ಇವರೂ ರಾತ್ರಿಗಳನ್ನು ಕಂಪೆನಿಗಳಿಗೆ ಒತ್ತೆ ಇಟ್ಟು ಸಾಫ್ಟ್ವೇರ್ ಎಂಜಿನಿಯರ್ ಅಂತ ಅನಿಸಿಕೊಂಡವರು ಕೆಂಗೇರಿಯ ಅಗರದ ಈ ಮುನಿಮಾರಪ್ಪ. ಎಲ್ಲ ಐಟಿ ಉದ್ಯೋಗಿಗಳಂತೆ ಲೈಫು ಇಷ್ಟೇನೇ ಅಂತ ಅಂದುಕೊಂಡು ಇದ್ದು ಬಿಡಬಹುದಿತ್ತು. ಅದರೆ ಸಾಫ್ಟ್ವೇರ್ ಅನ್ನು ತೊರೆದು, ಅದಕ್ಕಿಂತ ಹೆಚ್ಚು ಆದಾಯ ಕೃಷಿಯಲ್ಲಿ ಪಡೆಬಹುದು ಅನ್ನೋದನ್ನು ತೋರಿಸಿದ್ದಾರೆ.
“ತಿಂಗಳಿಗೆ ಲಕ್ಷ ರೂಪಾಯಿ ಸಂಬಳ. ಆದರೆ, ಆ ಹಣ ಖರ್ಚು ಮಾಡಲಿಕ್ಕೇ ಟೈಮ್ ಇರಲಿಲ್ಲ. ಬೆಳಗಾದರೆ ಅಮೇರಿಕ, ಇಂಗ್ಲೆಂಡ್ ಪ್ರತಿನಿಧಿಗಳೊಂದಿಗೇ ಮಾತುಕತೆ ಇರುತ್ತಿತ್ತು. ಮನೆಯವರೊಂದಿಗೆ ವಾರಕ್ಕೊಮ್ಮೆ ಕಾಲ ಕಳೆಯಲು ಪುರಸೊತ್ತು ಇರಲಿಲ್ಲ. ಈ ವೈಪರೀತ್ಯ ಸಣ್ಣ ವಯಸ್ಸಿನಲ್ಲೇ ಜೀವನದ ಬಗ್ಗೆ ಜುಗುಪ್ಸೆ ಉಂಟುಮಾಡಿತು. ಆಗ, ನೆನಪಾಗಿದ್ದು ಊರು ಮತ್ತು ಅಲ್ಲಿದ್ದ ನನ್ನ ಜಮೀನು!’
ಕೆಂಗೇರಿ ಹೋಬಳಿಯ ಅಗರದ ಮುನಿಮಾರಪ್ಪನ ಮುಂದರೆ ಕೂತರೆ ಹೀಗೆ ಕನಸಿನಂತೆ ಚದುರಿ ಹೋದ ಬದುಕಿನ ಕಹಿ ಅನುವಭವಗಳು ಬಿತ್ತರವಾಗುತ್ತದೆ.
ಹಳ್ಳಿಯಿಂದ ಪಟ್ಟಣಕ್ಕೆ ಹೋಗುವುದು. ನಂತರ ಅಲ್ಲಿರುವ ಐಟಿ ಕಂಪೆನಿಯೊಂದರಲ್ಲಿ ಕೆಲಸ ಗಿಟ್ಟಿಸಿಕೊಳ್ಳುವುದು. ತಿಂಗಳಾದರೆ ಲಕ್ಷ ಲಕ್ಷ ಸಂಬಳ ಎಣಿಸುತ್ತಾ, ವೀಕೆಂಡ್‌ನಲ್ಲಿ ಮೋಜು-ಮಸ್ತಿ ಮಾಡಿಕೊಂಡು “ಲೈಫು ಇಷ್ಟೇನೇ’ ಅಂತಾ ಗೊಣಗುವುದೆಲ್ಲಾ ಈಗ “ಟ್ರೆಂಡ್’ ಆಗಿದೆ. ಹೀಗಿರುವಾಗ ಮುನಿಮಾರಪ್ಪ ಅಪವಾದವಾಗಿ ಕಂಡರು. ಈ “ಅಪವಾದ’ ವ್ಯಕ್ತಿಯನ್ನು ಹಿಡಿದು ಮಾತಿಗೆಳೆದಾಗ, ತೆರೆದುಕೊಂಡಿದ್ದು ಅಪ್ಪಟ ನೆಮ್ಮದಿಯ ಬದುಕು.
