Advertisement

ಗುರುತಿನ ಚೀಟಿಗಾಗಿ ನಡೆಯಿತು ಮರ್ಡರ್‌

12:02 PM Mar 31, 2018 | |

ಬೆಂಗಳೂರು: ಯೋಧರಿಬ್ಬರು ನಡೆಸಿದ ಈ ಭೀಕರ ಹತ್ಯೆ ಹಿಂದೆ ಇದ್ದದ್ದು ಕೇವಲ ಒಂದು ಗುರುತಿನ ಚೀಟಿ ಮಾತ್ರ! ಹೌದು, ಪಂಕಜ್‌ ಕುಮಾರ್‌ ಅವರ ಗುರುತಿನ ಚೀಟಿಯನ್ನು ಮುರಳಿಕೃಷ್ಣ ಕಳವು ಮಾಡಿದ್ದ. ಗುರುತಿನ ಚೀಟಿ ಕಳವು ಕುರಿತು ನಗರ ಪೊಲೀಸರ “ಈ-ಲಾಸ್ಟ್‌’ ಆ್ಯಪ್‌ ಮೂಲಕ ವಿವೇಕನಗರ ಠಾಣೆ ಹಾಗೂ ಹಿರಿಯ ಅಧಿಕಾರಿಗಳಿಗೆ ಪಂಕಜ್‌ ದೂರು ನೀಡಿದ್ದ.

Advertisement

ಈ ಬಗ್ಗೆ  ಕ್ಯಾಂಪಸ್‌ನ ಹಿರಿಯ ಸೇನಾಧಿಕಾರಿಗಳ ಮಟ್ಟದಲ್ಲಿ ಆಂತರಿಕ ತನಿಖೆ ನಡೆಯುತ್ತಿತ್ತು. ಆರೋಪಿ ವಿರುದ್ಧ ಎಲ್ಲ ಸಾಕ್ಷ್ಯ ಸಂಗ್ರಹಿಸಿದ ಅಧಿಕಾರಿಗಳು ಸದ್ಯದಲ್ಲೇ ತೀರ್ಪು ನೀಡುವವರಿದ್ದರು. ಈ ಮಾಹಿತಿ ಪಡೆದಿದ್ದ ಆರೋಪಿಯು ಪಂಕಜ್‌ ಕುಮಾರ್‌ಗೆ ನಾಲ್ಕೈದು ಬಾರಿ ದೂರು ವಾಪಸ್‌ ಪಡೆದು, ತನ್ನ ವಿರುದ್ಧ ಸಾಕ್ಷ್ಯ ನುಡಿಯದಂತೆ ಎಚ್ಚರಿಕೆ ನೀಡಿದ್ದ. ಒಪ್ಪದಿದ್ದಾಗ ಕೊಲೆಗೈಯಲು ನಿರ್ಧರಿಸಿದ್ದ.

ಇದಕ್ಕೆ ತನ್ನ ಊರಿನವನಾದ ಧನರಾಜ್‌ನ ಸಹಾಯ ಕೋರಿದ್ದ. ಆರಂಭದಲ್ಲಿ ಒಪ್ಪದ ಧನರಾಜ್‌ಗೆ ನಾವು ಆಂಧ್ರಪ್ರದೇಶದವರು ಎಂದಿಗೂ ಸಿಕ್ಕಿ ಬೀಳುವುದಿಲ್ಲ. ನನ್ನೊಂದಿಗೆ ಕೈಜೋಡಿಸು ಎಂದು ಕೇಳಿಕೊಂಡಿದ್ದ. ಇದಕ್ಕೆ ಒಪ್ಪಿಕೊಂಡು ಧನರಾಜ್‌ ಕೃತ್ಯಕ್ಕೆ ಸಹಾಯ ಮಾಡಿದ್ದಾನೆ ಎಂದು ಪೊಲೀಸ್‌ ಅಧಿಕಾರಿಯೊಬ್ಬರು “ಉದಯವಾಣಿ’ಗೆ ತಿಳಿಸಿದ್ದಾರೆ.

