Advertisement

ಮುರಳಿ ಗಾನ ವಿದ್ಯಾ ಧ್ಯಾನ

05:14 PM Mar 21, 2018 | |

“ರೋರಿಂಗ್‌ ಸ್ಟಾರ್‌’ ಶ್ರೀ ಮುರಳಿ ಅವರ ಕೇರಿಂಗ್‌ ಮಡದಿ ವಿದ್ಯಾ ಶ್ರೀಮುರಳಿ. 8 ವರ್ಷದ ಅಗಸ್ತ್ಯ ಹಾಗೂ 4 ವರ್ಷದ ಅಥೀವಾ ಎಂಬ ಇಬ್ಬರು ಮುದ್ದಾದ ಮಕ್ಕಳ ಸ್ಟ್ರಿಕ್ಟ್ ಅಮ್ಮ. “ಉಗ್ರಂ’ ಸಿನಿಮಾಕ್ಕೆ ಇವರೇ ವಸ್ತ್ರ ವಿನ್ಯಾಸಕಿ. ಶ್ರೀ ಮುರಳಿ ಮತ್ತು ವಿದ್ಯಾರ ಸ್ನೇಹ ಚಿಗುರಿದ್ದು ಕಾಲೇಜಿನಲ್ಲಿ. 10 ವರ್ಷ ಪ್ರೀತಿಸಿ, ನಂತರ ಮದುವೆಯಾದವರು. ಗಂಡನ ಈಗಿನ ಸ್ಟಾರ್‌ಡಂ ಬಗ್ಗೆ ಹೆಮ್ಮೆಯಿಂದ ಮಾತನಾಡುವ ಅವರು, “ಮುರಳಿ ಈ ಸ್ಥಾನಕ್ಕೆ ಬರಲು ತುಂಬಾ ಬೆವರು ಸುರಿಸಿದ್ದಾರೆ. ಈ ಕೀರ್ತಿಗೆ ಅವರು ಅರ್ಹರು’ ಎನ್ನುತ್ತಾರೆ. ಮಕ್ಕಳನ್ನು ಜಾಸ್ತಿ ಮುದ್ದು ಮಾಡುತ್ತಾರೆ ಮುರಳಿ ಅನ್ನೋದು ಅವರ ಕಂಪ್ಲೆಂಟ್‌…

Advertisement

* ನಿಮ್ಮದು ಲವ್‌ ಮ್ಯಾರೇಜಾ? ಯಾರು ಮೊದಲು ಪ್ರಪೋಸ್‌ ಮಾಡಿದ್ದು?
ಶೇಷಾದ್ರಿಪುರಂ ಕಾಲೇಜ್‌ನಲ್ಲಿ ನಾನು ಫ‌ಸ್ಟ್‌ ಪಿಯುಸಿ ಓದುವಾಗ ಅವರು ಸೆಕೆಂಡ್‌ ಪಿಯುನಲ್ಲಿದ್ದರು. 1999ರಲ್ಲಿ ಅವರೇ ನನಗೆ ಪ್ರಪೋಸ್‌ ಮಾಡಿದ್ದು. ನಾವು ಮದುವೆಯಾಗಿದ್ದು 2008ರಲ್ಲಿ. ನಮ್ಮದು ಒಂಬತ್ತೂವರೆ ವರ್ಷಗಳ ಲವ್‌.  