“ಮೂರು ವರ್ಷಗಳ ಹಿಂದೆ. ಐಟಿ ಕಂಪೆನಿಯಲ್ಲಿ ಸಾಫ್ಟ್ವೇರ್ ಎಂಜಿನಿಯರ್ ಆಗಿದ್ದೆ. ನೆಮ್ಮದಿ ಇರಲಿಲ್ಲ. ಮನೆಯಲ್ಲಿ ಮುನಿಸು, ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳಲು ಶುರುಮಾಡಿದವು. ಯವ್ವನದಲ್ಲೇ ಒತ್ತಡದ ಬದುಕು ಅಕ್ಷರಶಃ ಜೀವನವನ್ನು ಬೇಡವಾಗಿಸಿತ್ತು. ದೃಢನಿರ್ಧಾರಕ್ಕಾಗಿ ಹಾತೊರೆಯುತ್ತಿದ್ದೆ. ಕಾಲ ಕೂಡಿಬಂದಿರಲಿಲ್ಲ. ಅಷ್ಟರಲ್ಲಿ ವ್ಯಕ್ತಿತ್ವ ವಿಕಸನದ ಕಾರ್ಯಾಗಾರವೊಂದರಲ್ಲಿನ ಮಾತುಗಳು ಜೀವನಕ್ಕೆ ತಿರುವು ನೀಡಿತು’ ಎಂದು ಮೆಲುಕುಹಾಕಿದರು.
ಮೂರುಪಟ್ಟು ಸಂಬಳ!
ಅಲ್ಲಿಂದ ಮುನಿಮಾರಪ್ಪ ನೇರವಾಗಿ ಕೆಲಸಕ್ಕೆ ರಾಜೀನಾಮೆ ಕೊಟ್ಟು, ಅಗರದಲ್ಲಿರುವ ತಮ್ಮ ಜಮೀನಿಗೆ ಹೋದರು. ಕೃಷಿಯ ಎ.ಬಿ.ಸಿ.ಡಿ ತಿಳಿಯದೆ ಆರಂಭದಲ್ಲಿ ಹಣ ಹೂಡಿ ಕೈಸುಟ್ಟುಕೊಂಡರು. ಇದನ್ನು ನೋಡಿ ನಕ್ಕರು. ಮನಸ್ಸಿನಲ್ಲಿ ನಿರ್ಧಾರ ಗಟ್ಟಿಗೊಂಡಿತು. ಕೃಷಿಯ ಒಳತೋಟಿಗಳನ್ನು ಅರಿತರು. ಈಗ ಐಟಿ ಸಂಬಳಕ್ಕಿಂತ ಮೂರುಪಟ್ಟು ಅಂದರೆ ತಿಂಗಳಿಗೆ ಮೂರು ಲಕ್ಷ ರೂ. ಸಂಬಳ ಎಣಿಸುತ್ತಿದ್ದೇನೆ ಎಂದು ಎದೆಯುಬ್ಬಿಸಿ ಹೇಳುತ್ತಾರೆ ಮುನಿಯಪ್ಪ.
ಅಂದು ಸಾಫ್ಟ್ವೇರ್; ಇಂದು ಕ್ಯಾಪ್ಸಿಕಮ್
ಅಂದಹಾಗೆ, ಈ ಹಿಂದೆ ವಿದೇಶಿ ಕಂಪೆನಿಗಳಿಗೆ ದುಡಿಯುತ್ತಿದ್ದ ಮುನಿಯಪ್ಪ, ಈಗ ಅದೇ ವಿದೇಶಿಗರಿಗೆ ತಮ್ಮ ಜಮೀನಿನಲ್ಲಿ ಬೆಳೆದ ಬಣ್ಣ-ಬಣ್ಣದ ಕ್ಯಾಪ್ಸಿಕಮ್ ಕಳುಹಿಸುತ್ತಿದ್ದಾರೆ.
