ಬೆಂಗಳೂರು: ಮಂಗಳೂರು ಸಮೀಪದ ಕಾಟಿಪಳ್ಳದಲ್ಲಿ ದೀಪಕ್ ರಾವ್ ಹತ್ಯೆ ಸಹಿತ ರಾಜ್ಯಾದ್ಯಂತ ನಡೆಯುತ್ತಿರುವ ಹಿಂದೂ ಕಾರ್ಯಕರ್ತರ ಕೊಲೆ ಖಂಡಿಸಿ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ರಾಜ್ಯ ಕಾಂಗ್ರೆಸ್ ಸರಕಾರದ ವೈಫಲ್ಯ ಖಂಡಿಸಿ ಬಿಜೆಪಿ ಜ.8ರಂದು ಬೆಂಗಳೂರಿನಲ್ಲಿ ಬೃಹತ್ ಧರಣಿ ಸತ್ಯಾಗ್ರಹ ಹಮ್ಮಿಕೊಂಡಿದೆ.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಮತ್ತು ಮಾಜಿ ಉಪಮುಖ್ಯಮಂತ್ರಿ ಆರ್.ಅಶೋಕ್ ನೇತೃತ್ವದಲ್ಲಿ ಆನಂದರಾವ್ ವೃತ್ತದ ಗಾಂಧಿ ಪ್ರತಿಮೆ ಬಳಿ ನಡೆಯುವ ಧರಣಿಯಲ್ಲಿ ಪಕ್ಷದ ಪ್ರಮುಖರು, ಶಾಸಕರು, ಬಿಬಿಎಂಪಿ ಸದಸ್ಯರು ಸಹಿತ ಸಾವಿರಾರು ಮಂದಿ ಪಾಲ್ಗೊಳ್ಳಲಿದ್ದಾರೆ.
ಈ ಕುರಿತು ಹೇಳಿಕೆ ನೀಡಿರುವ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್, ರಾಜ್ಯ ಸರಕಾರದ ವೈಫಲ್ಯಗಳ ವಿರುದ್ಧ ಜನಾಭಿಪ್ರಾಯ ಕ್ರೋಡೀಕರಿಸಲು ಪಕ್ಷ ಮುಂದಾಗಿದೆ. ಈ ಧರಣಿಯ ಬಳಿಕ ರಾಜ್ಯಾದ್ಯಂತ ಹೋರಾಟ ನಡೆಸಲಾಗುವುದು ಎಂದು ತಿಳಿಸಿದ್ದಾರೆ.
ರಾಜ್ಯದಲ್ಲಿ ಕಳೆದ 4 ವರ್ಷಗಳಲ್ಲಿ 24 ಹಿಂದೂ ಕಾರ್ಯಕರ್ತರ ಹತ್ಯೆ ನಡೆದಿದ್ದರೂ, ರಾಜ್ಯ ಸರಕಾರವೇ ಆರೋಪಿಗಳ ಪರ ವಕಾಲತ್ತು ವಹಿಸುತ್ತಿದೆ. ಕಾರವಾರದಲ್ಲಿ ನಡೆದ ಪರೇಶ್ ಮೇಸಾ ¤ ಹತ್ಯೆಯ ಅನಂತರ ಶವವನ್ನು ಕೆರೆಯಲ್ಲಿ ಎಸೆಯಲಾಗಿತು ¤. ಆದರೆ, ಈ ಪ್ರಕರಣದಲ್ಲೂ ತನಿಖೆಯ ಹಾದಿ ತಪ್ಪಿಸುವ ಯತ್ನ ನಡೆಯಿತು. ದೀಪಕ್ ರಾವ್ ಹತ್ಯೆ ಪ್ರಕರಣದಲ್ಲೂ ಗೃಹ ಸಚಿವ ರಾಮಲಿಂಗಾ ರೆಡ್ಡಿ ತನಿಖೆ ಹಾದಿ ತಪ್ಪಿಸುವಂತಹ ಹೇಳಿಕೆ ನೀಡಿದ್ದಾರೆ. ದೀಪಕ್ ಹತ್ಯೆ ಹಿಂದೆ ವೈಯಕ್ತಿಕ ಕಾರಣಗಳಿವೆ ಎಂದು ಹೇಳುವ ಮೂಲಕ ಆರೋಪಿಗಳಿಗೆ ರಕ್ಷಣೆ ನೀಡುವ ಪ್ರಯತ್ನ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ಜ.8ರಂದು ಮೃತ ದೀಪಕ್ ನಿವಾಸಕ್ಕೆ ಬಿಎಸ್‌ವೈ ಭೇಟಿ: ಬುಧವಾರ ಹತ್ಯೆಯಾದ ದೀಪಕ್ ನಿವಾಸಕ್ಕೆ ಯಡಿಯೂರಪ್ಪ ಜ. 8ರಂದು ಭೇಟಿ ನೀಡಿ ದೀಪಕ್ ತಾಯಿಗೆ ಸಾಂತ್ವನ ಹೇಳಲಿದ್ದಾರೆ.
ದೀಪಕ್‌ರಾವ್ ಹತ್ಯೆ ಪ್ರಕರಣವನ್ನು ಇಲ್ಲಿಗೇ ಬಿಡುವುದಿಲ್ಲ. ಅವರ ಹತ್ಯೆ ಖಂಡಿಸಿ ಮಂಗಳೂರಿನವರೆಗೂ ಪಾದಯಾತ್ರೆ ಮಾಡಿ ಬೃಹತ್ ಪ್ರತಿಭಟನೆ ಮಾಡುತ್ತೇವೆ.
-ಬಿ.ಎಸ್.ಯಡಿಯೂರಪ್ಪ