ಸುಬೇದಾರ್‌ಗೆ ಬಂದಿತ್ತು ಅನುಮಾನ: ಸೇನೆಯಲ್ಲಿ ನಿತ್ಯ ಬೆಳಗ್ಗೆ 6 ಗಂಟೆ ಸುಮಾರಿಗೆ ಎಲ್ಲ ಯೋಧರು ಪೆರೇಡ್‌ ಮಾಡುವುದು ನಿಯಮ. ಆದರೆ, ಪಂಕಜ್‌ ಪರೇಡ್‌ಗೆ ಹಾಜರಾಗಿಲ್ಲ. 8 ಗಂಟೆ ಪರೇಡ್‌ಗೂ ಗೈರಾಗಿದ್ದರಿಂದ ಅನುಮಾನಗೊಂಡ ಸುಬೇದಾರ್‌, ಪಂಕಜ್‌ ಕೊಠಡಿ ಪರಿಶೀಲಿಸಿದ್ದಾರೆ. ಆಗ ಪಂಕಜ್‌ ಕೊಠಡಿ ಬೀಗ ಹಾಕಿದ್ದು, ಮುಂದಿನ ಕಿಟಕಿ ಗಾಜು ಒಡೆದಿತ್ತು. ಒಳ ಹೋಗಿ ನೋಡಿದಾಗ ರಕ್ತದ ಕಲೆಗಳು ಹಾಗೂ ಸ್ವತ್ಛಗೊಳಿಸಿರುವುದು ಕಂಡು ಅನುಮಾನಗೊಂಡಿದ್ದಾರೆ. ಬಳಿಕ ಪರೇಡೆಗೆ ಹಾಜರಾಗದ ಧನರಾಜ್‌ ಬಗ್ಗೆ ಪರಿಶೀಲಿಸಿದಾಗ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದರು.

ರಸ್ತೆ ಅಪಘಾತದ ಕತೆ: ಆರೋಪಿ ಧನರಾಜ್‌ನ ತೊಡೆ ಹಾಗೂ ಎರಡು ಕೈಗಳಿಗೆ ಗಂಭೀರ ಗಾಯವಾಗಿದ್ದು, ಸೇನೆಯ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದ. ಸುಬೇದಾರ್‌ ಪ್ರಶ್ನಿಸಿದಾಗ ರಾತ್ರಿ ಟ್ರಿನಿಟಿ ಸರ್ಕಲ್‌ಗೆ ಹೋಗಿದ್ದಾಗ ರಸ್ತೆ ಅಪಘಾತವಾಯಿತು ಎಂದಿದ್ದಾನೆ. ಅನುಮಾನಗೊಂಡು ಟ್ರಿನಿಟಿ ಸರ್ಕಲ್‌ನ ಸಿಸಿಟಿವಿ ಪರಿಶೀಲಿಸಿದಾಗ ಆರೋಪಿ ಸುಳ್ಳು ಹೇಳುತ್ತಿರುವುದು ಗೊತ್ತಾಗಿದೆ.

Advertisement

ಅಲ್ಲದೇ ಮುರಳಿಕೃಷ್ಣ  ಕೈಗಳಿಗೆ ಸುಟ್ಟು ಗಾಯಗಳಾಗಿದ್ದು, ಔಷಧ ಹಚ್ಚಿಕೊಂಡಿದ್ದ. ಇದನ್ನು ಪ್ರಶ್ನಿಸಿದಾಗ ರಾತ್ರಿ ಅಡುಗೆ ಮನೆಯಲ್ಲಿ ಆದ ಗಾಯ ಎಂದು ಹೇಳಿದ್ದಾನೆ. ಆದರೆ, ಘಟನಾ ಸಂದರ್ಭದಲ್ಲಿ ಅಡುಗೆ ಮನೆಗೆ ಬೀಗ ಹಾಕಲಾಗಿತ್ತು. ಈ ಮಧ್ಯೆ ಕ್ಯಾಂಪಸ್‌ನ ನಿರ್ಜನ ಪ್ರದೇಶದಲ್ಲಿ ಬಳಿ ನಾಯಿಯೊಂದು ಮೃತ ದೇಹವನ್ನು ಎಳೆದು ತಿನ್ನುತ್ತಿರುವದನ್ನು ಗಮನಿಸಿದ ಸೇನಾ ಸಿಬ್ಬಂದಿ, ಕೂಡಲೇ ಕೊನೆಗೆ ವಿವೇಕನಗರ ಠಾಣೆಗೆ ದೂರು ನೀಡಿದ್ದಾರೆ.

