Advertisement

ಬಾವಿಯಲ್ಲಿ ಪತ್ತೆಯಾಯ್ತು 9 ಮೃತದೇಹಗಳು ; ಒಂದು ಕೊಲೆ ಮುಚ್ಚಿಡಲು 9 ಹತ್ಯೆ!

03:33 AM May 29, 2020 | Hari Prasad |

ವಾರಂಗಲ್: ಕಳೆದ ವಾರ ತೆಲಂಗಾಣದ ವಾರಂಗಲ್‌ ಜಿಲ್ಲೆಯ ಬಾವಿಯೊಂದರಲ್ಲಿ ಒಂದೇ ಕುಟುಂಬದ 6 ಮಂದಿ ಸೇರಿದಂತೆ 9 ಮಂದಿಯ ಮೃತದೇಹ ಪತ್ತೆಯಾದ ಘಟನೆ ಈಗ ಸಿನಿಮೀಯ ಮಾದರಿಯಲ್ಲಿ ಹೊಸ ತಿರುವು ಪಡೆದುಕೊಂಡಿದೆ.

Advertisement

ಒಂದು ಕೊಲೆಯನ್ನು ಮುಚ್ಚಿಡುವ ಸಲುವಾಗಿ ಈ 9 ಕೊಲೆಗಳು ನಡೆದಿದೆ ಎಂಬ ಮಾಹಿತಿ ತನಿಖೆಯಿಂದ ಬಹಿರಂಗಗೊಂಡಿದ್ದು 24 ವರ್ಷದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ.

ಗೀಸುಗೊಂಡ ಮಂಡಲ್‌ ಗ್ರಾಮದಲ್ಲಿ ನಡೆದ ಘಟನೆಯಿದು. 20 ವರ್ಷದ ಹಿಂದೆ ಪ.ಬಂಗಾಲದಿಂದ ವಲಸೆ ಬಂದಿದ್ದ ಮಕ್ಸೂದ್‌ (48), ಅವರ ಪತ್ನಿ, ಇಬ್ಬರು ಗಂಡು ಮಕ್ಕಳು, ಪುತ್ರಿ ಬುಷ್ಯಾ ಮತ್ತು ಆಕೆಯ 3 ವರ್ಷದ ಪುತ್ರ ಹಾಗೂ ಇತರೆ ಮೂವರ ಶವ ಕಳೆದ ವಾರ ಬಾವಿಯಲ್ಲಿ ಪತ್ತೆಯಾ ಗಿತ್ತು.

ಕೆಲಸವಿಲ್ಲದ ಕಾರಣ ಇವರು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿತ್ತು. ಆದರೆ, ಮೃತದೇಹಗಳಲ್ಲಿ ಗಾಯಗಳು ಪತ್ತೆ ಹಿನ್ನೆಲೆಯಲ್ಲಿ ತನಿಖೆ ಚುರುಕುಗೊಳಿಸಲಾಗಿತ್ತು.

ಮಕ್ಸೂದ್‌ ಸಂಬಂಧಿಯಾಗಿದ್ದ ವಿಚ್ಛೇದಿತ ಮಹಿಳೆ ರಫೀಕಾ (37) ಇತ್ತೀಚೆಗೆ ಇವರ ಮನೆಗೆ ಬಂದು ಕೆಲ ದಿನ ತಂಗಿದ್ದರು. ಮಕ್ಸೂದ್‌ ಕೆಲಸ ಮಾಡುತ್ತಿದ್ದ ಫ್ಯಾಕ್ಟರಿಯಲ್ಲೇ ಸಂಜಯ್‌ ಕೂಡ ಕೆಲಸ ಮಾಡುತ್ತಿದ್ದ. ಈತ ರಫೀಕಾ ಜತೆ ಅಕ್ರಮ ಸಂಬಂಧ ಹೊಂದಿದ್ದ.

Advertisement

ಅನಂತರ ರಫೀಕಾ ತನ್ನ ಮೂವರು ಮಕ್ಕಳೊಂದಿಗೆ ಪ್ರತ್ಯೇಕ ಮನೆಯಲ್ಲಿ ಸಂಜಯ್‌ ಜತೆ ಸಂಸಾರ ಆರಂಭಿಸಿದ್ದಳು. ಈ ನಡುವೆ, ಸಂಜಯ್‌ ತನ್ನ ಹದಿ ಹರೆಯದ ಮಗಳ ಮೇಲೆಯೇ ಕಣ್ಣಿಟ್ಟಿರುವ ವಿಚಾರ ರಫೀಕಾಗೆ ಗೊತ್ತಾಗಿ, ತಗಾದೆ ತೆಗೆದಳು.

ಕೊನೆಗೆ ಮಾ. 6ರಂದು ರಫೀಕಾಳನ್ನು ಮದುವೆಯಾಗುವುದಾಗಿ ಪುಸಲಾಯಿಸಿ ರೈಲಲ್ಲಿ ಕರೆದೊಯ್ದ ಸಂಜಯ್, ಆಕೆಗೆ ಮತ್ತು ಬರಿಸುವ ಔಷಧ ನೀಡಿ, ಕತ್ತು ಹಿಸುಕಿ ಕೊಲೆ ಮಾಡಿ, ಶವವನ್ನು ರೈಲಿಂದ ಕೆಳಕ್ಕೆ ಹಾಕಿ ವಾರಂಗಲ್‌ಗೆ ವಾಪಸಾಗಿದ್ದ.

ರಫೀಕಾಳನ್ನು ಸಂಜಯ್‌ ಕೊಲೆ ಮಾಡಿರಬಹುದು ಎಂಬ ಶಂಕೆ ಮಕ್ಸೂದ್‌ ಪತ್ನಿಗೆ ಬಂದಿತ್ತು. ಹೀಗಾಗಿ, ಪೊಲೀಸರಿಗೆ ವಿಚಾರ ತಿಳಿಸುವುದಾಗಿ ಆಕೆ ಸಂಜಯ್‌ ನನ್ನು ಬೆದರಿಸಿದ್ದಳು.

ರಫೀಕಾ ಕೊಲೆ ವಿಚಾರ ಮುಚ್ಚಿಡುವ ಸಲುವಾಗಿ ಸಂಜಯ್, ಕಳೆದ ವಾರ ಆಹಾರದಲ್ಲಿ ನಿದ್ರೆ ಮಾತ್ರೆ ಸೇರಿಸಿ, ಮಕ್ಸೂದ್‌ ಕುಟುಂಬದ ಆರು ಮಂದಿ ಸೇರಿ 9 ಮಂದಿಯನ್ನು ಹತ್ಯೆಗೈದು, ಶವಗಳನ್ನು ಬಾವಿಗೆ ಎಸೆದಿದ್ದಾನೆ. ಆರೋಪಿ ಸಂಜಯ್‌ ವಿಚಾರಣೆ ವೇಳೆ ಈ ವಿಷಯವನ್ನು ಬಾಯಿ ಬಿಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next