* ಲವ್‌ ಮಾಡುತ್ತಿದ್ದ ದಿನಗಳು ಹೇಗಿರುತ್ತಿದ್ದವು. ಕದ್ದು ಮುಚ್ಚಿ ಓಡಾಡುತ್ತಿದ್ರಾ?
ಮೊದಲ ಒಂದು ವರ್ಷ ಮಾತ್ರ ಕದ್ದು ಮುಚ್ಚಿ ಓಡಾಡಿದೆವು. ಆಗೆಲ್ಲಾ ಮೊಬೈಲ್‌, ಇಂಟರ್‌ನೆಟ್‌ ಏನೂ ಇರಲಿಲ್ಲ. ನಾವು ಲ್ಯಾಂಡ್‌ಲೈನ್‌ ಫೋನಿಗೆ 2 ರಿಂಗ್‌ ಕೊಡುವ ಮೂಲಕ ಕಾಲ್‌ ಮಾಡುವಂತೆ ಸಂದೇಶ ನೀಡುತ್ತಿದ್ದೆವು. ಅದಾದ ಬಳಿಕ ಮನೆಯವರಿಗೆ ನಮ್ಮ ವಿಷಯ ತಿಳಿಯಿತು. ನಮ್ಮ ಮನೆಯಲ್ಲಿ ಮೊದಲು ವಿರೋಧಿಸಿದರು. ಯಾವಾಗ ಮುರಳಿ ಚಿನ್ನೇಗೌಡರ ಮಗ ಎಂದು ತಿಳಿಯಿತೋ ಅಪ್ಪ ಕೂಡ ಒಪ್ಪಿದರು. ನಮ್ಮಪ್ಪ ಮತ್ತು ಮುರಳಿ ಅಪ್ಪ ತುಂಬಾ ಹಳೆಯ ಸ್ನೇಹಿತರು. ಆಮೇಲಾಮೇಲೆ ಹೇಗಾಯಿತು ಎಂದರೆ, ಮುರಳಿ ನಮ್ಮ ಮನೆಗೇ ಬಂದು ನಮ್ಮ ಮನೆಯವರಿಗೆ ಹೇಳಿಯೇ ನನ್ನನ್ನು ಹೊರಗೆ ಕರೆದುಕೊಂಡು ಹೋಗುತ್ತಿದ್ದರು. ನಾವು ವಾಪಸಾಗುವುದು ತಡವಾದರೆ, ಮುರಳಿ ನಮ್ಮಮ್ಮನಿಗೆ ಫೋನ್‌ ಮಾಡಿ ತಡವಾಗುತ್ತೆ ಅಂತ ಹೇಳುತ್ತಿದ್ದರು.

* ಪ್ರೀತಿಸುತ್ತಿದ್ದಾಗ ನೀವು ಶ್ರೀ ಮುರಳಿಯವರಿಗೆ ಕೊಟ್ಟ ಉಡುಗೊರೆಗಳಲ್ಲಿ ಯಾವ ಉಡುಗೊರೆ ಅವರಿಗೆ ಹೆಚ್ಚು ಪ್ರಿಯವಾದದ್ದು?
ನಾನು 2ನೇ ವರ್ಷದ ಡಿಗ್ರಿ ಓದುವಾಗ ಮುರಳಿ ನಟನೆ ತರಬೇತಿಗೆಂದು ಮುಂಬೈಗೆ ಹೋದರು. ಅಲ್ಲಿಂದ ಬರುತ್ತಿದ್ದಂತೆ ಅವರಿಗೆ “ಚಂದ್ರ ಚಕೋರಿ’ ಸಿನಿಮಾ ಆಫ‌ರ್‌ ಸಿಕ್ಕಿತು. ಅಲ್ಲಿಂದ ಹಲವಾರು ದಿನಗಳ ಮಟ್ಟಿಗೆ ಬಿಟ್ಟಿರಲೇಬೇಕಾದ ಅನಿವಾರ್ಯತೆ ಇತ್ತು. ಆಗ ಪತ್ರಗಳನ್ನು ಬರೆಯುತ್ತಿದ್ದೆವು. ಅವೆಲ್ಲಾ ಈಗಲೂ ನಮ್ಮ ಬಳಿ ಇವೆ. ನಾನು ಅವರ ಹೆಸರನ್ನು ನನ್ನ ಕೈಮೇಲೆ ಟ್ಯಾಟೂ ಹಾಕಿಸಿಕೊಂಡು ಅವರಿಗೆ ಸರ್‌ಪ್ರೈಸ್‌ ಕೊಟ್ಟಿದ್ದೆ. ಆಗ ಅವರು ತುಂಬಾ ಭಾವುಕರಾಗಿದ್ದರು. 