ಬಳಿಕ ವಿವೇಕನಗರ ಠಾಣೆ ಪೊಲೀಸರು ತನಿಖೆ ನಡೆಸಿ ಅನುಮಾನದ ಮೇರೆಗೆ ಧನರಾಜ್‌ನನ್ನು ಎರಡು ದಿನಗಳ ಬಳಿಕ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಆರಂಭದಲ್ಲಿ ಒಪ್ಪಿಕೊಂಡಿಲ್ಲ. ನಂತರ ಪೊಲೀಸ್‌ ಮಾದರಿಯಲ್ಲಿ ತೀವ್ರ ರೀತಿಯ ವಿಚಾರಣೆ ನಡೆಸಿದಾಗ ಘಟನೆಯ ಸಂಪೂರ್ಣ ವಿವರ ಬಿಚ್ಚಿಟ್ಟಿದ್ದು, ಮುರುಳಿಕೃಷ್ಣನ ಪಾತ್ರದ ಬಗ್ಗೆ ಹೇಳಿದ್ದ. ನಂತರ ಮುರಳಿಕೃಷ್ಣನನ್ನು ಬಂಧಿಸಿ ವಿಚಾರಣೆ ನಡೆಸಿದಾಗ, ಇಬ್ಬರು ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಸಂದೇಶ ಕಳುಹಿಸಿದ್ದ ಮುರಳಿಕೃಷ್ಣ: ಪಂಕಜ್‌ನ ಮೊಬೈಲ್‌ ತನ್ನ ಬಳಿಯೇ ಇಟ್ಟುಕೊಂಡಿದ್ದ ಆರೋಪಿ ಬೆಳಗ್ಗೆ 5.50ರ ಸುಮಾರಿಗೆ ಅಪರಿಚಿತ ನಂಬರ್‌ನಿಂದ “ಪಂಕಜ್‌ ಕಹಾ ಹೋ’ ಎಂದು ಸಂದೇಶ ಕಳುಹಿಸಿದ್ದಾನೆ. ಇದಕ್ಕೆ ಪ್ರತಿಯಾಗಿ ತಾನೇ ಪಂಕಜ್‌ ಮೊಬೈಲ್‌ನಿಂದ “ಮೇ ನಾರ್ತ್‌ ಕ್ಯಾಂಪ್‌ ಕೊಜಾರಹಾಹು’ ಎಂದು ಪ್ರತಿಕ್ರಿಯೆ ಕಳುಹಿಸಿದ್ದಾನೆ.

ಗುರುತು ಪತ್ತೆ ಹಚ್ಚಿದ ಸಂಬಂಧಿಕರು: ಪಂಕಜ್‌ ಕೊಲೆಯಾಗಿರುವ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಸೇನೆಯ ಅಧಿಕಾರಿಗಳು, ಕೂಡಲೇ ಆತನ ಕುಟುಂಬ ಸದಸ್ಯರಿಗೆ ಮಾಹಿತಿ ನೀಡಿ ಕರೆಸಿಕೊಂಡಿದ್ದರು. ಪಂಕಜ್‌ನ ಮೃತ ದೇಹ ನೋಡಿದ ಕುಟುಂಬದವರು ಆತನ ಕಾಲಿನ ಬೆರಳುಗಳನ್ನು ಗಮನಿಸಿ ಮೃತ ದೇಹ ಆತನದೇ ಎಂದು ಗುರುತು ಹಿಡಿದರು.

