ಲಕ್ನೋ: ಯಾರಾದರು ನಿಮ್ಮೊಡನೆ ವಾಗ್ವಾದಕ್ಕೆ ಬಂದರೆ ಅವರಿಗೆ ಹೊಡೆಯಲು ಹಿಂಜರಿಯಬೇಡಿ, ಬೇಕಾದರೆ ಕೊಲೆ ಮಾಡಿ, ನಾವು ನೋಡಿಕೊಳ್ಳುತ್ತೇವೆ ಎಂದು ವಿದ್ಯಾರ್ಥಿಗಳಿಗೆ ಪ್ರಚೋದನಕಾರಿ ಸಂದೇಶ ನೀಡುವ ಮೂಲಕ ಪೂರ್ವಾಂಚಲ್ ವಿಶ್ವವಿದ್ಯಾಲಯದ ಉಪಕುಲಪತಿ ರಾಜಾರಾಮ್ ಯಾದವ್ ಅವರು ವಿವಾದಕ್ಕೆ ಗುರಿಯಾಗಿದ್ದಾರೆ.
ಘಾಜಿಪುರ್‌ನ ಗಾಂಧಿಪುರಂನ ಸತ್ಯದೇವ ಕಾಲೇಜ್‌ನಲ್ಲಿ ನಡೆಸ ಸಮಾರಂಭದಲ್ಲಿ ಈ ವಿವಾದಿತ ಹೇಳಿಕೆಯನ್ನು ನೀಡಿದ್ದಾರೆ.
ನಿವ್ಯಾರು ನನ್ನ ಬಳಿ ಅಳುತ್ತಾ ಬರಬೇಡಿ. ನಿಮ್ಮಲ್ಲಿ ಯಾರಾದರು ಹೊಡೆದಾಟಕ್ಕೆ ಬಂದರೆ ಅವರನ್ನು ಸೋಲಿಸಿ. ಸಾಧ್ಯವಾದರೆ ಕೊಂದು ಬಿಡಿ, ಆ ಬಳಿಕ ನಾವು ನೋಡಿಕೊಳ್ಳುತ್ತೇವೆ ಎಂದಿದ್ದಾರೆ.
ಶನಿವಾರ ಈ ಸಮಾರಂಭ ನಡೆದಿದ್ದು, ವಿಡಿಯೋ ವೈರಲ್ ಆಗಿದ್ದು ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
ಘಾಜಿಪುರ್‌ನಲ್ಲಿ ದೊಂಬಿಗೆ ಪೊಲೀಸ್ ಕಾನ್ಸ್‌ಟೇಬಲ್ ಬಲಿಯಾಗಿರುವ ವೇಳೆಯೇ ಈ ಹೇಳಿಕೆ ನೀಡಿರುವುದು ಉರಿಯುವ ಬೆಂಕಿಗೆ ತುಪ್ಪ ಸುರಿದಂತಾಗಿದೆ.