Advertisement

ಟ್ಯಾಂಕರ್‌ ಪಡೆಯಲು ನಗರಸಭೆ ಹರಸಾಹಸ !

12:30 AM May 12, 2019 | Team Udayavani |

ಉಡುಪಿ: ನಗರಸಭೆ ವ್ಯಾಪ್ತಿ, ಹೊರವಲಯದ ಕೆಲವು ಬಾವಿಗಳಲ್ಲಿ ನೀರಿನ ಲಭ್ಯತೆ ಇದ್ದರೂ ಅಗತ್ಯವಿರುವಷ್ಟು ಟ್ಯಾಂಕರ್‌ಗಳು ಲಭಿಸದೆ ಇರುವುದರಿಂದ ನಗರಸಭೆಗೆ ಸಂಕಷ್ಟ ಎದುರಾಗಿದೆ !.

Advertisement

ನದಿಯಲ್ಲಿರುವ ದೊಡ್ಡ ಹಳ್ಳಗಳಿಂದ ಪಂಪ್‌ಗ್ಳ ಮೂಲಕ ಬಜೆ ಡ್ಯಾಂಗೆ ನೀರು ಹಾಯಿಸಲಾಗುತ್ತಿದೆ. ಈ ಮೂಲಕ ನೀರು ಹಾಯಿಸುವುದರಿಂದ ಮುಂದಿನ 15-20 ದಿನಗಳವರೆಗೆ ರೇಷನಿಂಗ್‌ ಮೂಲಕ ನೀರು ನೀಡಲು ಸಾಧ್ಯ ಎಂಬ ವಿಶ್ವಾಸ ಅಧಿಕಾರಿಗಳದ್ದು. ಇನ್ನೊಂದೆಡೆ ನಗರಸಭೆ ಟ್ಯಾಂಕರ್‌ಗಳ ಮೂಲಕವೂ ನೀರು ವಿತರಣೆಯನ್ನು ಶುಕ್ರವಾರ ಆರಂಭಿಸಿದೆ. ಆದರೆ ಈಗ ನಗರಸಭೆಗೆ ಟ್ಯಾಂಕರ್‌ಗಳ ಕೊರತೆ ಎದುರಾಗಿದೆ! ಈ ಕೊರತೆ ಕಾರಣ ಟ್ಯಾಂಕರ್‌ ಸ್ವಾಧೀನಕ್ಕೆ ಜಿಲ್ಲಾಧಿಕಾರಿ ಆರ್‌ಟಿಒಗೆ ಸೂಚಿಸಿದ್ದಾರೆ. ಇದರಿಂದ 15 ಟ್ಯಾಂಕರ್‌ ಲಭ್ಯವಾಗಿವೆ. ಆದರೂ ನಗರಸಭೆ ಬೇಡಿಕೆಗೆ ತಕ್ಕಷ್ಟು ಲಭ್ಯವಾಗಿಲ್ಲ.

ಜಿಪಿಎಸ್‌ ಅಳವಡಿಕೆ
ನಗರಸಭೆಯಿಂದ ನೀರು ಪೂರೈಕೆಗೆ ಬಳಸಲಾಗುವ ಎಲ್ಲ ವಾಟರ್‌ ಟ್ಯಾಂಕರ್‌ಗಳಿಗೆ ಜಿಪಿಎಸ್‌ ಅಳವಡಿಸಲಾಗಿದೆ. ಆದರೆ ಶನಿವಾರ ಕೆಲವು ಟ್ಯಾಂಕರ್‌ಗಳು ನಗರಸಭೆಯ ನಿಯಂತ್ರಣಕ್ಕೆ ಸಿಗಲಿಲ್ಲ ಎನ್ನಲಾಗಿದೆ.

ಲೀಟರ್‌ಗೆ 25 ಪೈಸೆ ಪಾವತಿ
ಟ್ಯಾಂಕರ್‌ಗಳಿಗೆ ನಗರಸಭೆ ಲೀಟರ್‌ಗೆ 25 ಪೈಸೆಯಂತೆ ಪಾವತಿ ಮಾಡುತ್ತಿದೆ. ಶನಿವಾರ 10 ಟ್ಯಾಂಕರ್‌ಗಳಿಂದ ಮಾತ್ರ ನೀರು ಪೂರೈಕೆ ಸಾಧ್ಯವಾಗಿದೆ. ಉಳಿದ ಕೆಲವು ಟ್ಯಾಂಕರ್‌ಗಳು ಖಾಸಗಿಯಾಗಿ ನೀರು ಪೂರೈಸುತ್ತಿವೆ. ಇನ್ನು ಕೆಲವು ಟ್ಯಾಂಕರ್‌ಗಳು ನಗರಸಭೆ ಸದಸ್ಯರು, ಶಾಸಕರ ಮುತುವರ್ಜಿಯ ಮೇರೆಗೆ ನೀರು ವಿತರಿಸುತ್ತಿವೆ.

ನೀರಿನ ಮೂಲ ಎಲ್ಲಿ?
ನಗರಸಭೆಯಿಂದ ನೀರು ಪೂರೈಕೆ ಮಾಡುವ ಟ್ಯಾಂಕರ್‌ಗಳಿಗೆ ಪ್ರಸ್ತುತ ವಡಂಭಾಂಡೇಶ್ವರ, ಕೊಡವೂರಿನ ಉದ್ದಿನ ಹಿತ್ಲು, ಶಂಕರ ನಾರಾಯಣ ದೇವಸ್ಥಾನ ಸಮೀಪದ ಬಾವಿಯಿಂದ ಹಾಗೂ ಮಣಿಪಾಲದ ಜಿಎಸ್‌ಎಲ್‌ಆರ್‌ನಿಂದ ನೀರು ತುಂಬಿಸಲಾಗುತ್ತಿದೆ.

Advertisement

ಅಧಿಕಾರವಿಲ್ಲದ ಸದಸ್ಯರ ಅಸಹಾಯಕತೆ
ನಗರಸಭೆ ಚುನಾವಣೆ ಫ‌ಲಿತಾಂಶ ಪ್ರಕಟವಾಗಿ ಎಂಟು ತಿಂಗಳು ಕಳೆದರೂ ನಗರಸಭೆ ಸದಸ್ಯರು ಪ್ರಮಾಣವಚನ ಕೂಡ ತೆಗೆದುಕೊಂಡಿಲ್ಲ. ಆದರೆ ಆದರೆ ವಾರ್ಡ್‌ನ ಜನತೆ ಸದಸ್ಯರ ಬೆನ್ನು ಬಿದ್ದಿದ್ದಾರೆ. ನೀರಿಗಾಗಿ ಅಧಿಕಾರಿಗಳೊಂದಿಗೆ ಜಿದ್ದಿಗೆ ಬಿದ್ದ ಹಲವು ಸದಸ್ಯರು ಕೊನೆಗೆ ತಾವೇ ಸ್ವಂತ ಖರ್ಚಿನಿಂದ ಟ್ಯಾಂಕರ್‌ ನೀರು ಪೂರೈಕೆ ಮಾಡುತ್ತಿದ್ದಾರೆ. ತಡರಾತ್ರಿವರೆಗೂ ಟ್ಯಾಂಕರ್‌ನೊಂದಿಗೆ ವಾರ್ಡ್‌ಗಳಿಗೆ ಸುತ್ತಾಡುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next