ಇವರದು ಒಟ್ಟು ಹತ್ತು ಎಕರೆ ಜಮೀನು. ಮೊದಲು ತೆಂಗು, ಸಪೋಟ, ರಾಗಿ, ಜೋಳ ಹೀಗೆ ನೆರೆಹೊರೆಯವರನ್ನು ಅನುಸರಿಸುತ್ತಿದ್ದರು. ಸ್ನೇಹಿತರೊಬ್ಬರ ಸಲಹೆ ಮೇರೆಗೆ ಜಬೇìರಾ ಬೆಳೆದರು. ಅದೂ ನಿರಾಸೆ ಮೂಡಿಸಿತು. ಒಮ್ಮೆ ತೋಟಗಾರಿಕೆ ಇಲಾಖೆ ಅಧಿಕಾರಿಗಳ ಸಂಪರ್ಕ ಬೆಳೆಯಿತು. ಅವರಿಂದ ಕ್ಯಾಪ್ಸಿಕಾಮ್ ರಫ್ತುದಾರರ ಪರಿಚಯವಾಯಿತು. ನಂತರ ಒಂದು ಎಕರೆಯಲ್ಲಿ ಸರ್ಕಾರದಿಂದ ಶೇ. 50ರಷ್ಟು ಸಬ್ಸಿಡಿಯಲ್ಲಿ ಪಾಲಿಹೌಸ್ ಹಾಕಿ “ಕಲರ್ ಕ್ಯಾಪ್ಸಿಕಮ್’ಗೆ ಕೈಹಾಕಿದರು. ಕೇವಲ ಮೂರು ತಿಂಗಳಲ್ಲಿ ಹತ್ತು ಲಕ್ಷ ರೂ. ಆದಾಯ ಜೇಬು ತುಂಬಿತಂತೆ.
“ಆಗ ಕೈತುಂಬಾ ಸಂಬಳ ಪಡೆಯುತ್ತಿದ್ದೆ. ಆದರೆ, ಮನಸ್ಸಿನಲ್ಲಿ ಕೊರಗು ಇತ್ತು. ಈಗ ಸಂಬಳ ಕೊಡುತ್ತಿದ್ದೇನೆ ಎಂಬ ತೃಪ್ತಿ ಇದೆ. ಪ್ರತಿ ಸೀಜನ್‌ಗೆ ಆರು ಲಕ್ಷ ಸಂಬಳ ಕೊಡುತ್ತಿದ್ದೇನೆ. ಎರಡು ಕುಟುಂಬಗಳಿಗೆ ಆಶ್ರಯ ನೀಡಿ, ಕಾಯಂ ಆಗಿ ಕೆಲಸ ಕೊಟ್ಟು ತಿಂಗಳಿಗೆ ತಲಾ 15 ಸಾವಿರ ರೂ. ಕೂಲಿ ನೀಡುತ್ತೇನೆ’ ಎಂದು ಹೇಳುವಾಗ ಅವರ ಮುಖದಲ್ಲಿ ಸಂತೃಪ್ತಿಯ ಭಾವ ಎದ್ದುಕಾಣುತ್ತಿತ್ತು.
10 ತಿಂಗಳ ಬೆಳೆ ಕ್ಯಾಪ್ಸಿಕಮ್. ಮೂರು ತಿಂಗಳಲ್ಲಿ 20 ಟನ್ ಇಳುವರಿಯಿಂದ 10 ಲಕ್ಷ ಆದಾಯ ಬಂದಿದೆ. ಇನ್ನೂ 15-20 ಟನ್ ಇಳುವರಿ. ಪಾಲಿಹೌಸ್‌ನಲ್ಲಿ ಬೆಳೆಗಳ ರಕ್ಷಣೆ ಆಗುತ್ತದೆ. ಇದರಿಂದ ಇಳುವರಿ ಹೆಚ್ಚು. ಮುಂದಿನ ದಿನಗಳಲ್ಲಿ ಇದನ್ನು ವಿಸ್ತರಿಸುವ ಗುರಿಯೂ ಇದೆ.
ಮುನಿಮಾರಪ್ಪರ ಬದುಕು ಸುಮಾರು ಜನರಿಗೆ ಸ್ಪೂರ್ತಿಯಾಗಿದೆ. ಹಾಗಾಗಿ ಅನುಸರಿಸುತ್ತಿದ್ದಾರೆ. ಊರು-ಕೇರಿಗಳನ್ನು ತೊರೆದು ನಗರದಲ್ಲಿ ಲಕ್ಷಾಂತರ ಸಂಬಳ ಎಣಿಸುತ್ತಿದ್ದವರು, ನೆಮ್ಮದಿಗಾಗಿ ಕೃಷಿಯತ್ತ ಮುಖಮಾಡುತ್ತಿದ್ದಾರೆ. ನಿತ್ಯ ಕನಿಷ್ಠ ಇಬ್ಬರು ಅವರ ಜಮೀನಿಗೆ ಭೇಟಿ ನೀಡುತ್ತಾರೆ ಅಂದರೆ ಬದುಕು ಸಾರ್ಥಕತೆಯ ಪಥದಲ್ಲಿದೆ ಇದೆ ಅಂತಲೇ ಅರ್ಥ.
ವಿಜಯಕುಮಾರ್ ಚಂದರಗಿ