ಮಂಗಳೂರು: ಏಳು ವರ್ಷಗಳ ಹಿಂದೆ ತೊಕ್ಕೊಟ್ಟಿನ ಕಾಪಿಕಾಡ್‌ನಲ್ಲಿ ಸ್ಥಳೀಯ ನಿವಾಸಿ ಪ್ರವೀಣ್ ಕುಮಾರ್ ಜೆ.ಪಿ. (37) ಅವರ ಮೇಲೆ ಹಲ್ಲೆ ನಡೆಸಿ ಜಾತಿ ನಿಂದನೆ ಮಾಡಿ ಕೊಲೆಗೆ ಯತ್ನಿಸಿದ ಪ್ರಕರಣದಲ್ಲಿ ಇಬ್ಬರು ಆರೋಪಿಗಳ ಮೇಲಣ ಅಪರಾಧ ಇಲ್ಲಿನ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ಹಾಗೂ ವಿಶೇಷ ನ್ಯಾಯಾಲಯದಲ್ಲಿ ಸಾಬೀತಾಗಿದೆ. ಶಿಕ್ಷೆಯ ಪ್ರಮಾಣದ ಬಗ್ಗೆ ಅ. 28ರಂದು ವಿಚಾರಣೆ ನಡೆಯಲಿದೆ.
ತೊಕ್ಕೋಟು ಸಮೀಪದ ಕುಂಪಲದ ವಿನೋದ್ (34) ಮತ್ತು ಪ್ರಕಾಶ್ (36) ಅಪರಾಧಿಗಳು. ಈ ಪ್ರಕರಣದ ಇನ್ನೋರ್ವ ಆರೋಪಿ ಕುಂಪಲದ ಸುಜೀರ್ (33) ತಲೆಮರೆಸಿಕೊಂಡಿದ್ದು, ಆತನ ಮೇಲೆ ಪ್ರತ್ಯೇಕ ಪ್ರಕರಣ ದಾಖಲಿಸಲಾಗಿದೆ. ಹಲ್ಲೆಗೊಳಗಾದ ಪ್ರವೀಣ್ ಕುಮಾರ್ ಜೆ.ಪಿ. ಅವರು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ. ಖಾದರ್ ಅವರ ಆಪ್ತ ಸಹಾಯಕರಾಗಿರುತ್ತಾರೆ.
ಪ್ರಕರಣದ ವಿವರ: 2010ರ ಎಪ್ರಿಲ್ 7ರಂದು ಪ್ರವೀಣ್ ಕುಮಾರ್ ಅವರು ತನ್ನ ಸ್ನೇಹಿತ ರಾಜೇಶ್ ಜತೆ ಮಾತನಾಡಲು ಕಾಪಿಕಾಡ್‌ನ ರೆಸ್ಟೋರೆಂಟ್ ಬಳಿಗೆ ಹೋಗಿದ್ದರು. ಈ ಸಂದರ್ಭದಲ್ಲಿ ಅಲ್ಲಿಗೆ ಬಂದಿದ್ದ ವಿನೋದ್, ಸುಜೀರ್ ಮತ್ತು ಪ್ರಕಾಶ್ ಅವರು ಇನ್ನೂ ಕೆಲವು ಮಂದಿ ಅಪರಿಚಿತರ ಜತೆ ಸೇರಿಕೊಂಡು ಪ್ರವೀಣ್ ಕುಮಾರ್ ಅವರನ್ನು ಅವಾಚ್ಯವಾಗಿ ಬೈದು ಸೋಡಾ ಬಾಟಲಿ ಮತ್ತು ಕೈಯಿಂದ ಹೊಡೆದು ಕೊಲೆಗೆ ಯತ್ನಿಸಿ ಜಾತಿ ನಿಂದನೆ ಮಾಡಿದ್ದರು ಎಂದು ಆರೋಪಿಸಲಾಗಿತ್ತು. ಈ ಬಗ್ಗೆ ಉಳ್ಳಾಲ ಪೊಲೀಸರು ದಲಿತ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಿ ಬಂಧಿಸಿದ್ದರು. ಪಣಂಬೂರು ಡಿವೈಎಸ್‌ಪಿ ಆಗಿದ್ದ ಗಿರೀಶ್ ತನಿಖೆ ನಡೆಸಿ ಆರೋಪ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ಕೈಗೆತ್ತಿಕೊಂಡ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಸರ್ವೋದಯ ಶೆಟ್ಟಿಗಾರ್ ಇಬ್ಬರು ಆರೋಪಿಗಳ ಮೇಲಣ ಆರೋಪ ಸಾಬೀತಾದ ಕಾರಣ ಅವರು ಅಪರಾಧಿಗಳು ಎಂಬುದಾಗಿ ತೀರ್ಮಾನಕ್ಕೆ ಬಂದಿದ್ದಾರೆ. ಈ ಹಿನ್ನೆಲೆಯಲ್ಲಿ ವಿನೋದ್ ಮತ್ತು ಪ್ರಕಾಶ್ ಅವರನ್ನು ಐಪಿಸಿ ಸೆಕ್ಷನ್ 324, 504 ಮತ್ತು ಎಸ್‌ಸಿ ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆ ಅನ್ವಯ ಗುರುವಾರ ಪೊಲೀಸರು ಕಸ್ಟಡಿಗೆ ಪಡೆದುಕೊಂಡಿದ್ದಾರೆ.
ಈ ಪ್ರಕರಣದಲ್ಲಿ ಸರಕಾರದ ಪರವಾಗಿ ಪಬ್ಲಿಕ್ ಪ್ರಾಸಿಕ್ಯೂಟರ್ ಬಿ. ಶೇಖರ ಶೆಟ್ಟಿ ವಾದ ಮಂಡಿಸಿದ್ದರು.