ಮುನ್ನಾರ್(ಕೇರಳ): ಬೆಕ್ಕಿನ ಮರಿಗಳಿಗೆ ಹುಲಿಯ ಬಣ್ಣ ಬಳಿದು ಹುಲಿ ಮರಿ ಎಂದು ಮಾರಾಟ ಮಾಡಲು ಯತ್ನಿಸಿದ ಆರೋಪದಲ್ಲಿ ತಮಿಳುನಾಡು ಮೂಲದ ಯುವಕನೊಬ್ಬನನ್ನು ಕೇರಳದ ಇಡುಕ್ಕಿಯಲ್ಲಿ ಬಂಧಿಸಿರುವ ಘಟನೆ ತಡವಾಗಿ ಬೆಳಕಿಗೆ ಬಂಧಿದೆ.
ತಮಿಳುನಾಡಿನ ಗಡಿ ಭಾಗದ ಗ್ರಾಮವಾದ ತಿರುವಣ್ಣಾಮಲಾದ ಅರಣಿ ನಿವಾಸಿ ಪಾರ್ಥಿಬನ್ (24ವರ್ಷ) ಎಂಬಾತನನ್ನು ಕೇರಳ ಪೊಲೀಸರು ಬಂಧಿಸಿದ್ದಾರೆ.
ತನ್ನ ಬಳಿ ಮೂರು ತಿಂಗಳ ಮೂರು ಹುಲಿ ಮರಿಗಳಿದ್ದು, ಅವುಗಳನ್ನು ಮಾರಾಟ ಮಾಡುವುದಾಗಿ ಪಾರ್ಥಿಬನ್ ವಾಟ್ಸಪ್ ಮೆಸೇಜ್ ಕಳುಹಿಸಿದ್ದ. ಅಲ್ಲದೇ ಪ್ರತಿ ಹುಲಿ ಮರಿಗೆ 25 ಲಕ್ಷ ರೂಪಾಯಿ ನೀಡಬೇಕೆಂದು ಬೇಡಿಕೆ ಇಟ್ಟಿದ್ದ. ಹುಲಿ ಮರಿಯನ್ನು ಖರೀದಿಸಲು ಮನೆಗೆ ಬಂದವರ ಬಳಿಯೂ 25 ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟಿದ್ದ ಎಂದು ವರದಿ ತಿಳಿಸಿದೆ.
ಹುಲಿ ಮರಿ ಮಾರಾಟಕ್ಕಿದೆ ಎಂಬ ವಾಟ್ಸಪ್ ಸಂದೇಶ ಅರಣ್ಯ ಇಲಾಖೆಗೂ ತಲುಪಿಬಿಟ್ಟಿತ್ತು. ಕೊನೆಗೆ ಅರಣ್ಯ ಇಲಾಖೆ ಅಧಿಕಾರಿಗಳು ತನ್ನನ್ನು ಹುಡುಕುತ್ತಿದ್ದಾರೆ ಎಂಬ ವಿಷಯ ತಿಳಿದು ಪಾರ್ಥಿಬನ್ ನಾಪತ್ತೆಯಾಗಿದ್ದ. ನಂತರ ಅರಣ್ಯಾಧಿಕಾರಿಗಳು ಪಾರ್ಥಿಬನ್ ಮನೆಯನ್ನು ಶೋಧಿಸಿದಾಗ ಯಾವುದೇ ಹುಲಿಮರಿ ಪತ್ತೆಯಾಗಿಲ್ಲವಾಗಿತ್ತು.
ಸ್ಥಳೀಯ ಪೊಲೀಸರ ನೆರವಿನೊಂದಿಗೆ ಪಾರ್ಥಿಬನ್ ನನ್ನು ಬಂಧಿಸಲಾಗಿತ್ತು. ವಿಚಾರಣೆ ವೇಳೆ ಬೆಕ್ಕಿನ ಮರಿಗೆ ಹುಲಿ ಬಣ್ಣ ಬಳಿದಿರುವುದನ್ನು ಒಪ್ಪಿಕೊಂಡಿದ್ದ. ಈ ಪ್ರಕರಣದಲ್ಲಿ ಯಾರೆಲ್ಲಾ ಶಾಮೀಲಾಗಿದ್ದಾರೆ ಎಂಬ ಬಗ್ಗೆ ಅರಣ್ಯಾಧಿಕಾರಿಗಳು ಮತ್ತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ವರದಿ ತಿಳಿಸಿದೆ.