* ನೀವು ಮುರಳಿಯವರಲ್ಲಿ ಕಂಡುಕೊಂಡ ಬೆಸ್ಟ್‌ ಕ್ವಾಲಿಟಿ ಏನು? 
ಮುರಳಿ ಒರಟು ಹುಡುಗನಂತೆ ಕಾಣುತ್ತಾರೆ. ಆದರೆ, ಅವರದ್ದು ಮಗುವಿನಂಥ ಮನಸ್ಸು. ಮನಸ್ಸಲ್ಲಿ ಏನಿದೆಯೋ ಅದನ್ನೇ ಹೇಳುತ್ತಾರೆ. ಬೂಟಾಟಿಕೆ ಅವರ ವ್ಯಕ್ತಿತ್ವದಲ್ಲಿ ಸ್ವಲ್ಪವೂ ಇಲ್ಲ. ಎಲ್ಲಕ್ಕಿಂತ ವಿಶೇಷವಾಗಿ ನಾನು ಗುರುತಿಸಿದ್ದು, ಅವರು ತುಂಬಾ ಚೆನ್ನಾಗಿ ಬರೆಯುತ್ತಾರೆ. ತುಂಬಾ ರೊಮ್ಯಾಂಟಿಕ್‌ ಆಗಿ ಪತ್ರಗಳನ್ನು ಬರೆಯುತ್ತಿದ್ದರು. ಬರವಣಿಗೆಯನ್ನು ಗಂಭೀರವಾಗಿ ಪರಿಗಣಿಸಿ ಎಂದು ನಾನು ಸದಾ ಅವರಿಗೆ ಹೇಳುತ್ತಿದ್ದೆ.

Advertisement

* ನಿಮ್ಮ ತಮ್ಮ ಕೂಡ ಚಿತ್ರ ನಿರ್ದೇಶಕರಾಗಿದ್ದಾರೆ. “ಉಗ್ರಂ’ನಂಥ ದೊಡ್ಡ ಹಿಟ್‌ ಚಿತ್ರ ಕೊಟ್ಟರು. ಅವರ ಬಗ್ಗೆ ಏನು ಹೇಳ್ತೀರ?
ನಮ್ಮದು ಹೋಟೆಲ್‌ ಉದ್ಯಮ. ನನ್ನ ತಂದೆ ಹೈಲ್ಯಾಂಡ್ಸ್‌ ಹೋಟೆಲ್‌ ಮಾಲೀಕರು. ಸಿನಿಮಾ ಕ್ಷೇತ್ರಕ್ಕೆ ಬಂದವರಲ್ಲಿ ನನ್ನ ತಮ್ಮ ಪ್ರಶಾಂತ್‌ ಮೊದಲಿಗ. ಪ್ರಶಾಂತ್‌ “ಉಗ್ರಂ’ ಚಿತ್ರ ನಿರ್ದೇಶಿಸಿದ್ದೇ ಮುರಳಿ ಒಬ್ಬ ಅತ್ಯುತ್ತಮ ನಟ ಎಂಬುದನ್ನು ಸಾಬೀತು ಪಡಿಸಲು. ಮುರಳಿ ಮತ್ತು ಪ್ರಶಾಂತ್‌ ಸಂಬಂಧ ಹೇಗಿದೆ ಎಂದರೆ ಪ್ರಶಾಂತ್‌ ಅಪ್ಪ , ಮುರಳಿ ಮಗ ಎಂಬಂತಿದೆ. 

