ತೀರ್ಥಹಳ್ಳಿ: ತಾಲೂಕಿನ ದೇವಂಗಿ ಸಮೀಪದ ಜಟ್ಟಿನಮಕ್ಕಿ ಬಳಿ ಪಪಂ ಪೌರ ಕಾರ್ಮಿಕಳಾಗಿದ್ದ ನೇತ್ರಾವತಿ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪಿಗಳನ್ನು ಬಂಧಿಸುವಲ್ಲಿ ತೀರ್ಥಹಳ್ಳಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಮೂಡಿಗೆರೆ ಮೂಲದ ಸಂದೀಪ್ ಪ್ರಮುಖ ಆರೋಪಿ. ನೇತ್ರಾವತಿ ತಲೆಗೆ ರಾಡಿನಿಂದ ಹೊಡೆದು ಕೊಲೆ ಮಾಡಿದ್ದ ಎನ್ನಲಾಗಿದೆ. ಈತನನ್ನು ತೆಲಂಗಾಣದ ಮಲ್ಲಪಲ್ಲಿ ಎಂಬಲ್ಲಿ ಸೆರೆ ಹಿಡಿಯಲಾಗಿದೆ. ನೇತ್ರಾವತಿ ಪ್ರಿಯಕರ ಕಮ್ಮರಡಿ ರವೀಶ್‌ನನ್ನು ಈಗಾಗಲೇ ಬಂಧಿಸಲಾಗಿದೆ. ಕಮ್ಮರಡಿಯಲ್ಲಿ ಮೊಬೈಲ್ ಅಂಗಡಿ ಮಾಡಿಕೊಂಡಿದ್ದ ಚಿಪ್ಪಳಕಟ್ಟೆ ಆದರ್ಶ ಎಂಬಾತನನ್ನು ಬಂಧಿಸಲಾಗಿದೆ.
ನೇತ್ರಾವತಿ ಗಂಡನ ಸಾವಿನ ನಂತರ ಪ್ರಿಯಕರ ಕಮ್ಮರಡಿ ರವೀಶ್‌ನಿಗೆ ಹಣ ಮತ್ತು ಒಂದು ಬೈಕ್ ಕೊಡಿಸಿದ್ದಳು ಎನ್ನಲಾಗಿದೆ. ತನ್ನನ್ನು ಮದುವೆ ಆಗುವಂತೆ ಇತ್ತೀಚೆಗೆ ರವೀಶ್ ಬಳಿ ಒತ್ತಾಯಿಸಿದ್ದಾಳೆ. ಈತ ಈಗಾಗಲೇ ಒಂದು ಮದುವೆ ಆಗಿದ್ದು ಅವಳಿಂದ ತಪ್ಪಿಸಿಕೊಳ್ಳಲು ರವೀಶ್ ಮತ್ತು ಸ್ನೇಹಿತರು ಸೇರಿ ಕೊಲೆ ಮಾಡಲು ಯೋಜಿಸಿದ್ದರು.
ಬೆಂಗಳೂರಿಗೆ ಹೋಗಿ ಮದುವೆಯಾಗೋಣ ಬಾ ಎಂದು ಫೆ. 25 ರಂದು ನೇತ್ರಾವತಿಗೆ ಕರೆ ಮಾಡಿ ಕರೆಸಿ ಮೊದಲೇ ಕೊಲೆ ಸಂಚು ರೂಪಿಸಿರುವ ಯುವಕರು ಗಡಿಕಲ್ ಬಳಿಯ ಜಟ್ಟಿನಮಕ್ಕಿಯಲ್ಲಿ ರವೀಶ್ ತನ್ನ ಕಾರಿನಲ್ಲಿ ನೇತ್ರಾವತಿ ಇದ್ದ ಬೈಕಿಗೆ ಡಿಕ್ಕಿ ಹೊಡೆಸಿದ್ದಾನೆ. ಬಳಿಕ ಸಂದೀಪ್ ರಾಡಿನಿಂದ ತಲೆಗೆ ಹೊಡೆದಿದ್ದು, ನಂತರ ರಸ್ತೆ ಪಕ್ಕದಲ್ಲಿ ಲೈಟ್ ಕಂಬಕ್ಕೆ ಅಪಘಾತವಾಗಿದೆ ಎಂದು ಬಿಂಬಿಸಲು ನೇತ್ರಾವತಿಯ ಬೈಕ್ ಮತ್ತು ಶವವನ್ನು ರಸ್ತೆಯಲ್ಲಿ ಮಲಗಿಸಿ ಮಧ್ಯರಾತ್ರಿ ಘಟನೆ ಬಳಿಕ ಆರೋಪಿಗಳು ಪರಾರಿಯಾಗಿದ್ದರು. ಕೃತ್ಯಕ್ಕೆ ಎರಡು ಕಾರು ಬಳಸಿದ್ದರು. ಸಂದೀಪ್ ಆಕೆ ಬಳಿಯಿದ್ದ ಬ್ರಾಸ್ಲೆಟ್, ಚಿನ್ನದ ಸರ ಕದ್ದಿದ್ದ. ರಾಡು ಕುದುರೆಗುಂಡಿ ಬಳಿ ಹಳ್ಳದ ಸೇತುವೆಯಲ್ಲಿ ಹಾಕಿದ್ದರು ಎಂದು ಪೊಲೀಸ್ ತನಿಖೆಯಲ್ಲಿ ತಿಳಿದು ಬಂದಿದೆ.
ತೀರ್ಥಹಳ್ಳಿ ಡಿವೈಎಸ್ಪಿ ಸಂತೋಷ್ ಕುಮಾರ್, ಸಿಪಿಐ ಸಂತೋಷ ಕುಮಾರ್, ಎಸ್‌ಐ ಯಲ್ಲಪ್ಪ, ಅಪರಾಧ ವಿಭಾಗದ ಎಸ್‌ಐ ಸುಷ್ಮಾ, ಸಿಬ್ಬಂದಿಗಳಾದ ಜನಾರ್ಧನ್, ಸುಧಾಕರ್, ಕುಮಾರ್, ಸುರಭಿ ಮತ್ತು ಇತರರು ಇದ್ದರು.