Advertisement

ಬಿಜೆಪಿಯಲ್ಲಿ ನಿಲ್ಲದ ಚಟುವಟಿಕೆ: ವಿಜಯೇಂದ್ರ ಬಳಿಕ ದೆಹಲಿಗೆ ಸಿ.ಟಿ.ರವಿ, ಮುರುಗೇಶ್ ನಿರಾಣಿ

07:53 AM Jun 06, 2021 | Team Udayavani |

ಬೆಂಗಳೂರು: ರಾಜ್ಯ ಬಿಜೆಪಿಯಲ್ಲಿ ನಾಯಕತ್ವ ಬದಲಾವಣೆಯ ಚರ್ಚೆ ಸದ್ಯಕ್ಕಿಲ್ಲ ಎಂಬ ಮಾತುಗಳು ಕೇಳಿ ಬರುತ್ತಿದ್ದರೂ, ನಾಯಕರ ದೆಹಲಿ ಭೇಟಿ ನಿಂತಿಲ್ಲ. ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಪುತ್ರ ಹಾಗೂ ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ ವಿಜಯೇಂದ್ರ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರನ್ನು ಭೇಟಿ ಮಾಡಿ, ನಡ್ಡಾ ಅವರ ಭೇಟಿಯ ನಂತರ ತಮ್ಮ ಹುಮ್ಮಸ್ಸು ಹೆಚ್ಚಾಗಿದೆ ಎಂದು ಟ್ವೀಟ್‌ ಮಾಡಿದ್ದರು. ಅಲ್ಲದೇ ತಮ್ಮ ದೆಹಲಿ ಭೇಟಿ ಯಶಸ್ವಿಯಾಗಿದೆ ಎಂದು ಆಪ್ತರ ಬಳಿ ಹೇಳಿಕೊಂಡಿದ್ದರು ಎಂದು ಹೇಳಲಾಗಿತ್ತು.

Advertisement

ಅದರ ಬೆನ್ನಲ್ಲೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ದೆಹಲಿಗೆ ತೆರಳಿದ್ದಾರೆ. ಅವರಲ್ಲದೇ ಸಿಎಂ ಸ್ಥಾನದ ಮೇಲೆ ಕಣ್ಣಿಟ್ಟಿರುವ ಗಣಿ ಮತ್ತು ಭೂ ವಿಜ್ಞಾನ ಸಚಿವ ಮುರುಗೇಶ್‌ ನಿರಾಣಿ ಅವರೂ ಖಾಸಗಿ ಕೆಲಸದ ಹೆಸರಿನಲ್ಲಿ ದೆಹಲಿಗೆ ಭೇಟಿ ನೀಡಿದ್ದು, ಬಿಜೆಪಿಯಲ್ಲಿ ತೆರೆಮರೆಯ ಕಸರತ್ತು ನಿಂತಿಲ್ಲ ಎಂಬ ಮಾತುಗಳು ಪಕ್ಷದ ವಲಯದಲ್ಲಿ ಕೇಳಿ ಬರುತ್ತಿವೆ.

ರಾಜ್ಯದಲ್ಲಿ ಕೊರೊನಾ ನಿಯಂತ್ರಣದಲ್ಲಿ ವೈಫಲ್ಯ ಹಾಗೂ ನಾಯಕತ್ವದ ಕುರಿತು ಸಚಿವ ಸಿ.ಪಿ.ಯೋಗೇಶ್ವರ್‌ ಹೇಳಿಕೆ ರಾಜ್ಯ ಬಿಜೆಪಿ ಹಾಗೂ ಸರ್ಕಾರದ ವರ್ಚಸ್ಸಿಗೆ ಧಕ್ಕೆಯಾಗುತ್ತಿದೆ ಎಂದು ಪಕ್ಷದ ಹೈಕಮಾಂಡ್‌ ಗೊಂದಲಗಳಿಗೆ ತೆರೆ ಎಳೆಯಲು ಕಸರತ್ತು ನಡೆಸುತ್ತಿದೆ. ಅಲ್ಲದೆ ರಾಜ್ಯದಲ್ಲಿ ಪಕ್ಷದ ಸಂಘಟನೆ ಬಲವರ್ಧನೆಗೆ ಆದ್ಯತೆ ನೀಡಲು ಸಂಘಟನೆಯಲ್ಲಿ ಕೆಲವೊಂದು ಬದಲಾವಣೆ ಮಾಡುವ ಆಲೋಚನೆಯನ್ನೂ ಹೈಕಮಾಂಡ್‌ ಮಾಡುತ್ತಿದೆ ಎಂದು ಹೇಳಲಾಗುತ್ತಿದೆ. ಅದೇ ಕಾರಣಕ್ಕಾಗಿ ಚರ್ಚಿಸಲು ಸಿ.ಟಿ.ರವಿ ಅವರನ್ನು ಹೈಕಮಾಂಡ್‌ ದೆಹಲಿಗೆ ಕರೆಸಿಕೊಂಡಿದ್ದರು ಎಂದು ತಿಳಿದು ಬಂದಿದೆ.