* ಮುರಳಿಯನ್ನು ಎಂಥ ಪಾತ್ರಗಳಲ್ಲಿ ನೋಡಲು ಬಯಸುತ್ತೀರಿ? 
“ಉಗ್ರಂ’ ಚಿತ್ರ ಬಂದ ಬಳಿಕ ಮುರಳಿಯನ್ನು ಆ್ಯಕ್ಷನ್‌ ಸ್ಟಾರ್‌ ಎಂಬಂತೆ ಬಿಂಬಿಸಲಾಗುತ್ತಿದೆ. ಅವರಿಗೆ ಬರುತ್ತಿರುವ ಪಾತ್ರಗಳೆಲ್ಲವೂ ಆ್ಯಕ್ಷನ್‌ ಪಾತ್ರಗಳೇ. ಆದರೆ, ನಾನು ಅವರನ್ನು ರೋಮ್ಯಾಂಟಿಕ್‌ ಚಿತ್ರಗಳಲ್ಲಿ ನೋಡಲು ಬಯಸುತ್ತೇನೆ. ಸುಂದರವಾದ ಲೊಕೇಶನ್‌ನಲ್ಲಿ ಡ್ಯುಯೆಟ್‌ ಹಾಡೋದನ್ನು ನೋಡಲು ಇಷ್ಟ ಪಡ್ತೀನಿ. “ಕಂಠಿ’ ಚಿತ್ರದಲ್ಲಿ ಮುರಳಿ ಮತ್ತು ರಮ್ಯಾ ಡುಯೆಟ್‌ ಹಾಡ್ತಾರಲ್ಲಾ ಆ ರೀತಿ. ಅವರಿಗೆ ಒಂದು ಔಟ್‌ ಆ್ಯಂಡ್‌ ಔಟ್‌ ರೊಮ್ಯಾಂಟಿಕ್‌ ಸಿನಿಮಾ ಮಾಡಿ ಅಂತ ಹೇಳ್ತಾನೆ ಇರಿ¤àನಿ.

* ಯಾವ ವಿಚಾರಕ್ಕೆ ನೀವಿಬ್ಬರೂ ಹೆಚ್ಚು ಜಗಳ ಆಡ್ತೀರ?
ನಮ್ಮಿಬ್ಬರ ನಡುವೆ ಜಗಳ ಬರುವುದೇ ಮಕ್ಕಳ ವಿಚಾರಕ್ಕೆ. ಮುರಳಿ ಮಕ್ಕಳನ್ನು ತುಂಬಾ ಮುದ್ದು ಮಾಡ್ತಾರೆ. ಅವರು ಏನೇ ಕೇಳಿದರೂ ಅದಕ್ಕೆ “ಯೆಸ್‌’ ಎನ್ನುತ್ತಾರೆ. “ನೀವು ಮುದ್ದು ಮಾಡಿ ಮಕ್ಕಳನ್ನು ಹಾಳು ಮಾಡ್ತಾ ಇದ್ದೀರ’ ಅನ್ನೋದು ನನ್ನ ಕಂಪ್ಲೆಂಟ್‌. ನಾನು ಮಕ್ಕಳ ವಿಚಾರದಲ್ಲಿ ಸ್ಟ್ರಿಕ್ಟ್ ಆಗಿ ಇರುವುದು ಅವರಿಗೆ ಇಷ್ಟ ಇಲ್ಲ. ಅದಕ್ಕೆ, “ಯಾವಾಗ್ಲೂ ಮಕ್ಕಳ ಮೇಲೆ ರೇಗುತ್ತಾ ಇರಬೇಡ. ಅವರಿಷ್ಟದಂತೆ ಇರಲು ಬಿಡು’ ಅಂತಾರೆ. ಅವರೇನೋ ಮಕ್ಕಳನ್ನು ಮುದ್ದು ಮಾಡುತ್ತಾರೆ. ಆದರೆ, ಅವರು ಶೂಟಿಂಗ್‌ಗೆ ಹೋದಾಗ ಮಕ್ಕಳನ್ನು ನಿಯಂತ್ರಿಸುವ ಕಷ್ಟ ನನ್ನ ಮೇಲೆ ತಾನೇ ಬೀಳ್ಳೋದು?

