತ್ತಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಅಣಬೆ ಮಾರಾಟ ಕಡಿಮೆಯಿದೆ.ಮಳೆಯ ಅಭಾವ ಇದಕ್ಕೆ ಕಾರಣ ಎನ್ನುವುದು ಜನರ ಅಭಿಪ್ರಾಯವಾಗಿದೆ.
ಅಪರೂಪವಾದ ಅಣಬೆ
ಹಳ್ಳಿಗಳಲ್ಲಿ ಕೃಷಿಕರು ಮತ್ತು ಪ್ರಕೃತಿಯ ನಡುವೆ ವಿಶೇಷವಾದ ಭಾಂದವ್ಯವಿದೆ.ಮಳೆಗಾಲದಲ್ಲಿ ಕೃಷಿ ಚಟುವಟಿಕೆ ಮುಗಿದಾಕ್ಷಣ ಆಷಾಢ ಮಾಸದಲ್ಲಿ ಸುರಿವ ಮಳೆಯ ಚಳಿಗೆ ರೈತರು ಅಣಬೆಯನ್ನು ಶೋಧಿಸುತ್ತಾರೆ.
ಕೃಷಿ ಚಟುವಟಿಕೆಯಿಲ್ಲದ ಕಾರಣ ಈ ಸಮಯದಲ್ಲಿ ರೈತರು ಕಾಡಿನಲ್ಲಿ ದೊರೆಯುವ ಅಣಬೆಗಳನ್ನು ಹುಡುಕಿ ತರುತ್ತಾರೆ. ಹಿಂದೆಲ್ಲಾ ಕಾಡಿನ ಪ್ರಮಾಣ ಅಧಿಕವಾಗಿರುವ ಕಾರಣ ವ್ಯಾಪಕವಾಗಿ ದೊರೆಯುತ್ತಿತ್ತು. ಆದರೆ ಇತ್ತೀಚೆಗೆ ರಾಸಾಯನಿಕ ಗೊಬ್ಬರಗಳ ಅಳವಡಿಕೆ, ಕಾಡು ನಾಶವಾದ ಪರಿಣಾಮ ಅಣಬೆಗಳು ದೊರೆಯುವುದು ಅಪರೂಪವಾಗಿದೆ.
ಬೈಂದೂರು ವ್ಯಾಪ್ತಿಯಲ್ಲಿ ಗಂಗನಾಡು, ಮಧ್ದೋಡಿ, ತೂದಳ್ಳಿ ಸೇರಿದಂತೆ ಶಿರೂರು ಸಮೀಪದ ಹಾಡುವಳ್ಳಿ, ಕೋಣಾರ, ಮಾರುಕೇರಿ ಮುಂತಾದ ಕಡೆ ವ್ಯಾಪಕವಾಗಿ ದೊರೆಯುತ್ತದೆ