ಇದನ್ನೂ ಓದಿ:ಸೋಂಕು ಮುಕ್ತಿಯತ್ತ ಗ್ರಾಮ : ಗ್ರಾಮಸ್ಥರಿಂದಲೇ ಸ್ವಯಂ ದಿಗ್ಬಂಧನ

ಸಚಿವ ಮುರುಗೇಶ್‌ ನಿರಾಣಿ ತಮ್ಮ ಉದ್ಯಮದ ಖಾಸಗಿ ಕೆಲಸಕ್ಕೆ ದೆಹಲಿಗೆ ತೆರಳಿರುವುದಾಗಿ ಹೇಳಿಕೆ ನೀಡಿದ್ದಾರೆ. ಆದರೆ, ತೆರೆಮರೆಯಲ್ಲಿ ನಾಯಕತ್ವದ ಬದಲಾವಣೆಯಾಗುವುದಾದರೆ ಸಿಎಂ ಸ್ಥಾನಕ್ಕೆ ತಮ್ಮನ್ನು ಪರಿಗಣಿಸುವಂತೆ ಹೈಕಮಾಂಡ್‌ ನಾಯಕರ ಮೇಲೆ ಒತ್ತಡ ಹೇರುತ್ತಿದ್ದಾರೆ ಎಂದು ತಿಳಿದು ಬಂದಿದೆ.

Advertisement

ದೆಹಲಿಯ ಬೆಳವಣಿಗೆ ಕುರಿತು ಮಾತನಾಡಿದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ಇಂದಿನ ಸಭೆಯಲ್ಲಿ ರಾಜ್ಯ ರಾಜಕೀಯ ಬಗ್ಗೆ  ಚರ್ಚೆ ನಡೆದಿಲ್ಲ. ಕೊರೊನಾ, ಚುನಾವಣೆ  ಬಗ್ಗೆ ಮಾತ್ರ ಚರ್ಚೆ ನಡೆದಿದೆ. ಯಡಿಯೂರಪ್ಪರನ್ನು ಸರ್ವಾನುಮತದಿಂದ ಆಯ್ಕೆ ಮಾಡಿದ್ದೇವೆ. ಆಗಾಗ ಸಿಎಂ ಬದಲಾವಣೆ ರೀತಿಯ ಹೇಳಿಕೆಗಳು ಬರುತ್ತಿವೆ. ಹೇಳಿಕೆ ನೀಡಿದವರ ವಿರುದ್ದ ನಾನು ಹೇಳಿಕೆ ಕೊಡುವುದಿಲ್ಲ ಎಂದು ಹೇಳಿದರು.

ಸರ್ಕಾರ, ಪಕ್ಷದ ವಿರುದ್ಧ  ಹೇಳಿಕೆ ಸಹಿಸುವುದಿಲ್ಲ, ಎಲ್ಲಾ ಹೇಳಿಕೆಗಳಿಗೂ ಪಕ್ಷ ಪ್ರತಿಕ್ರಿಯೆ ಕೊಡಬೇಕಿಲ್ಲ. ರಾಜ್ಯದಲ್ಲಿ ಬಿಎಸ್‌ವೈ ನೇತೃತ್ವದ ಬಿಜೆಪಿ ಸರಕಾರ ಇದೆ. ಕಾಂಗ್ರೆಸ್‌, ಜೆಡಿಎಸ್‌ ನಮ್ಮ ಸರಕಾರದ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿರಬೇಕು. ಹೀಗಾಗಿ ಮೂರು ಪಕ್ಷಗಳ ಸರಕಾರ ಅಂತಾ ಸಚಿವ ಯೋಗೇಶ್ವರ್‌ ಹೇಳಿರಬೇಕು ಎಂದು ತಿಳಿಸಿದರು.

ಖಾಸಗಿ ಕೆಲಸಕ್ಕೆ ಬಂದಿದ್ದೆ: ರಾಜಕೀಯ ಬೆಳವಣಿಗೆಗಳ ನಡುವೆ ದೆಹಲಿಗೆ ಭೇಟಿ ನೀಡಿರುವ ಸಚಿವ ಮುರುಗೇಶ್‌ ನಿರಾಣಿ ಖಾಸಗಿ ಕೆಲಸದ ನಿಮಿತ್ತ ಬಂದಿರುವುದಾಗಿ ತಿಳಿಸಿದ್ದಾರೆ. ಎಥೆನಾಲ್‌ ಉತ್ಪಾದನೆ ಬಗ್ಗೆ ಸೆಮಿನಾರ್‌ ಇತ್ತು, ಅಲ್ಲಿ  ಪಾಲ್ಗೊಳ್ಳಲು ದೆಹಲಿಗೆ ಬಂದಿರುವುದಾಗಿ ಹೇಳಿದ್ದಾರೆ

Advertisement

Udayavani is now on Telegram. Click here to join our channel and stay updated with the latest news.

Next