* ಮುರಳಿ ಅವರು ಶೂಟಿಂಗ್‌ ಸಲುವಾಗಿ ಮನೆಯಿಂದ ಹಲವಾರು ದಿನಗಳ ಕಾಲ ಹೊರಗೆ ಇರಬೇಕಾಗುತ್ತೆ. ಆಗೆಲ್ಲಾ ಮಕ್ಕಳನ್ನು ಹೇಗೆ ನಿಭಾಯಿಸುತ್ತೀರ?
ಮಕ್ಕಳಿಬ್ಬರೂ ಅವರನ್ನು ತುಂಬಾ ಹಚ್ಚಿಕೊಂಡಿದ್ದಾರೆ. ಮಗನನ್ನು ಹೇಗಾದರೂ ನಿಭಾಯಿಸಬಹುದು. ಆದರೆ, ಮಗಳನ್ನು ನಿಭಾಯಿಸುವುದು ಕಷ್ಟ. ಮುರಳಿ ಮನೆಯಲ್ಲಿದ್ದರೆ ಅವಳು ಅವರ ಬಾಲದಂತೆ ಹಿಂದೆ ಮುಂದೆ ಸುತ್ತುತ್ತಿರುತ್ತಾಳೆ. ಅವರೇ ಅವಳಿಗೆ ಊಟ ಮಾಡಿಸಬೇಕು, ಮಲಗಿಸಬೇಕು. ಹಗಲೆಲ್ಲಾ ಪರವಾಗಿಲ್ಲ. ಆದರೆ, ರಾತ್ರಿ ಮಲಗುವ ಟೈಂಗೆ ಅಪ್ಪ ಬೇಕೇ ಬೇಕು ಅಂತ ಹಠ ಹಿಡಿಯುತ್ತಾಳೆ. ಅಪ್ಪ ಊಟ ಮಾಡಿಸದಿದ್ದರೆ ಊಟ ಮಾಡಲ್ಲ ಅಂತ ಉಪವಾಸ ಮಾಡ್ತಾಳೆ. ಆಗೆಲ್ಲಾ ಅವಳನ್ನು ಸಮಾಧಾನಿಸೋದು ಕಷ್ಟ. 

* ನಿಮ್ಮಿಬ್ಬರಲ್ಲಿ ಯಾರಿಗೆ ಕೋಪ ಜಾಸ್ತಿ?
ಇಬ್ಬರಿಗೂ ಜಾಸ್ತಿಯೇ. ಆದರೆ ಮುರಳಿ ಈಗೀಗ ಕೋಪ ಕಮ್ಮಿ ಮಾಡಿಕೊಂಡಿದ್ದಾರೆ. ನಾನು ಮಾತ್ರ ನನ್ನ ಸಿಡುಕುವ ಗುಣವನ್ನು ಬದಲಾಯಿಸಿಕೊಂಡಿಲ್ಲ. 

* ನೀವು ತುಂಬಾ ಶಾಪಿಂಗ್‌ ಮಾಡ್ತೀರ? ನಿಮ್ಮ ಶಾಪಿಂಗ್‌ ಒಡನಾಡಿ ಯಾರು?
ನಾನು ದೊಡ್ಡ ಶಾಪರ್‌. ಫ‌ುಟ್‌ವೇರ್‌, ಬ್ಯಾಗ್‌ಗಳನ್ನು ಎಷ್ಟು ಖರೀದಿಸಿದರೂ ಸಮಾಧಾನವಿಲ್ಲ. ನಾನೊಬ್ಬಳೇ ಶಾಪಿಂಗ್‌ ಮಾಡುವುದು ನನಗೆ ಆರಾಮದಾಯಕ. ಆದರೆ ಒಡವೆ, ಸಾಂಪ್ರದಾಯಕ ಉಡುಗೆ ಖರೀದಿಸುವುದಿದ್ದರೆ ಮುರಳಿಯನ್ನು ಜೊತೆಗೆ ಕರೆದುಕೊಂಡು ಹೋಗುತ್ತೇನೆ. ಆಭರಣ ಸೆಲೆಕ್ಟ್ ಮಾಡೋದ್ರಲ್ಲಿ ಅವರು ಎಕ್ಸ್‌ಪರ್ಟ್‌. 

