ಬೆಂಗಳೂರು: ವಿಧಾನಸಭೆ ಚುನಾವಣೆ ಕಾವು ಏರುತ್ತಿದ್ದಂತೆ ಸಚಿವ ಮುನಿರತ್ನ ಅವರು ವಿವಾದವೊಂದರಲ್ಲಿ ಸಿಲುಕಿಕೊಂಡಿದ್ದಾರೆ. ಕನ್ನಡಿಗರ ಮೇಲೆ ಹಲ್ಲೆ ನಡೆಸುವಂತೆ ಮುನಿರತ್ನ ಚುನಾವಣಾ ಪ್ರಚಾರದ ಸಮಯದಲ್ಲಿ ಕರೆ ನೀಡಿದ್ದಾರೆ ಎಂದು ಆರೋಪಿಸಲಾಗಿದ್ದು, ಕಾಂಗ್ರೆಸ್ ನಾಯಕಿ ಕುಸುಮಾ ಹನುಮಂತರಾಯಪ್ಪ ದೂರು ನೀಡಿದ್ದಾರೆ.
ರಾಜರಾಜೇಶ್ವರಿ ನಗರದ ಖಾತಾನಗರದಲ್ಲಿ ತಮಿಳು ಭಾಷಿಕರನ್ನು ಉದ್ದೇಶಿಸಿ ಮಾತನಾಡುವ ವೇಳೆ ಮುನಿರತ್ನ ಅವರು ಕನ್ನಡಿಗರ ಮೇಲೆ ಹಲ್ಲೆ ನಡೆಸಲು ಪ್ರಚೋದಿಸಿದ್ದಾರೆ ಎಂದು ರಾಜರಾಜಜೇಶ್ವರಿ ನಗರದ ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ದೂರಿನಲ್ಲಿ ಹೇಳಿದ್ದಾರೆ.
ಇದನ್ನೂ ಓದಿ:ಮುಂಬೈ-ಚೆನ್ನೈ ಅಲ್ಲ, ಐಪಿಎಲ್ ವಿಜೇತರ ಬಗ್ಗೆ ಭವಿಷ್ಯ ನುಡಿದ ಮೈಕಲ್ ವಾನ್
ಮುನಿರತ್ನ ಭಾಷಣದ ವಿಡಿಯೋ ವೈರಲ್ ಆಗಿದ್ದು, ಅದರಲ್ಲಿ “ಯಾರದರೂ ಒಳಗಡೆ ಬಂದರೆ ಓಡಾಡಿಸಿಕೊಂಡು ಹೊಡೆಯಿರಿ, ಮಿಕ್ಕಿದ್ದು ನಾನು ನೋಡ್ಕೋತೀನಿ. ಯಾವ ರೀತಿ ಹೊಡೆಯಬೇಕು ಎಂದರೆ ಅವರು ತಿರುಗಿ ನೋಡಬಾರದು. ಯಾರ್ಯಾರು ಹೊಡೆತೀರಾ ಕೈ ಎತ್ತಿ ನೋಡೋಣ, ನಾಳೆ ನಮ್ದು, ಯಾವಾಗ ನಮ್ದು? ನಾಳೆ ವೋಟು ಹಾಕ್ತೀರಲ್ಲ ಆ ನಾಳೆ ನಮ್ದು” ಎಂದು ಹೇಳಿರುವುದು ದಾಖಲಾಗಿದೆ.
ಸದ್ಯ ಕುಸುಮಾ ಅವರು ಈ ವಿಡಿಯೋದೊಂದಿಗೆ ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾರೆ.