ವಾಡಿ: ಮಾರಕಾಸ್ತ್ರಗಳಿಂದ ದಾಳಿ ನಡೆಸುವ ಜತೆಗೆ ತಲೆ ಮೇಲೆ ಸೈಜುಗಲ್ಲು ಎತ್ತಿ ಹಾಕಿ ಕಲಬುರಗಿ ಚಿನ್ನದ ವ್ಯಾಪಾರಿಯೊಬ್ಬರನ್ನು ಕೊಲೆ ಮಾಡಿ ದುಷ್ಕರ್ಮಿಗಳು ಪರಾರಿಯಾದ ಘಟನೆ ಚಿತ್ತಾಪುರ ಮತ್ತು ರಾವೂರ ಗ್ರಾಮದ ನಡುವಿನ ಅಬ್ಟಾಸ ಅಲಿ ದರ್ಗಾ ಬಳಿ ಸೋಮವಾರ ತಡರಾತ್ರಿ ಸಂಭವಿಸಿದೆ.
ಕಲಬುರಗಿ ನಗರದ ಗಾಜಿಪುರ ಬಡಾವಣೆಯ ಮಂಜುನಾಥ ತೆಗನೂರ (38) ಕೊಲೆಯಾದ ವ್ಯಕ್ತಿ. ಇವರು ವೃತ್ತಿಯಲ್ಲಿ ಚಿನ್ನದ ವ್ಯಾಪಾರಿ ಹಾಗೂ ಹಣಕಾಸಿನ ವ್ಯವಹಾರ ನಡೆಸುತ್ತಿದ್ದರು. ಕೊಡುಕೊಳ್ಳುವ ವಿಚಾರದಲ್ಲಿ ಸ್ನೇಹಿತರ ಮಧ್ಯೆ ಗಲಾಟೆಯಾಗಿರಬಹುದು ಎಂದು ಕುಟುಂಬಸ್ಥರು ಅನುಮಾನ ವ್ಯಕ್ತಪಡಿಸಿದ್ದಾರೆ.
ಕೊಲೆಯಾದ ವ್ಯಕ್ತಿಯ ಮುಖದ ಮೇಲೆ ಮಾರಕಾಸ್ತ್ರಗಳಿಂದ ಇರಿದ ಗಾಯಗಳು ಕಂಡು ಬಂದಿವೆ. ಮಂಜುನಾಥನನ್ನು ಕಲಬುರಗಿಯಿಂದ ವಾಹನದಲ್ಲಿ ಕರೆತಂದ ದುಷ್ಕರ್ಮಿಗಳ ಗುಂಪು ಯಾದಗಿರಿ ವ್ಯಾಪ್ತಿಯಲ್ಲಿ ಸುತ್ತಾಡಿಸಿದ್ದರು. ನಂತರ ಮಧ್ಯರಾತ್ರಿ ಚಿತ್ತಾಪುರ ಮಾರ್ಗದ ಯರಗಲ್ ರಸ್ತೆಯ ಜಮೀನೊಂದರಲ್ಲಿ ಇಳಿಸಿ ಮಾರಕಾಸ್ತ್ರಗಳಿಂದ ದಾಳಿ ನಡೆಸಿದ್ದಾರೆ.
ನಂತರ ದೊಡ್ಡ ಗಾತ್ರದ ಸೈಜುಗಲ್ಲನ್ನು ಮಂಜುನಾಥನ ತಲೆ ಮೇಲೆ ಹಾಕಿ ಹತ್ಯೆ ಮಾಡಿ ಆರೋಪಿತರು ಪರಾರಿಯಾಗಿದ್ದಾರೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಶ್ವಾನ ದಳದೊಂದಿಗೆ ಘಟನಾ ಸ್ಥಳಕ್ಕೆ ಭೇಟಿ ನೀಡಿದ ಎಸ್‌ಪಿ ಇಶಾ ಪಂಥ್, ಶಹಾಬಾದ ಡಿವೈಎಸ್‌ಪಿ ಉಮೇಶ ಚಿಕ್ಕಮಠ, ಚಿತ್ತಾಪುರ ಸಿಪಿಐ ಕೃಷ್ಣಪ್ಪ ಕಲ್ಲೆದೇವರು, ವಾಡಿ ಠಾಣೆ ಪಿಎಸ್‌ಐ ವಿಜಯಕುಮಾರ ಭಾವಗಿ ಹಾಗೂ ಸಿಬ್ಬಂದಿ ಪರಿಶೀಲನೆ ನಡೆಸಿದ್ದಾರೆ.
ಶವವನ್ನು ವಾಡಿ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ಸಾಗಿಸಿ ಮರಣೋತ್ತರ ಪರೀಕ್ಷೆಗೆ ಒಳಪಡಿಸಲಾಗಿದೆ. ಕೊಲೆ ಘಟನೆ ಗಂಭೀರವಾಗಿ ಪರಿಗಣಿಸಿದ ಎಸ್‌ಪಿ ಇಶಾ ಪಂಥ್, ಸಿಪಿಐ ಚಿತ್ತಾಪುರ ನೇತೃತ್ವದಲ್ಲಿ ಎರಡು ವಿಶೇಷ ತಂಡ ರಚಿಸುವ ಮೂಲಕ 24 ಗಂಟೆಯೊಳಗೆ ಆರೋಪಿತರ ಹೆಡೆಮುರಿ ಕಟ್ಟಲು ಆದೇಶ ನೀಡಿದ್ದಾರೆ. ವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೆಚ್ಚುತ್ತಿವೆ ಕೊಲೆ ಘಟನೆಗಳು: ಕಳೆದ ವರ್ಷ ಕುಂಬಾರಹಳ್ಳಿಯ ನಿರ್ಜನ ಪ್ರದೇಶದಲ್ಲಿ ಹೂತ ಶವವೊಂದು ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಇತ್ತೀಚೆಗಷ್ಟೇ ಗಾಂಜಾ ದಂಧೆಗೆ ಸಂಬಂಧಿಸಿದಂತೆ ಚಿತ್ತಾಪುರದಲ್ಲಿ ಯುವಕನೊಬ್ಬನನ್ನು ಚಾಕು ಇರಿದು ಕೊಲ್ಲಲಾಗಿತ್ತು.