* ಮನೆಯಲ್ಲಿ ಹುಟ್ಟುಹಬ್ಬ, ಆ್ಯನಿವರ್ಸರಿ ಆಚರಣೆಗಳು ಹೇಗಿರುತ್ತವೆ?
ನಾವು ಈಗಲೂ ಹುಟ್ಟುಹಬ್ಬ, ಮದುವೆ ವಾರ್ಷಿಕೋತ್ಸವಗಳಲ್ಲಿ ಪತ್ರಗಳನ್ನು ಬರೆದು ಉಡುಗೊರೆ ನೀಡುತ್ತೇವೆ. ಮುರಳಿ ಹುಟ್ಟುಹಬ್ಬ ಬಹುತೇಕ ಅವರ ಫ್ಯಾನ್‌ಗಳ ಜೊತೆಯೇ ನಡೆಯುತ್ತದೆ. ಅವರಿಗೆ ಕುಟುಂಬದವರ ಜೊತೆ ಹುಟ್ಟುಹಬ್ಬ ಆಚರಿಸೋದು ಅಂದರೆ ಭಾರೀ ಖುಷಿ. ಯಾರದ್ದಾದರೂ ಹುಟ್ಟುಹಬ್ಬದಂದು ಶೂಟಿಂಗ್‌ಗಾಗಿ ಅವರು ದೂರ ಹೋಗಿದ್ದರೆ ನಮಗೆಲ್ಲಾ ನಿರಾಸೆಯಾಗುತ್ತದೆ. 

* ನೀವಿಬ್ಬರೂ ಪ್ರೀತಿಸುತ್ತಿದ್ದಾಗ ನೋಡಿದ ಮೊದಲ ಸಿನಿಮಾ ಯಾವುದು?
“ತಾಲ್‌’.

* ಮುರಳಿ ಅವರ ಚೀಟ್‌ಮೀಲ್‌ ಡೇ ಇದ್ದಾಗ ಮನೆಯಲ್ಲಿ ವಿಶೇಷವಾಗಿ ಏನು ತಯಾರಿಸುತ್ತೀರ?
ಮುರಳಿ ಅಪ್ಪಟ ಮನೆ ಊಟವನ್ನೇ ಇಷ್ಟ ಪಡೋದು. ಅವರಮ್ಮ ಮಾಡುವ ಕೋಳಿಸಾರು ಅವರಿಗೆ ತುಂಬಾ ಇಷ್ಟ. ದಿನಾ ಬಿರಿಯಾನಿ ಕೊಟ್ಟರೂ ತಿನ್ನುತ್ತಾರೆ. ನನಗೂ ಬಿರಿಯಾನಿ ಇಷ್ಟ. ಅವರ ಚೀಟ್‌ಮೀಲ್‌ ದಿನದಂದು ಬಿರಿಯಾನಿ ಮಿಸ್‌ ಆಗೋದೇ ಇಲ್ಲ. 

* ಮುರಳಿ ಅಭಿನಯದ ಯಾವ ಚಿತ್ರ ನಿಮ್ಮ ಆಲ್‌ಟೈಮ್‌ ಫೇವರಿಟ್‌? ಏಕೆ?
ಚಂದ್ರ ಚಕೋರಿ. ಅದು ಅವರ ಮೊದಲ ಸಿನಿಮಾ. ಮೂಗನ ಪಾತ್ರದಲ್ಲಿ ನಟಿಸಿದ ಮೊದಲ ಚಿತ್ರದಲ್ಲೇ ಅತ್ಯುತ್ತಮ ಅಭಿನಯ ನೀಡಿದ್ದರು. 

