ವಿಜಯಪುರ: ಕೇಂದ್ರ ಸಂಪುಟ ವಿಸ್ತರಣೆ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯಕ್ಕೆ ಹೆಚ್ಚಿನ ಆದ್ಯತೆ ನೀಡಿದ್ದಾರೆ. ಜಾತಿ, ಪ್ರದೇಶವಾರು ಆದ್ಯತೆ ನೀಡಿರುವ ಪ್ರಧಾನಿ ಅಭಿನಂದನಾರ್ಹರು ಎಂದು ಗಣಿ ಖಾತೆ ಸಚಿವ ಮುರುಗೇಶ ನಿರಾಣಿ ಸಂತಸ ವ್ಯಕ್ತಪಡಿಸಿದ್ದಾರೆ.
ಗುರುವಾರ ಜಿಲ್ಲೆಯ ಕೊಲ್ಹಾರ ಪಟ್ಟಣದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಸಂಪುಟ ವಿಸ್ತರಣೆ ಹಂತದಲ್ಲಿ ರಾಜ್ಯಕ್ಕೆ ನಾಲ್ಕು ಸಚಿವರನ್ನು ನೀಡಿರುವುದು ರಾಜ್ಯದ ಮೇಲೆ ಪ್ರಧಾನಿ ಅವರಿಗೆ ಇರುವ ಪ್ರೀತಿ, ಅಭಿಮಾನ, ಕಾಳಜಿಯ ಪ್ರತೀಕ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಉತ್ತರ ಕರ್ನಾಟಕ ಭಾಗಕ್ಕೆ ಆದ್ಯತೆ ನೀಡಿಲ್ಲ, ಈ ಬಗ್ಗೆ ಅಸಮಾಧಾನ ಇದೆ ಎಂಬುದೆಲ್ಲ ಸುಳ್ಳು. ರಾಜ್ಯ ಸರ್ಕಾರದಲ್ಲಿ ಉತ್ತರ ಕರ್ನಾಟಕ ಭಾಗದ ಸಚಿವರೇ ಹೆಚ್ಚಿನ ಸಂಖ್ಯೆಯಲ್ಲಿದ್ದೇವೆ ಎಂದು ಸಮಜಾಯಿಷಿ ನೀಡಿದರು.
ಇದನ್ನೂ ಓದಿ:ಕೆಆರ್ ಎಸ್ ಜಲಾಶಯದಲ್ಲಿ ಬಿರುಕು ವಿಚಾರ ಕೇವಲ ಊಹಾಪೋಹ: ಸಚಿವ ನಿರಾಣಿ
ರಾಜ್ಯಸಭೆ ಸದಸ್ಯ ರಾಜೀವ ಚಂದ್ರಶೇಖರ್, ಕಲ್ಯಾಣ ಕರ್ನಾಟಕ ಭಾಗದಿಂದ ಬೀದರ್ ಸಂಸದ ಭಗವಂತ ಖೂಬಾ, ಜಾತಿವಾರು, ಪ್ರದೇಶವಾರು ಲೆಕ್ಕಾಚಾರದಲ್ಲಿ ದಲಿತರ ಕೋಟಾದಲ್ಲಿ ಎ.ನಾರಾಯಣಸ್ವಾಮಿ, ಮಹಿಳಾ ಕೋಟಾದಲ್ಲಿ ಶೋಭಾ ಕರಂದ್ಲಾಜೆ ಸೇರಿದಂತೆ ರಾಜ್ಯಕ್ಕೆ ಹೆಚ್ಚಿನ ಆದ್ಯತೆ ನೀಡಿದ್ದಾರೆ. ಇದಲ್ಲದೇ ಸಂಪುಟ ದರ್ಜೆ ಸಚಿವರಾಗಿಯೂ ಹುಬ್ಬಳ್ಳಿಯ ಪ್ರಹ್ಲಾದ್ ಜೋಶಿ, ನಿರ್ಮಲಾ ಸೀತಾರಾಮನ್ ಸಂಪುಟದಲ್ಲಿದ್ದಾರೆ ಎಂದರು.
ಎಲ್ಲ ಅಂಶಗಳನ್ನು ಪರಿಗಣಿಸಿ ಸಂಪುಟ ವಿಸ್ತರಣೆ ವೇಳೆ ಜಾತಿ, ಪ್ರದೇಶ, ಲಿಂಗ, ವಯಸ್ಸು ಹೀಗೆ ಎಲ್ಲವನ್ನೂ ಪರಿಗಣಿಸಿ, ಆದ್ಯತೆ ನೀಡಿ ಸಮತೋಲನ ಸಂಪುಟ ರಚಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.