ಢಾಕಾ: ಬಾಂಗ್ಲಾದೇಶದ ವಿಕೆಟ್ ಕೀಪರ್-ಬ್ಯಾಟರ್ ಮತ್ತು ಮಾಜಿ ನಾಯಕ ಮುಶ್ಫಿಕರ್ ರಹೀಂ ಭಾನುವಾರ ಟಿ20 ಅಂತಾರಾಷ್ಟ್ರೀಯ ಪಂದ್ಯಗಳಿಗೆ ನಿವೃತ್ತಿ ಘೋಷಿಸಿದ್ದಾರೆ.
ಪ್ರಸ್ತುತ ನಡೆಯುತ್ತಿರುವ ಏಷ್ಯಾ ಕಪ್ ನಲ್ಲಿ ಎರಡೂ ಪಂದ್ಯಗಳನ್ನು ಆಡಿದ್ದರು. ಆದರೆ ಶಕೀಬ್-ಅಲ್-ಹಸನ್ ನೇತೃತ್ವದ ಬಾಂಗ್ಲಾದೇಶ ತಂಡವು ಅಫ್ಘಾನಿಸ್ತಾನ ಮತ್ತು ಶ್ರೀಲಂಕಾ ವಿರುದ್ಧ ಸೋಲು ಅನುಭವಿಸಿದ ಪರಿಣಾಮ ಮೊದಲ ಸುತ್ತಿನಿಂದಲೇ ಹೊರಬಿದ್ದಿದೆ.
ರವಿವಾರ ಮುಶ್ಫಿಕರ್ ರಹೀಂ ಅವರು ಟಿ20 ಕ್ರಿಕೆಟ್ ಗೆ ವಿದಾಯ ಘೋಷಣೆ ಮಾಡಿದ್ದು, ಇನ್ನು ಮುಂದೆ ಏಕದಿನ ಹಾಗೂ ಟೆಸ್ಟ್ ಪಂದ್ಯಗಳತ್ತ ಗಮನ ಹರಿಸುವುದಾಗಿ ಟ್ವಿಟರ್ ನಲ್ಲಿ ಹೇಳಿಕೊಂಡಿದ್ದಾರೆ. ಅಲ್ಲದೆ ಟಿ20 ಫ್ರಾಂಚೈಸಿ ಕ್ರಿಕೆಟ್ ಗೆ ತಾನು ಲಭ್ಯವಿರುವುದಾಗಿ ಕೂಡಾ ಹೇಳಿಕೊಂಡಿದ್ದಾರೆ.
ಇದನ್ನೂ ಓದಿ:ಓಟಿಟಿಯಲ್ಲಿ ರಿಲೀಸ್ ಆದ 24 ಗಂಟೆಯೊಳಗೆ ದಾಖಲೆ ಬರೆದ ‘ವಿಕ್ರಾಂತ್ ರೋಣʼ
ಜುಲೈನಲ್ಲಿ ತಮೀಮ್ ಇಕ್ಬಾಲ್ ನಿವೃತ್ತಿಯ ನಂತರ ಮುಶ್ಫಿಕರ್ ಈಗ ಟಿ20 ಕ್ರಿಕೆಟ್ ನಿಂದ ನಿವೃತ್ತಿಯಾದ ಬಾಂಗ್ಲಾದೇಶದ ಎರಡನೇ ಆಟಗಾರನಾಗಿದ್ದಾರೆ.
ರಹೀಂ ಅವರು ಬಾಂಗ್ಲಾದೇಶವನ್ನು 102 ಟಿ20 ಪಂದ್ಯಗಳಲ್ಲಿ ಪ್ರತಿನಿಧಿಸಿದ್ದು, 19.48 ಸರಾಸರಿಯಲ್ಲಿ 1,500 ರನ್ ಗಳಿಸಿದ್ದಾರೆ. ಈ ಬಾರಿಯ ಏಷ್ಯಾಕಪ್ ಕೂಟದಲ್ಲಿ ಅವರು ಎರಡು ಪಂದ್ಯಗಳಲ್ಲಿ ಒಟ್ಟು ಐದು ರನ್ ಗಳಿಸಿದ್ದಾರೆ.