* ನಿಮ್ಮ ಆಲ್‌ಟೈಮ್‌ ಫೇವರಿಟ್‌ ನಟರು?
ಕಮಲ್‌ ಹಾಸನ್‌ ಮತ್ತು ಶಿವಣ್ಣ

ಮಗಳಿಗೇ ಜಾಸ್ತಿ ಹೊಟ್ಟೆಕಿಚ್ಚಾಗುತ್ತೆ…: ಹಲವರು ನನಗೆ ಕೇಳ್ತಾರೆ: “ತೆರೆಮೇಲೆ ಮುರಳಿ ಹೀರೋಯಿನ್‌ಗಳ ಜೊತೆ ರೊಮಾನ್ಸ್‌ ಮಾಡೋದನ್ನು ನೋಡಿ ನಿಮಗೆ ಅಸೂಯೆ ಆಗೋದಿಲ್ವಾ?’ ಅಂತ. ನಾನು ಜೋರಾಗಿ ನಕ್ಕು ಬಿಡ್ತೀನಿ. ಅವರು ರೊಮ್ಯಾನ್ಸ್‌ ಮಾಡುವುದನ್ನು ನೋಡಿ ನನಗೆ ಯಾವತ್ತೂ, ಏನೂ ಅನ್ನಿಸಿಲ್ಲ. ಆದರೆ, ಅವರು ಹೀರೊಯಿನ್‌ಗಳ ಜೊತೆ ತೆರೆ ಹಂಚಿಕೊಳ್ಳುವುದನ್ನು ನೋಡಿದರೆ ನನ್ನ ಮಗಳು ಜಗಳ ಆಡ್ತಾಳೆ. “ರಥಾವರ’ ಸಿನಿಮಾ ನೋಡಿದಾಗಿನಿಂದ ರಚಿತಾ ರಾಮ್‌ ಕಂಡರೆ ಅವಳಿಗೆ ಆಗುವುದಿಲ್ಲ. ಅವರ ಹಾಡುಗಳು ಟಿ.ವಿ.ಯಲ್ಲಿ ಬರುತ್ತಿದ್ದರೂ ಅವಳು ಚಾನೆಲ್‌ ಬದಲಿಸುವಂತೆ ಹಠ ಹಿಡಿಯುತ್ತಾಳೆ. ಅದಕ್ಕೆ ನಾನು ಮುರಳಿಗೆ ಹೇಳ್ತಾ ಇರುತ್ತೇನೆ, “ನಿಮಗೆ ಕೂಲ್‌ ಹೆಂಡತಿ ಸಿಕ್ಕಿದ್ದಾಳೆ. ಅದಕ್ಕೇ ಸ್ಟ್ರಿಕ್ಟ್ ಮಗಳು ಹುಟ್ಟಿದ್ದಾಳೆ’ ಅಂತ.

ನಮ್ಮತ್ತೆ ಅಂದ್ರೆ ನಂಗಿಷ್ಟ…: ಮನೆಯಲ್ಲಿ ನಮ್ಮ ಅತ್ತೆ ನನಗೆ ಫೇವರಿಟ್‌. ನಮ್ಮ ಅತ್ತೆಯಂಥ ಅತ್ತೆ ಎಲ್ಲರಿಗೂ ಸಿಗಲಿ ಎಂದೇ ನಾನು ಹಾರೈಸುತ್ತೇನೆ. ಅವರು ತುಂಬಾ ಹಾಸ್ಯ ಸ್ವಭಾವದವರು. ಯಾವುದಾದರೂ ಘಟನೆಗಳನ್ನು ನೆನಪಿಸಿಕೊಂಡು ಸ್ವಾರಸ್ಯವಾಗಿ ಹೇಳುತ್ತಾರೆ. ಅತ್ತೆ, ಮಾವ ಇಬ್ಬರೂ ತುಂಬಾ ಧಾರ್ಮಿಕ ಮನೋಭಾವದವರು. ಪ್ರತಿ ದಿನ ಬೆಳಗ್ಗೆ ನಮ್ಮ ಮನೆಯಲ್ಲಿ ದೇವರನಾಮಗಳು ಡಿವಿಡಿ ಪ್ಲೇಯರ್‌ನಿಂದ ತೇಲಿಬರುತ್ತಿರುತ್ತವೆ. ಅತ್ತೆ ಪೂಜೆಗೆ ಹೂವು, ಬತ್ತಿಗಳನ್ನು ಸಿದ್ಧ ಮಾಡಿಕೊಡುತ್ತಿರುತ್ತಾರೆ. ಮಾವ ಪೂಜೆ ಮಾಡುತ್ತಿರುತ್ತಾರೆ. ಇದು ನಮ್ಮ ಮನೆಯಲ್ಲಿ ಪ್ರತಿ ಬೆಳಗ್ಗೆಯ ದೃಶ್ಯ. ಮಕ್ಕಳು ಅಜ್ಜಿ ತಾತರನ್ನು ನೋಡಿ ಸಂಸ್ಕೃತಿ, ಸಂಪ್ರದಾಯ ಕಲಿಯುತ್ತಿದ್ದಾರೆ. 