ಶಿಕ್ಷೆಯ ವರ್ಗಾವಣೆ: ಜಮ್ಮು-ಕಾಶ್ಮೀರದ ಕುಪ್ವಾರ ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಧನರಾಜ್‌ ಹಿರಿಯ ಅಧಿಕಾರಿಗಳಿಗೆ ಗೌರವ ನೀಡದ ಹಿನ್ನೆಲೆಯಲ್ಲಿ ಬೆಂಗಳೂರಿಗೆ ಶಿಕ್ಷೆ ವರ್ಗಾವಣೆ ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ ಒಂದು ತಿಂಗಳ ಹಿಂದೆಯಷ್ಟೇ ಬೆಂಗಳೂರಿನ ಕ್ಯಾಂಪಸ್‌ಗೆ ಬಂದಿದ್ದ ಧನರಾಜ್‌, ಇಲ್ಲಿಯೂ ಅದೇ ರೀತಿ ವರ್ತನೆ ತೋರುತ್ತಿದ್ದ. ಇದು ಹಿರಿಯ ಅಧಿಕಾರಿಗಳ ಗಮನಕ್ಕೆ ಬಂದಿದ್ದು, ಶಿಸ್ತು ಕ್ರಮಕ್ಕೆ ಮುಂದಾಗಿದ್ದರು. ಈ ಮಧ್ಯೆ ಆತನಿಗೆ ಮುರಳಿಕೃಷ್ಣನ ಪರಿಚಯವಾಗಿತ್ತು.

ಏಪ್ರಿಲ್‌ನಲ್ಲಿ ತೀರ್ಪು: ಪಂಕಜ್‌ ಕುಮಾರ್‌ನ ಗುರುತಿನ ಚೀಟಿ ಕಳವು ಮಾಡಿದ ಆರೋಪದ ಮೇಲೆ ಆಂತರಿಕ ತನಿಖೆ ಎದುರಿಸುತ್ತಿದ್ದ ಮುರಳಿಕೃಷ್ಣ ವಿರುದ್ಧ ಸಾಕ್ಷ್ಯ ಸಂಗ್ರಹಿಸಿದ್ದ ಹಿರಿಯ ಅಧಿಕಾರಿಗಳು, ಏಪ್ರಿಲ್‌ನಲ್ಲಿ ತೀರ್ಪು ಪ್ರಕಟಿಸಲಿದ್ದರು. ಒಂದು ವೇಳೆ ತನ್ನ ವಿರುದ್ಧ ತೀರ್ಪು ಪ್ರಕಟವಾದರೆ ಕೆಲಸದಿಂದ ವಜಾ ಆಗಬೇಕಾಗುತ್ತದೆ ಎಂದು ಹೆದರಿ ಆರೋಪಿ, ಪಂಕಜ್‌ನ್ನನೇ ಕೊಲೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಪೊಲೀಸರಿಗೇ ಅಚ್ಚರಿ: ವಿಚಾರಣೆ ವೇಳೆ ಈ ರೀತಿಯ ದಾರುಣ ಕೃತ್ಯವೆಸಗಲು ಹೇಗೆ ಧೈರ್ಯ ಬಂತು ಎಂದು ಪ್ರಶ್ನಿಸಿದ ತನಿಖಾಧಿಕಾರಿಗಳಿಗೆ ಆರೋಪಿ ಮುರಳಿಕೃಷ್ಣ ಅಚ್ಚರಿಯ ಉತ್ತರ ನೀಡಿದ್ದಾನೆ. ನಮ್ಮದು ಆಂಧ್ರಪ್ರದೇಶ ಶ್ರೀಕಾಕುಲಂ ಜಿಲ್ಲೆಯ ಪಾಸಿಗಂಗುಪೇಟಾ ಗ್ರಾಮ, ಸುತ್ತಲು ಅರಣ್ಯ ಪ್ರದೇಶ. ಇಲ್ಲಿ ಶ್ರೀಗಂಧದ ಮರಗಳನ್ನು ಕಳವು ಮಾಡುತ್ತಿದ್ದ ಕಳ್ಳರು ಅರಣ್ಯ ಅಧಿಕಾರಿಗಳನ್ನು ಇದೇ ರೀತಿ ಕೊಲ್ಲುತ್ತಿದ್ದರು. ಆದರೆ, ಎಂದಿಗೂ ಬಂಧನವಾಗುತ್ತಿರಲಿಲ್ಲ. ಈ ಬಗ್ಗೆ ಓದಿ, ಕೇಳಿ ತಿಳಿದುಕೊಂಡಿದ್ದ ನಾನು ಅದೇ ರೀತಿಯ ಕೃತ್ಯವೆಸಗಿದೆ ಎಂದಿದ್ದಾನೆ.

Advertisement

Udayavani is now on Telegram. Click here to join our channel and stay updated with the latest news.

Next