ಚಿಕ್ಕಬಳ್ಳಾಪುರ/ಶಿಡ್ಲಘಟ್ಟ: ಜಿಲ್ಲೆಯ ಶಿಡ್ಲಘಟ್ಟ ಕ್ಷೇತ್ರದ ಮಾಜಿ ಶಾಸಕ ಎಂ. ರಾಜಣ್ಣಗೆ ಕೆಲವು ದಿನಗಳ ಹಿಂದೆಯಷ್ಟೇ
ಮೊಬೈಲ್ ಕರೆ ಮಾಡಿ ಅವಾಚ್ಯ ಶಬ್ಧಗಳಿಂದ ನಿಂದಿಸಿ ಕೊಲೆ ಬೆದರಿಕೆ ಹಾಕಿದ್ದ ವ್ಯಕ್ತಿಯ ಜಾಡು ಹಿಡಿಯುವಲ್ಲಿ ಕೊನೆಗೂ ಪೊಲೀಸರು ಯಶಸ್ವಿ ಯಾಗಿದ್ದು, ಪೊಲೀಸರ ಬಲೆಗೆ ಬಿದ್ದ ಅಸಾಮಿಯನ್ನು ಶಿಡ್ಲಘಟ್ಟದ ಮೇಲೂರಿನ ಜೆಡಿಎಸ್ ಮುಖಂಡ ರವಿಕುಮಾರ್ ಸಹೋದರ ಸಚಿನ್ ಎಂದು ಗುರುತಿಸಲಾಗಿದೆ.
ಮಾಜಿ ಶಾಸಕ ಎಂ.ರಾಜಣ್ಣ ಅವರಿಗೆ ಮೊಬೈಲ್ ಕರೆ ಮಾಡಿ ರಾಜಣ್ಣ ಅವರನ್ನು ಹಾಗೂ ಅವರ ಕುಟುಂಬಸ್ಥರನ್ನು ಸಚಿನ್ ಕೆಲ ದಿನಗಳ ಹಿಂದೆ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದರು. ಪೊಲೀಸರಿಗೆ ದೂರು ನೀಡಿದರೆ ಹಾಡು ಹಗಲೆ ಮನೆಗೆ ಬಂದು ತಲೆ ಕಡಿಯುವುದಾಗಿ ಕೊಲೆ ಬೆದರಿಕೆ ಹಾಕಿದ್ದ. ಅನಾಮಧೇಯ ವ್ಯಕ್ತಿಯೊಬ್ಬ ಮೊಬೈಲ್ ಕರೆ ಮಾಡಿ ಕೊಲೆ ಬೆದರಿಕೆ ಹಾಕಿದ್ದ ಪ್ರಕರಣ ಸಾರ್ವಜನಿಕ ವಲಯದಲ್ಲಿ ಕುತೂಹಲಕ್ಕೆ ಕಾರಣವಾಗಿತ್ತು. ಹತ್ತು ಹಲವು ಅನುಮಾನಗಳಿಗೂ ಎಡೆ ಮಾಡಿ ಕೊಟ್ಟಿತ್ತು. ಅಲ್ಲದೇ ಈ ಬಗ್ಗೆ ಖುದ್ದು ಮಾಜಿ ಶಾಸಕ ಎಂ.ರಾಜಣ್ಣ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರು ಸಹ ನೀಡಿದ್ದರು.
ಜಾಮೀನು ನೀಡಿ ಬಿಡುಗಡೆ: ಪ್ರಕರಣ ದಾಖಲಿಸಿಕೊಂಡಿದ್ದ ಶಿಡ್ಲಘಟ್ಟ ಗ್ರಾಮಾಂ ತರ ಪೊಲೀಸರು ತನಿಖೆ ನಡೆಸಿ ರಾಜಣ್ಣಗೆ ಬಂದಿದ್ದ ಮೊಬೈಲ್ ಕರೆಗಳ ಜಾಡು ಹಿಡಿದು ಮೇಲೂರಿನ ಜೆಡಿಎಸ್ ಮುಖಂಡರಾಗಿರುವ ಕಳೆದ ವಿಧಾನಸಭಾ ಚುನಾವಣೆ ವೇಳೆ ರಾಜಣ್ಣಗೆ ಜೆಡಿಎಸ್ ಬಿ.ಫಾರಂ ತಪ್ಪಿಸಿ ಜೆಡಿಎಸ್ ಪಕ್ಷದಿಂದ ಅಧಿಕೃತ ಅಭ್ಯರ್ಥಿ ಯಾಗಿ ಚುನಾವಣೆಗೆ ನಿಂತು ಪರಾಜಿತ ಗೊಂಡಿದ್ದ ವಿಕುಮಾರ್ ಅವರ ತಮ್ಮ ಬಿ.ಎನ್.ಸಚಿನ್ ಅವರನ್ನು ಮಂಗಳ ವಾರ ರಾತ್ರಿ ಬಂಧಿಸಿ ಠಾಣೆಯಲ್ಲಿಯೇ ಜಾಮೀನು ನೀಡಿ ಬಿಡುಗಡೆ ಮಾಡಿದ್ದಾರೆ. ಜಿಲ್ಲೆಯ ಮಾಜಿ ಶಾಸಕರೊಬ್ಬರಿಗೆ ಅನಾಮಧೇಯ ವ್ಯಕ್ತಿ ಕೊಲೆ ಬೆದರಿಕೆ ಹಾಕಿದ್ದ ಪ್ರಕರಣ ರಾಜಕೀಯವಾಗಿ ಮಾತ್ರವಲ್ಲದೇ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿತ್ತು.
ಕೊಲೆ ಬೆದರಿಕೆ ಹಾಕಲು ಬಳಸಲಾಗಿತ್ತು ಎನ್ನಲಾದ ಮೊಬೈಲನ್ನು ಸಚಿನ್ ಅವರಿಂದ ವಶಕ್ಕೆ ತೆಗೆದುಕೊಳ್ಳಲಾಗಿದೆ, ಮುಂದಿನ ತನಿಖೆಗೆ ಸಹಕರಿಸುವಂತೆ ಸೂಚಿಸಿ ಜಾಮೀನು ಮಂಜೂರು ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದಕ್ಕೂ ಮುನ್ನ ಕೊಲೆ ಬೆದರಿಕೆ ಕರೆ ಬಂದಿದ್ದ ನಂಬರ್‌ನ ಸಿಮ್‌ನ ಮಾಲೀಕ ಶಿಡ್ಲಘಟ್ಟ ತಾಲೂಕಿನ ಪಕೀರನ ಹೊಸಹಳ್ಳಿಯ ಅಂಬರೀಷ್‌ಗೌಡ ಎಂಬಾತ ನನ್ನು ಪೊಲೀಸರು ವಶಕ್ಕೆ ಪಡೆದಿದ್ದರು.
ಪೊಲೀಸರ ಮುಂದೆ ನನ್ನ ಮೊಬೈಲ್ ಒಂದು ತಿಂಗಳ ಹಿಂದೆ ಕಳೆದು ಹೋಗಿತ್ತು ಎಂದು ಅಂಬರೀಷ್ ಹೇಳಿಕೆ ನೀಡಿದ್ದು ಅದನ್ನು ಪೊಲೀಸರು ದಾಖಲಿಸಿ ಆತನನ್ನು ಬಿಟ್ಟಿದ್ದಾರೆ.