ಅವನ ಸಹವಾಸ ಬಿಡು ಅಂದಿದ್ರು!: ನಾನು ಮೊದಲ ಬೆಂಚ್‌ ವಿದ್ಯಾರ್ಥಿನಿಯಾಗಿದ್ದೆ. ಒಂದೇ ಒಂದು ಕ್ಲಾಸ್‌ ಕೂಡ ಬಂಕ್‌ ಮಾಡುತ್ತಿರಲಿಲ್ಲ. ಯಾವಾಗ ಮುರಳಿ ಸ್ನೇಹವಾಯಿತೋ ಆಗಿಂದ ನಾನೂ ಅವರಂತೆಯೇ ಲಾಸ್ಟ್‌ ಬೆಂಚ್‌ ಸ್ಟೂಡೆಂಟ್‌ ಆದೆ. ಮುರಳಿ ಬಹಳ ಚೇಷ್ಟೆಯ ವಿದ್ಯಾರ್ಥಿ. ಕ್ಲಾಸ್‌ ಬಂಕ್‌ ಮಾಡುವುದು, ಸುತ್ತುವುದು ಇಂಥದ್ದೇ ಮಾಡುತ್ತಿದ್ದರು. ಓದುವುದರಲ್ಲೂ ಅಷ್ಟಕ್ಕಷ್ಟೇ. ನಾನು ಅವರ ಸ್ನೇಹ ಮಾಡಿರುವುದು, ಅವರ ಜೊತೆ ಸುತ್ತಾಡುವುದು ನಮ್ಮ ಕಾಲೇಜಿನ ಪ್ರಿನ್ಸಿಪಾಲ್‌ ಮತ್ತು ಇತರ ಲೆಕ್ಚರರ್‌ಗಳಿಗೆ ಗೊತ್ತಾಗಿತ್ತು. ಅವರೆಲ್ಲಾ ನನ್ನನ್ನು ಕರೆದು “ನೀನು ಚೆನ್ನಾಗಿ ಓದ್ತಾ ಇರೊ ಹುಡುಗಿ. ಮುರಳಿ ಜೊತೆ ಸೇರಿ ಹಾಳಾಗಬೇಡ’ ಅಂತ ಬುದ್ಧಿ ಹೇಳುತ್ತಿದ್ರು.

* ಮುರಳಿ ತುಂಬಾ ಚೆನ್ನಾಗಿ ಬರೀತಾರೆ
* ರೊಮ್ಯಾಂಟಿಕ್‌ ಪಾತ್ರಗಳಲ್ಲಿ ಅವರನ್ನ ನೋಡೋ ಆಸೆ
* ನಾವು ಜಗಳ ಆಡೋದೇ ಮಕ್ಕಳ ವಿಷಯಕ್ಕೆ
* ಮುರಳಿಯ ಡುಯಟ್‌ ಹಾಡುಗಳೆಂದ್ರೆ ಮಗಳಿಗೆ ಆಗೋಲ್ಲ

* ಚೇತನ ಜೆ.ಕೆ.

Advertisement

Udayavani is now on Telegram. Click here to join our channel and stay updated with the latest news.

Next